*ಕರ್ನಾಟಕ-ಮಹಾರಾಷ್ಟ್ರ ಗಡಿಯ ಅರಣ್ಯದಲ್ಲಿ ಪ್ರಾಚೀನ ಕಾಲದ ಜೈನ ಸೀಮೆ ಕಲ್ಲು ಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ಬಳಿ ಮಹಾರಾಷ್ಟ್ರದ ಚಂದಗಡ ತಾಲ್ಲೂಕಿನ ನಾಗನವಾಡಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಈಚೆಗೆ ರಸ್ತೆ ಕಾಮಗಾರಿ ನಡೆಯುವಾಗ ಪ್ರಾಚೀನ ಕಾಲದ ಜೈನ ಸೀಮೆ ಕಲ್ಲು ಪತ್ತೆಯಾಗಿದೆ. ಈ ಸೀಮೆ ಕಲ್ಲನ್ನು ಸ್ಥಳೀಯರು ಸಂರಕ್ಷಿಸಿ ನಾಗನವಾಡಿ ಗ್ರಾಮದ ಹೊರವಲಯದಲ್ಲಿ ಇರಿಸಿದ್ದಾರೆ.
“ನಾಗನವಾಡಿ ಗ್ರಾಮದಿಂದ ವಾಳಕುಳಿ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾಮಗಾರಿಗೆ ಭೂಮಿ ಅಗೆಯುವಾಗ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದ ಕಾರ್ಮಿಕರಿಗೆ ಈ ವಿಗ್ರಹದ ಮಹತ್ವ ಮತ್ತು ಹಿನ್ನೆಲೆಯ ಬಗ್ಗೆ ಅರಿವಿಲ್ಲದ್ದರಿಂದ ಅವರು ಈ ವಿಗ್ರಹವನ್ನು ರಸ್ತೆ ಬದಿಯ ಮರದ ಕೆಳಗೆ ಇಟ್ಟು ತಮ್ಮ ಕಾಮಗಾರಿಯನ್ನು ಮುಂದುವರೆಸಿದ್ದರು.
ಮರುದಿನ ಈ ಮಾರ್ಗದಲ್ಲಿ ವಾಯುವಿಹಾರಕ್ಕೆ ತೆರಳಿದಾಗ ವಿಗ್ರಹವನ್ನು ಗಮನಿಸಿದ ತಾವು ನಮ್ಮ ಪರಿಚಯದವರ ಮೂಲಕ ಖಾನಾಪುರ ತಾಲ್ಲೂಕಿನ ಇಟಗಿ ಗ್ರಾಮದ ಇತಿಹಾಸ ಸಂಶೋಧಕ ಡಾ.ಬಾಹುಬಲಿ ಹಂದೂರ ಅವರನ್ನು ಸಂಪರ್ಕಿಸಿ ಅವರಿಗೆ ವಿಗ್ರಹ ಪತ್ತೆಯಾದ ವಿಷಯವನ್ನು ವಿವರಿಸಲಾಗಿತ್ತು ಈ ಮಾಹಿತಿ ತಿಳಿದ ಕೂಡಲೇ ನಾಗನವಾಡಿ ಗ್ರಾಮಕ್ಕೆ ಭೇಟಿ ನೀಡಿದ ಡಾ.ಹಂದೂರ ವಿಗ್ರಹವನ್ನು ಪರಿಶೀಲಿಸಿದ್ದಾರೆ. ಅವರ ಸೂಚನೆಯಂತೆ ಭೂಗರ್ಭದಲ್ಲಿದ್ದ ಈ ವಿಗ್ರಹ ರಸ್ತೆ ಕೆಲಸಕ್ಕಾಗಿ ಭೂಮಿ ಅಗೆಯುವಾಗ ಪತ್ತೆಯಾದ ವಿಷಯವನ್ನು ಪುರಾತತ್ವ ಇಲಾಖೆಗೆ ಮುಟ್ಟಿಸಿದ್ದು, ಮುಂದಿನ ಅಧ್ಯಯನಕ್ಕಾಗಿ ವಿಗ್ರಹವನ್ನು ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗುವುದು” ಎಂದು ನಾಗನವಾಡಿ ಗ್ರಾಮದ ಶಿಕ್ಷಕ ದಶರಥ ಸುತಾರ ವಿವರಿಸಿದ್ದಾರೆ.
ವಿಗ್ರಹ ಪತ್ತೆಯಾದ ಮಾಹಿತಿ ಲಭ್ಯವಾಗುತ್ತಲೇ ನಾಗನವಾಡಿ ಗ್ರಾಮಕ್ಕೆ ಭೇಟಿ ನೀಡಿರುವ ಡಾ.ಬಾಹುಬಲಿ ಹಂದೂರ ವಿಗ್ರಹವನ್ನು ವೀಕ್ಷಿಸಿದ್ದಾರೆ. ಬಳಿಕ ವಿಗ್ರಹದ ಇತಿಹಾಸದ ಬಗ್ಗೆ ವಿವರಿಸಿರುವ ಅವರು, “ಈ ವಿಗ್ರಹವನ್ನು ಇತಿಹಾಸದ ಭಾಷೆಯಲ್ಲಿ ಜೈನ ಸೀಮೆ ಕಲ್ಲು ಎಂದು ಕರೆಯಲಾಗುತ್ತದೆ. ಇದು ಕ್ರಿ.ಶ. 10ನೆಯ ಶತಮಾನದ ಕಾಲದ್ದಾಗಿದೆ. ನಾಗನವಾಡಿ ಹಾಗೂ ಸುತ್ತಲಿನ ಪ್ರದೇಶವನ್ನು 10ನೇ ಶತಮಾನದಲ್ಲಿ ಸವದತ್ತಿಯ ರಟ್ಟರು ಆಳ್ವಿಕೆ ಮಾಡಿದ್ದರು. ಅವರು ತಮ್ಮ ರಾಜ್ಯದ ಸೀಮೆಯನ್ನು ಗುರುತಿಸಲು ಈ ಸೀಮೆ ಕಲ್ಲನ್ನು ಅಳವಡಿಸಿದ್ದರು” ಎಂದು ಮಾಹಿತಿ ನೀಡಿದ್ದಾರೆ.
“ನಾಗನವಾಡಿ ಬಳಿ ಪತ್ತೆಯಾಗಿರುವ ಸೀಮೆ ಕಲ್ಲು ವರ್ಧಮಾನ ಮಹಾವೀರರನ್ನು ಹೋಲುತ್ತಿದ್ದು, ಜೈನ ಧರ್ಮಕ್ಕೆ ಸೇರಿದ ಅತ್ಯಂತ ಮಹತ್ವದ ಪ್ರಾಚೀನ ಕುರುಹು ಇದಾಗಿದೆ. ಪತ್ತೆಯಾಗಿರುವ ಪ್ರಾಚೀನ ಶಿಲ್ಪದ ಮಧ್ಯಭಾಗದಲ್ಲಿ ತೀರ್ಥಂಕರರ ಖಡ್ಗಾಸನದ ಮೂತರ್ಿಯ ಕೆತ್ತನೆ ಇದೆ. ಅದರ ಪಕ್ಕದಲ್ಲಿ ಒಂದೆಡೆ ಚಂದ್ರ ಹಾಗೂ ಇನ್ನೊಂದೆಡೆ ಸೂರ್ಯನ ಚಿತ್ರಗಳಿವೆ. ಪಕ್ಕದಲ್ಲಿ ಕತ್ತಿಯ ಕೆತ್ತನೆ ಇದ್ದು, ಇದರ ಕೆಳಗಡೆಯಲ್ಲಿ ಎತ್ತಿನ ಪ್ರತಿಕೃತಿ ಇದೆ. ಇದು ಒಂದು ಸೀಮೆಕಲ್ಲಾಗಿದ್ದು, ಶತ್ರುಗಳು ಈ ಕಲ್ಲನ್ನು ದಾಟಿ ಮೇರೆಯನ್ನು ಸ್ವಾಧೀನ ಮಾಡಿಕೊಂಡರೆ ಅವರು ಯುದ್ದಕ್ಕೆ ಬರಬೇಕು. ಮತ್ತು ಮೇರೆ ಕಲ್ಲನ್ನು ಹಾಳುಮಾಡಿದರೆ ಅಂಥವರಿಗೆ ದಂಡನೆಯನ್ನು ಕೊಡಲಾಗುತ್ತದೆ ಎಂಬ ಸಂಕೇತವಾಗಿ ಖಡ್ಗವನ್ನು ಕೆತ್ತಲಾಗಿದೆ. ಇದು ಮೂರು ಅಡಿ ಎತ್ತರವಾಗಿದೆ. ಚಂದಗಡ ತಾಲ್ಲೂಕಿನ ಭೋಗೋಳಿ ಹಾಗೂ ಇಬ್ರಾಹಿಂಪುರಗಳಲ್ಲಿ ಪ್ರಾಚೀನ ಜೈನ ದೇವಾಲಯಗಳಿವೆ. ನಾಗನವಾಡಿ, ಕೋರಜ, ಕುರ್ತನವಾಡಿ ಹಾಗೂ ಅಕ್ಕಪಕ್ಕದ ಗ್ರಾಮಗಳ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಲವು ದೇವತೆಗಳ ಶಿಲೆಗಳು ಕಂಡುಬರುತ್ತವೆ. ಈ ದೇವತೆಗಳ ವಿಗ್ರಹಗಳನ್ನು ನೋಡಿದಾಗ ಈ ಪ್ರದೇಶ ಹಿಂದೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿತ್ತು ಎಂಬುದು ತಿಳಿದುಬರುತ್ತದೆ” ಎಂದು ಡಾ.ಬಾಹುಬಲಿ ಹಂದೂರ ವಿವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



