Kannada NewsKarnataka NewsLatestPolitics

*ನನ್ನ ಕಾರು ಕಳ್ಳತನವಾಗಿದೆ ಎಂದ ವ್ಯಕ್ತಿ*: *ಸಿಎಂ ಮುಂದೆ ವಿಕಲಚೇತನನ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ವಿವಿಧ ಸಮಸ್ಯೆಗಳನ್ನು ನೇರವಾಗಿ ಸಿಎಂ ಗಮನಕ್ಕೆ ತಂದರು. ಕಾರು ಕಳ್ಳತನ, ಮೀಟರ್ ಬಡ್ಡಿ ಹಾಗೂ ಸಾಗುವಳಿ ಭೂಮಿಯಿಂದ ಒಕ್ಕಲೆಬ್ಬಿಸುವ ಆರೋಪ ಸೇರಿದಂತೆ ಹಲವು ಅಹವಾಲುಗಳು ಕೇಳಿಬಂದವು.

ಇದೇ ವೇಳೆ ವ್ಯಕ್ತಿಯೊಬ್ಬರು ತಮ್ಮ ಕಾರು ಕಳ್ಳತನವಾಗಿದ್ದು, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ಸಿಎಂ ಬಳಿ ಅಳಲು ತೋಡಿಕೊಂಡರು. ಪೊಲೀಸರೇ ಕಳ್ಳರೊಂದಿಗೆ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ನಡೆದಿದೆ.

ದೂರು ಆಲಿಸಿದ ಡಿ.ಕೆ.ಶಿವಕುಮಾರ್, ಪೊಲೀಸರು ದೂರು ಸ್ವೀಕರಿಸದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಈ ವೇಳೆ ದೂರು ಸ್ವೀಕರಿಸದಿರುವುದೇ ಅನುಮಾನಕ್ಕೆ ಕಾರಣವಾಗಿದೆ ಎಂದು ವ್ಯಕ್ತಿ ತಿಳಿಸಿದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಿ ಸಮಸ್ಯೆ ಬಗೆಹರಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

ಇದೇ ಕಾರ್ಯಕ್ರಮದಲ್ಲಿ ಮತ್ತೊಬ್ಬ ರೈತ ಮೀಟರ್ ಬಡ್ಡಿ ವಿಚಾರವಾಗಿ ಸಿಎಂ ಮುಂದೆ ಅಳಲು ತೋಡಿಕೊಂಡರು. ₹1.50 ಲಕ್ಷ ಸಾಲಕ್ಕೆ ಬಡ್ಡಿ ಸೇರಿಸಿ ₹50 ಲಕ್ಷ ಮೀಟರ್ ಬಡ್ಡಿ ಕೇಳಲಾಗುತ್ತಿದೆ ಎಂದು ಆರೋಪಿಸಿದರು.ಅಡಮಾನವಿಟ್ಟಿರುವ ಜಮೀನನ್ನು ವಾಪಸ್ ನೀಡಲು ಸತಾಯಿಸಲಾಗುತ್ತಿದೆ. ಸದ್ಯ ಅದೇ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರೂ, ಜಮೀನನ್ನು ಮತ್ತೆ ತಮ್ಮ ಹೆಸರಿಗೆ ಬರೆದುಕೊಡುತ್ತಿಲ್ಲ ಎಂದು ರೈತ ಮನವಿ ಮಾಡಿದರು.

ಇನ್ನು ಸಾಗುವಳಿ ಭೂಮಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ವಿಕಲಚೇತನ ವ್ಯಕ್ತಿಯೊಬ್ಬರು ಸಿಎಂ ಗಮನಕ್ಕೆ ತಂದರು. ಹಲವು ವರ್ಷಗಳಿಂದ ಅದೇ ಜಮೀನಿನಲ್ಲಿ ಕೃಷಿ ಮಾಡುತ್ತಿರುವುದಾಗಿ ತಿಳಿಸಿದರು.

ಈ ವೇಳೆ ಮಾಜಿ ಸಚಿವ ಈಶ್ವರ್ ಖಂಡ್ರೆ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅರ್ಜಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಸಂಬಂಧಿಸಿದ ಕೋರ್ಟ್ ಆದೇಶವನ್ನೂ ನೋಡಿದರು. ಕೋರ್ಟ್‌ನಲ್ಲಿ ಜಮೀನಿನಿಂದ ಖಾಲಿ ಮಾಡಬಾರದು ಎಂಬ ಆದೇಶವಿದ್ದರೆ, ಸದ್ಯಕ್ಕೆ ಅಲ್ಲೇ ಇರುವಂತೆ ಸಿಎಂ ಸೂಚಿಸಿ ವಿಕಲಚೇತನ ವ್ಯಕ್ತಿಯನ್ನು ಸಮಾಧಾನಪಡಿಸಿದರು. ಪಿರಿಯಾಪಟ್ಟಣದಲ್ಲಿ ಅಕ್ಟೋಬರ್ 3ರಂದು ಪ್ರಜಾಸೇವಾ ಅಭಿಯಾನದಡಿ ಮುಖ್ಯಮಂತ್ರಿ ಸಾರ್ವಜನಿಕರಿಂದ ನೇರವಾಗಿ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧಿಕಾರಿಗಳು ಇಲಾಖಾವಾರು ಮಳಿಗೆಗಳನ್ನು ಸ್ಥಾಪಿಸಿ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಿದ್ದರು.

*ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ ಕೆ ಶಿವಕುಮಾರ್* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button