CrimeKannada NewsKarnataka NewsLatest

*3 ತಿಂಗಳ ಚಿಕಿತ್ಸೆ ಬಳಿಕ ಬ್ರೈನ್ ಡೆಡ್*: *ಏಕೈಕ ಮಗನ ಅಂಗಾಂಗ ದಾನ ಮಾಡಿದ ಪೋಷಕರು*

ಪ್ರಗತಿವಾಹಿನಿ ಸುದ್ದಿ: ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಸತತ ಮೂರು ತಿಂಗಳ ಚಿಕಿತ್ಸೆಯ ಬಳಿಕ ಬ್ರೈನ್ ಡೆಡ್ ಸ್ಥಿತಿಗೆ ತಲುಪಿ ಮೃತಪಟ್ಟಿದ್ದಾರೆ. ಇದ್ದ ಏಕೈಕ ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನಲ್ಲಿ ಐಟಿ ಉದ್ಯೋಗದಲ್ಲಿದ್ದ ಹಾಸನ ಮೂಲದ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಕಟ್ಟೆ ಗ್ರಾಮದ ಚಂದ್ರೇಗೌಡ ಹಾಗೂ ಶಿವಮ್ಮ ದಂಪತಿಯ ಏಕೈಕ ಪುತ್ರ ರವಿಕುಮಾರ್ (31) ಮೃತ ಯುವಕ.

ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರವಿಕುಮಾರ್, ರಜೆಗಾಗಿ ಊರಿಗೆ ಬಂದಿದ್ದರು. ಜುಲೈ 6ರಂದು ಹೊಳೆನರಸೀಪುರ ತಾಲೂಕಿನ ಪರಸನಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಗಾಯಗಳಾಗಿದ್ದವು.

ಅಪಘಾತದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ವೈದ್ಯರ ತಂಡ ಸತತವಾಗಿ ಚಿಕಿತ್ಸೆ ನೀಡಿದರೂ ರವಿಕುಮಾರ್ ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ಸುಮಾರು ಮೂರು ತಿಂಗಳ ಚಿಕಿತ್ಸೆಯ ಬಳಿಕ ವೈದ್ಯರು ರವಿಕುಮಾರ್ ಬ್ರೈನ್ ಡೆಡ್ ಸ್ಥಿತಿಗೆ ತಲುಪಿರುವುದಾಗಿ ಘೋಷಿಸಿದರು. ಏಕೈಕ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಈ ಸುದ್ದಿ ಆಘಾತ ತಂದಿತ್ತು.

ಆದರೆ, ದುಃಖದ ನಡುವೆಯೂ ಮಗನ ನೆನಪನ್ನು ಶಾಶ್ವತವಾಗಿಡುವ ನಿರ್ಧಾರ ಕೈಗೊಂಡ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ರವಿಕುಮಾರ್ ಅವರ ಅಂಗಾಂಗಗಳನ್ನು ಅಗತ್ಯವಿರುವ ರೋಗಿಗಳಿಗೆ ದಾನ ಮಾಡಲು ಮುಂದಾದರು.

ರಾಜ್ಯ ಸರ್ಕಾರದ ಅಧಿಕೃತ ಅಂಗಾಂಗ ದಾನ ಸಂಸ್ಥೆಯಾದ ಜೀವಸಾರ್ಥಕತೆ ಮೂಲಕ ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಯಿತು. ಈ ಮೂಲಕ ಅಂಗಾಂಗಗಳ ಅಗತ್ಯವಿದ್ದ ಹಲವು ರೋಗಿಗಳಿಗೆ ಹೊಸ ಬದುಕಿನ ಅವಕಾಶ ದೊರೆಯುವಂತಾಗಿದೆ. ಇಸದಸ ಏಕೈಕ ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ ಅಂಗಾಂಗ ದಾನಕ್ಕೆ ಮುಂದಾದ ಕುಟುಂಬದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

*ಚಲಿಸುತ್ತಿದ್ದ ಬಸ್ ಬ್ರೇಕ್ ಫೇಲ್; ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಬಸ್* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button