Belagavi NewsBelgaum NewsKannada NewsKarnataka NewsLatestPolitics

*4 ಎಕರೆ ಸಾರ್ವಜನಿಕ ಆಟದ ಮೈದಾನ, 2 ಎಕರೆ ಕೆರೆ ನಿರ್ಮಾಣಕ್ಕೆ ಅಧಿಕೃತ ಆದೇಶ ಹಸ್ತಾಂತರಿಸಿದ ಲಕ್ಷ್ಮೀ ಹೆಬ್ಬಾಳಕರ್*

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳಗಾ (ಯು) ಗ್ರಾಮದ ಯುವಜನತೆ, ಕ್ರೀಡಾಪಟುಗಳು ಹಾಗೂ ರೈತರ ಹಲವು ವರ್ಷಗಳ ಬೇಡಿಕೆಯಾಗಿದ್ದ ಸಾರ್ವಜನಿಕ ಆಟದ ಮೈದಾನ ಮತ್ತು ಕೆರೆ ನಿರ್ಮಾಣಕ್ಕೆ ಇದೀಗ ಅಧಿಕೃತವಾಗಿ ಚಾಲನೆ ದೊರೆತಿದೆ.

ಗ್ರಾಮದ ಯುವಜನತೆ ಹಾಗೂ ಕ್ರೀಡಾಪಟುಗಳ ದಶಕಗಳ ಕನಸಾಗಿದ್ದ 4 ಎಕರೆ ಸಾರ್ವಜನಿಕ ಆಟದ ಮೈದಾನ ಹಾಗೂ ಗ್ರಾಮದ ಕೃಷಿ ಮತ್ತು ಪರಿಸರಕ್ಕೆ ಮಹತ್ವದ ಆಸರೆಯಾಗಲಿರುವ 2 ಎಕರೆ ಕೆರೆ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳಿಂದ ಅಧಿಕೃತ ಆದೇಶ ಪತ್ರವನ್ನು ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಪಡೆದುಕೊಂಡು, ಶುಕ್ರವಾರ ಗ್ರಾಮದ ಪಂಚ ಕಮಿಟಿಯ ಸದಸ್ಯರಿಗೆ ಹಸ್ತಾಂತರಿಸಿದರು.

ಅಧಿಕೃತ ಆದೇಶ ಪತ್ರ ಹಸ್ತಾಂತರದ ಸಂದರ್ಭದಲ್ಲಿ ಗ್ರಾಮದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿತ್ತು. ಹಲವು ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಬೇಡಿಕೆ ಈಡೇರುತ್ತಿರುವುದರಿಂದ ಗ್ರಾಮಸ್ಥರು, ಯುವಕರು, ಕ್ರೀಡಾಪಟುಗಳು ಹಾಗೂ ರೈತರಲ್ಲಿ ಹರ್ಷ ವ್ಯಕ್ತವಾಯಿತು.

ಗ್ರಾಮಸ್ಥರ ಮುಖದಲ್ಲಿ ಸಂತೃಪ್ತಿ; ಯುವಕರಲ್ಲಿ ಹೊಸ ಉತ್ಸಾಹ

ಆದೇಶ ಪತ್ರ ಹಸ್ತಾಂತರಿಸಿದ ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಸುಳಗಾ ಗ್ರಾಮದ ಜನರ ಮುಖದಲ್ಲಿ ಕಾಣಿಸಿದ ತೃಪ್ತಿ, ಹಿರಿಯರ ಆಶೀರ್ವಾದ ಮತ್ತು ಯುವಕರ ಕಣ್ಣಲ್ಲಿದ್ದ ಉತ್ಸಾಹವೇ ತಮ್ಮ ಸಾರ್ವಜನಿಕ ಸೇವಾ ಜೀವನಕ್ಕೆ ದೊರೆತ ಅತ್ಯಂತ ದೊಡ್ಡ ಉಡುಗೊರೆ ಎಂದು ಹೇಳಿದರು.

ಗ್ರಾಮಸ್ಥರು ತಮ್ಮ ಮೇಲೆ ತೋರಿದ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕ ಜೀವನದಲ್ಲಿ ಅಧಿಕಾರ ಅಥವಾ ಸ್ಥಾನಮಾನಕ್ಕಿಂತ ಜನರ ಬದುಕಿನಲ್ಲಿ ಆಗುವ ಸಕಾರಾತ್ಮಕ ಬದಲಾವಣೆಯೇ ನಿಜವಾದ ಸಂತೃಪ್ತಿ ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಪ್ರೀತಿಯಿಂದ ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡ ಲಕ್ಷ್ಮೀ ಹೆಬ್ಬಾಳಕರ್ ಅವರು, ಗ್ರಾಮದ ರೈತರು, ನರೇಗಾ ಕಾರ್ಮಿಕರು, ಯುವಕ ಮಂಡಳದ ಸದಸ್ಯರು ಹಾಗೂ ಕ್ರೀಡಾಪಟುಗಳಿಂದ ಅಭಿನಂದನೆಗಳನ್ನು ಸ್ವೀಕರಿಸಿದರು.

ಗ್ರಾಮಸ್ಥರ ಪ್ರೀತಿ, ಕೃತಜ್ಞತೆ ಮತ್ತು ಕಣ್ಣಂಚಿನಲ್ಲಿ ಕಂಡ ಆನಂದಭಾಷ್ಪ ತಮ್ಮ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ಹೇಳಿದರು.

“ಶಾಸಕಿಯಾಗಿ ಮಾತ್ರವಲ್ಲ, ಗ್ರಾಮದ ಪ್ರತಿಯೊಂದು ಕುಟುಂಬದ ಮಗಳಾಗಿ ನಿಲ್ಲುತ್ತೇನೆ”

“ನಾನು ಕ್ಷೇತ್ರದ ಶಾಸಕಿಯಾಗಿ ಮಾತ್ರವಲ್ಲ, ಸುಳಗಾ ಗ್ರಾಮದ ಪ್ರತಿಯೊಂದು ಕುಟುಂಬದ ಮಗಳಾಗಿ ನಿಮ್ಮೊಂದಿಗೆ ನಿಲ್ಲುತ್ತೇನೆ” ಎಂದು ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.

“ಈ ಮೈದಾನದಲ್ಲಿ ನಾಳೆ ನಮ್ಮ ಗ್ರಾಮದ ಪ್ರತಿಭೆಗಳು ಬೆಳೆದು ಸಾಧನೆ ಮಾಡಬೇಕು. ಕ್ರೀಡೆಯಲ್ಲಿ ನಮ್ಮ ಗ್ರಾಮದ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು. ಈ ಕೆರೆಯಿಂದ ಗ್ರಾಮದ ಹೊಲ-ಗದ್ದೆಗಳು ಹಸಿರಾಗಬೇಕು. ರೈತರಿಗೆ ಹಾಗೂ ಗ್ರಾಮಕ್ಕೆ ನೀರಿನ ಆಸರೆಯಾಗಬೇಕು ಎಂಬುದೇ ನನ್ನ ಆಶಯ” ಎಂದು ಅವರು ಹೇಳಿದರು.

ಆಟದ ಮೈದಾನ ನಿರ್ಮಾಣದಿಂದ ಗ್ರಾಮದ ಮಕ್ಕಳಿಗೆ ಹಾಗೂ ಯುವಕರಿಗೆ ಕ್ರೀಡಾ ಚಟುವಟಿಕೆಗಳಿಗೆ ಸೂಕ್ತ ಸ್ಥಳ ದೊರೆಯಲಿದ್ದು, ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಅನುಕೂಲವಾಗಲಿದೆ. ಅದೇ ರೀತಿ ಕೆರೆ ನಿರ್ಮಾಣವು ಗ್ರಾಮದ ಕೃಷಿ ಚಟುವಟಿಕೆಗಳಿಗೆ ಹಾಗೂ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

“ಚುನಾವಣೆ ಬಂದಾಗ ಮಾತ್ರ ಬರುವವರ ಮಾತಿಗೆ ಮರುಳಾಗಬೇಡಿ”

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಶ್ರಮ ನಿರಂತರವಾಗಿರಲಿದೆ ಎಂದು ತಿಳಿಸಿದ ಲಕ್ಷ್ಮೀ ಹೆಬ್ಬಾಳಕರ್, ಗ್ರಾಮಸ್ಥರೂ ಇದೇ ರೀತಿಯಲ್ಲಿ ತಮ್ಮೊಂದಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.

“ಚುನಾವಣೆಯ ಸಂದರ್ಭದಲ್ಲಿ ಬಂದು ಬಣ್ಣದ ಮಾತುಗಳನ್ನು ಆಡುವವರಿಗೆ ಮರುಳಾಗದೆ, ನಿರಂತರವಾಗಿ ನಿಮ್ಮೊಂದಿಗೆ ನಿಲ್ಲುವ, ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವವರೊಂದಿಗೆ ನಿಲ್ಲಬೇಕು. ನಾನು ಕೆಲಸ ಮಾಡಿದ್ದೇನೆ. ನಿಮ್ಮ ಬೆಂಬಲ ಕೇಳುವ ಹಕ್ಕು ನನಗಿದೆ. ಒಂದಾಗಿರೋಣ, ಒಟ್ಟಾಗಿ ಬೆಳೆಯೋಣ” ಎಂದು ಅವರು ಹೇಳಿದರು.

ಗ್ರಾಮದ ಅಭಿವೃದ್ಧಿ ಒಂದೇ ವ್ಯಕ್ತಿಯಿಂದ ಸಾಧ್ಯವಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿಯ ಗುರಿ ಸಾಧಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ರೈತರು, ಕಾರ್ಮಿಕರು, ಯುವಕರಿಗೆ ಅಭಿನಂದನೆ

ಸುಳಗಾ ಗ್ರಾಮದ ಅಭಿವೃದ್ಧಿಯಲ್ಲಿ ರೈತರು, ಶ್ರಮಜೀವಿ ನರೇಗಾ ಕಾರ್ಮಿಕರು, ಯುವಕ ಮಂಡಳದ ಸದಸ್ಯರು, ಕ್ರೀಡಾಪಟುಗಳು ಹಾಗೂ ಮಹಿಳೆಯರ ಸಹಕಾರವನ್ನು ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘಿಸಿದರು.

ಗ್ರಾಮದ ಪ್ರತಿಯೊಂದು ಕುಟುಂಬದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಜನರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಂದೆಯೂ ಪ್ರಾಮಾಣಿಕ ಪ್ರಯತ್ನ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಯುವರಾಜ ಕದಂ, ಬಾಳು ದೇಸೂರಕರ್, ಜಯವಂತ ಬಾಳೇಕುಂದ್ರಿ, ಮನೋಹರ್ ಬೆಳಗಾಂವ್ಕರ್, ಬಾಗಣ್ಣ ನರೋಟಿ, ಮಾಧುರಿ ಜಾಧವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ತೊಲಾಟಿ, ಬಾಳಕೃಷ್ಣ ಪಾಟೀಲ, ಯಲ್ಲಪ್ಪ ಕಲಕಾಂಬ್ಕರ್, ಯಲ್ಲಪ್ಪ ಪಾಟೀಲ ಸೇರಿದಂತೆ ಗ್ರಾಮದ ಪ್ರಮುಖರು, ಮಹಿಳೆಯರು, ಯುವಕರು, ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುಳಗಾ ಗ್ರಾಮದ ಬಹುಕಾಲದ ಬೇಡಿಕೆಗಳಿಗೆ ಅಧಿಕೃತ ಮನ್ನಣೆ ದೊರೆತಿರುವುದು ಗ್ರಾಮದ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button