Karnataka NewsLatestPolitics

*ನನಗೆ ಹೆಣ್ಣು ಹುಡುಕಿಕೊಡಿ ಸಿಎಂ ಸಾರ್; ಅರ್ಜಿ ಕೊಟ್ಟ ಯುವರೈತ*

ಪ್ರಗತಿವಾಹಿನಿ ಸುದ್ದಿ: “ಪಿರಿಯಾಪಟ್ಟಣ ಕ್ಷೇತ್ರದಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಸೇರಿದಂತೆ ಯಾವ ತರಹದ ಪಿಂಚಣಿಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಂಡುಬರಬಾರದು. ಅಧಿಕಾರಿಗಳು ಯಾವ ಅರ್ಜಿಯನ್ನೂ ಬಾಕಿ ಉಳಿಸಿಕೊಳ್ಳಬಾರದು. ಅಶಕ್ತ ಜನರಿಗೆ ಆದಷ್ಟು ನೆರವಾಗಿ” ಎಂದು ಸಿಎಂ ಡಿ‌ ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪ್ರಜಾಸೇವಾ ಇಲಾಖೆ ಪಿರಿಯಾಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಈಚೂರಿನ ಶಾಂತಮ್ಮ, ಪಿರಿಯಾಪಟ್ಟಣದ ವಿಜಯ ಕುಮಾರಿ, ಚಿಕ್ಕ ತಾಯಮ್ಮ, ಹೀಗೆ ಹಲವಾರು ಹಿರಿಯ ನಾಗರಿಕರ ಅಹವಾಲುಗಳನ್ನು ಆಲಿಸಿದ ಸಿಎಂ, “ಮುಂದಿನ ಬಾರಿ ಬಂದಾಗ ಪಿಂಚಣಿ ಸಮಸ್ಯೆ ಹೊತ್ತು ಯಾರೂ ಬರಬಾರದು. ಈ ಸಮಸ್ಯೆ ಬಗೆಹರಿಸುವುದು ಅಧಿಕಾರಗಳ ಕೆಲಸ” ಎಂದರು.

ಕಾವೇರಿ ನದಿ ಉಪನದಿ ಲಕ್ಷ್ಮಣ ತೀರ್ಥ ಮಲೀನವಾಗಿದೆ. ಮಲೀನ ನೀರನ್ನೇ ಜನ ಬಳಸುತ್ತಿದ್ದಾರೆ. ಅದನ್ನು ಸ್ವಚ್ಚಗೊಳಿಸಿ ಎಂದು ಹುಣಸೂರಿನ ಸತ್ಯಪ್ಪ ಎಂಬುವರು ಮನವಿ ಸಲ್ಲಿಸಿದರು. “ಈ ಬಗ್ಗೆ ವಿವರವಾದ ವರದಿ ನೀಡಿ” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೇಮಕಾತಿ ಆದೇಶ ಪ್ರತಿ ಮನೆಗೆ ಬರಲಿದೆ

“ನೇಮಕಾತಿ ಆದೇಶ ಪತ್ರ ಶೀಘ್ರ ಮನೆಗೆ ಬರಲಿದೆ. ಯುವಕರ ಪರವಾಗಿ ನಮ್ಮ ಸರ್ಕಾರವಿದೆ” ಎಂದು ಸಿಎಂ ಹೇಳಿ, ಕೃಷಿ ಮಾರುಕಟ್ಟೆ ಇಲಾಖೆ ಪರೀಕ್ಷೆ ಬರೆದು ನೇಮಕಾತಿಗೊಂಡಿರುವ ಮಹೇಶ್ ಅವರಿಗೆ ಆತ್ಮಸ್ಥೈರ್ಯ ತುಂಬಿದರು.

ತಂಬಾಕು ರೈತರ ಸಮಸ್ಯೆ ಅಲಿಸಿದ ಸಿಎಂ

ತಂಬಾಕಿಗೆ ಸೂಕ್ತ ಬೆಲೆ ನೀಡಿ. ಬೆಳೆಗೆ ಖರ್ಚು ಮಾಡಿ ಕಂಗಲಾಗಿದ್ದೇವೆ ಎಂದು ರೈತರು ಮನವಿ ನೀಡಿದಾಗ, ಶಾಸಕ ವೆಂಕಟೇಶ್ ಅವರು ಪರಿಸ್ಥಿತಿ ವಿವರಿಸಿ, ಮುಖ್ಯಮಂತ್ರಿಯವರಿಂದ ತಂಬಾಕು ಬೆಳೆಗೆ ಸೂಕ್ತ ಬೆಲೆ ದೊರಕುವಂತೆ ಮಾಡಲು ಕೇಂದ್ರ ಸಚಿವರಿಗೆ ಮನವಿ ಪತ್ರ ಸಲ್ಲಿಕೆ ಮಾಡುವುದಾಗಿ ಭರವಸೆ ನೀಡಿದರು. ಸಿಎಂ ಡಿ ಕೆ ಶಿವಕುಮಾರ್ ಅವರೂ ಇದಕ್ಕೆ ಸಮ್ಮತಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 7 ಲಕ್ಷ ಸಾಲ ಮಾಡಿದ್ದೇನೆ. ಬ್ಯಾಂಕ್ ನವರು ನೋಟಿಸ್ ನೀಡಿದ್ದಾರೆ. ಬೆಳೆಯಿಲ್ಲ ಎಂದು ರೈತ ರಾಜೇಗೌಡ ಎಂಬುವರು ಅಳಲು ತೋಡಿಕೊಂಡರು. ತಹಶಿಲ್ದಾರ್ ಅವರಿಗೆ ‘ಇದರ ಬಗ್ಗೆ ಸೂಕ್ತ ಕ್ರಮವಹಿಸಿ’ ಎಂದು ಸಿಎಂ ಸೂಚಿಸಿದರು.

ಹೆಣ್ಣು ಹುಡುಕಿಕೊಡಿ ಸಿಎಂ ಸಾರ್

ರೈತನಾದ ನನಗೆ ಹೆಣ್ಣು ಹುಡುಕಿಕೊಡಿ ಎಂದು ಯುವರೈತನೊಬ್ಬ ಅರ್ಜಿ ಕೊಟ್ಟಾಗ ಸಿಎಂ ಒಂದು ಕ್ಷಣ ಆಶ್ಚರ್ಯಚಕಿತರಾದರು. “ಹೆಣ್ಣು ಹುಡುಕಿಕೊಡಿ ಎಂದು ನನಗೆ ಕೇಳಲಿಲ್ಲವಲ್ಲ” ಎಂದು ಸಿಎಂ ಚಟಾಕಿ ಹಾರಿಸಿದರು.

ಹಾರನಹಳ್ಳಿಯ ವೀಣಾ, ಕಮಲಮ್ಮ ಎಂಬುವರು ಕೃಷಿ ಭೂಮಿ ಖಾತೆ ಮಾಡಿಕೊಡಿ ಎಂದು ಮನವಿ ಸಲ್ಲಿಸಿದರು. ಬೈಲುಕುಪ್ಪೆಯ ಶಾಹಿರ್ ಅವರು ರೇಷನ್ ಕಾರ್ಡ್ ಮಾಡಿಕೊಡಿ ನನ್ನ ತಂದೆಗೆ ಆರೋಗ್ಯ ತಪಾಸಣೆಗೆ ಅನುಕೂಲವಾಗಲಿದೆ ಎಂದಾಗ, “ಇವರ ಸಮಸ್ಯೆ ಗಮನಿಸಿ ಕಾರ್ಡ್ ನೀಡಲು ಕ್ರಮ ತೆಗೆದುಕೊಳ್ಳಿ” ಎಂದು ಸಿಎಂ ಸೂಚಿಸಿದರು.

ಗ್ರಾಮ ವಿದ್ಯುತ್ ಪ್ರತಿನಿಧಿಗಳಾದ ಪ್ರಭಾಕರ್, ನಾಗರಾಜು, ಸುರೇಶ್, ಗಣೇಶ್, ಮಂಜು ಅವರು ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸಿರುವ ನಮನ್ನ ಖಾಯಂಗೊಳಿಸಿ ಎಂದು ಮನವಿ ಸಲ್ಲಿಸಿದಾಗ, “ಇದರ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಬೇಕು. ಇದು ನನ್ನೊಬ್ಬನ ತೀರ್ಮಾನವಲ್ಲ” ಎಂದರು.

ಅಹವಾಲು ಸ್ವೀಕಾರಕ್ಕೂ ಮುನ್ನ ಸಿಎಂ ಡಿ ಕೆ ಶಿವಕುಮಾರ್ ಅವರು ವನ್ಯಜೀವಿ ಸಂರಕ್ಷಣಾ ಮೊಬೈಲ್ ಪ್ರಚಾರ ವಾಹನವನ್ನು ಲೋಕಾರ್ಪಣೆಗೊಳಿಸಿದರು. ನಂತರ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಸ್ಥಾಪಿಸಿದ್ದ ಅಹವಾಲು ಕೇಂದ್ರಗಳ ಬಳಿ ತೆರಳಿ ಯಾವ ರೀತಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ ಎಂದು ಪರಿಶೀಲನೆ ನಡೆಸಿದರು. ಯಾವ ಸಮಸ್ಯೆಗಳ ಕುರಿತು ಹೆಚ್ಚು ಅರ್ಜಿ ಬಂದಿದೆ ಎಂದು ಮಾಹಿತಿ ಪಡೆದರು. ಸಾರ್ವಜನಿಕರೊಬ್ಬರಿಗೆ “ಯಾವ ವಿಚಾರಕ್ಕೆ ಅರ್ಜಿ‌ ನೀಡಿದ್ದೀಯಾ” ಎಂದು ಸಿಎಂ ಕೇಳಿದಾಗ, “ಪಹಣಿ ತಿದ್ದುಪಡಿ ಮಾಡಿಕೊಡಿ ಎಂದು ಅರ್ಜಿ ಹಾಕಿದ್ದೇನೆ” ಎಂದರು.

ಪ್ರತಿಯೊಬ್ಬರ ಅರ್ಜಿಯನ್ನು ಖುದ್ದಾಗಿ ಪಡೆದು ಸಿಎಂ

ಸರತಿ ಸಾಲಿನಲ್ಲಿ ನಿಂತಿದ್ದ ಕೊನೆಯ ಅರ್ಜಿದಾರನ ಮನವಿಯನ್ನೂ ಪಡೆದೇ ಕಾರ್ಯಕ್ರಮವನ್ನು ಸಿಎಂ ಮುಕ್ತಾಯಗೊಳಿಸಿದರು. ನೆರೆದಿದ್ದ ಸಭಿಕರಿಗೆ ನಮಸ್ಕರಿಸಿದರು. ಅಹವಾಲುದಾರರನ್ನು ಕಾಯಿಸಬಾರದು ಎಂದು ಕೇವಲ 10 ನಿಮಿಷದಲ್ಲಿ ಊಟ ಮುಗಿಸಿ ವೇದಿಕೆಗೆ ಬಂದ ಸಿಎಂ ನಡೆ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button