*KPSC ನೇಮಕಾತಿಯಲ್ಲಿ ಮತ್ತೊಂದು ಶಾಕ್*: *2 ವರ್ಷದಲ್ಲಿ 13 ನೇಮಕಾತಿ ಬಗ್ಗೆ EDಗೆ ಸ್ಫೋಟಕ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮದ ತನಿಖೆ ಮುಂದುವರಿದಿರುವ ಬೆನ್ನಲ್ಲೇ ಮತ್ತೊಂದು ಗಂಭೀರ ಆರೋಪ ಬೆಳಕಿಗೆ ಬಂದಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಉತ್ತರ ಪತ್ರಿಕೆ ತಿದ್ದುಪಡಿ ಆರೋಪಗಳ ಬಳಿಕ, ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಬಳಸಿಕೊಂಡು ಅಂತಿಮ ಆಯ್ಕೆಗೂ ಮುನ್ನವೇ ಹುದ್ದೆಗಳಿಗಾಗಿ ಡೀಲ್ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಹೊರಬಿದ್ದಿದೆ.
ಮಾಜಿ KPSC ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ವಿಚಾರಣೆ ವೇಳೆ ಈ ಮಾಹಿತಿ ಹೊರಬಂದಿದೆ. ಕಳೆದ ಎರಡು ವರ್ಷಗಳಲ್ಲಿ KPSC ನಡೆಸಿದ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ಆಯೋಗದ ಕೆಲ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.
ಲಿಖಿತ ಪರೀಕ್ಷೆಯ ಮೌಲ್ಯಮಾಪನ ಪೂರ್ಣಗೊಂಡ ಬಳಿಕ ಸಿದ್ಧವಾಗುತ್ತಿದ್ದ ಅರ್ಹತಾ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮಾಹಿತಿಯನ್ನು ಕೆಲ ಆಯೋಗದ ಸದಸ್ಯರು ಪಡೆಯುತ್ತಿದ್ದರು ಎಂದು ಗಂಗ್ವಾರ್ ತನಿಖಾಧಿಕಾರಿಗಳಿಗೆ ಹೇಳಿರುವುದಾಗಿ ವರದಿಯಾಗಿದೆ. ಬಳಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ಮುನ್ನ ಅಭ್ಯರ್ಥಿಗಳೊಂದಿಗೆ ಸಂಪರ್ಕಿಸಿ ಹಣದ ವ್ಯವಹಾರ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.
ಅಂದರೆ, ಪರೀಕ್ಷೆ ಮುಗಿದ ಬಳಿಕವೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುವ ಸಾಧ್ಯತೆ ಇತ್ತು ಎಂಬ ಅಂಶ ತನಿಖೆಯಲ್ಲಿ ಮುನ್ನೆಲೆಗೆ ಬಂದಿದೆ. ಅರ್ಹತಾ ಪಟ್ಟಿಯಲ್ಲಿ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳ ಪೈಕಿ ಯಾರನ್ನು ಅಂತಿಮ ಆಯ್ಕೆ ಪಟ್ಟಿಗೆ ಸೇರಿಸಬೇಕು ಎಂಬ ಹಂತದಲ್ಲೇ ಅಕ್ರಮ ನಡೆದಿದೆ ಎಂಬ ಆರೋಪವನ್ನು ED ಪರಿಶೀಲಿಸುತ್ತಿದೆ.
KPSCಯಲ್ಲಿ ನಡೆದ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯಲ್ಲೇ ಈ ಹೊಸ ಅಂಶಗಳು ಹೊರಬಂದಿವೆ. 400 ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ 1,400 ಅಭ್ಯರ್ಥಿಗಳು ಭಾಗವಹಿಸಿದ್ದು, ಅಂತಿಮವಾಗಿ 329 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದಿರುವ ಆರೋಪವೂ ತನಿಖೆಯಲ್ಲಿದೆ.
ಇದಕ್ಕೂ ಮುನ್ನ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಪರೀಕ್ಷೆಗೆ ಮುನ್ನವೇ ಸೋರಿಕೆಯಾಗಿತ್ತು ಎಂಬ ಆರೋಪದ ಮೇಲೆ ED ಮತ್ತು CID ತನಿಖೆ ನಡೆಸುತ್ತಿವೆ. ED ಪ್ರಕಾರ, ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳನ್ನು ಅಭ್ಯರ್ಥಿಗಳಿಗೆ ಒದಗಿಸಲು ₹30ರಿಂದ ₹40 ಲಕ್ಷದವರೆಗೆ ಹಣ ಪಡೆಯಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.
ಇದೀಗ ತನಿಖೆಯ ವ್ಯಾಪ್ತಿ ಪಶುವೈದ್ಯಾಧಿಕಾರಿ ನೇಮಕಾತಿಯನ್ನು ಮೀರಿ ಇತರ ನೇಮಕಾತಿಗಳತ್ತಲೂ ವಿಸ್ತರಿಸಿರುವುದು ಗಮನ ಸೆಳೆದಿದೆ. ಸಹಾಯಕ ಎಂಜಿನಿಯರ್, ಮೋಟಾರ್ ವೆಹಿಕಲ್ ಇನ್‌ಸ್ಪೆಕ್ಟರ್, KAS ಸೇರಿದಂತೆ ಹಲವು ನೇಮಕಾತಿ ಪ್ರಕ್ರಿಯೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತ ಅಕ್ರಮಗಳ ಸುಳಿವು ಸಿಕ್ಕಿದೆ ಎಂದು ED ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.
ಈ ನಡುವೆ KPSCಯ ಕೆಲ ಅಧಿಕಾರಿ-ಸಿಬ್ಬಂದಿಯನ್ನೂ ತನಿಖಾ ಸಂಸ್ಥೆಗಳು ಸಾಕ್ಷಿಗಳಾಗಿ ಪರಿಗಣಿಸಿರುವ ಮಾಹಿತಿ ಹೊರಬಂದಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹತಾ ಪಟ್ಟಿ ಹಾಗೂ ಅಂತಿಮ ಆಯ್ಕೆ ಪಟ್ಟಿಗೆ ಸಂಬಂಧಿಸಿದ ಕಾರ್ಯವಿಧಾನದ ಬಗ್ಗೆ ಈ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದೆ.
ಪ್ರಕರಣದಲ್ಲಿ KPSC ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈಗಾಗಲೇ KPSC ಪರೀಕ್ಷಾ ನಿಯಂತ್ರಕರಾಗಿದ್ದ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಲೆ ಅವರನ್ನು ತನಿಖಾ ಸಂಸ್ಥೆಗಳು ಬಂಧಿಸಿವೆ. ಗಂಗ್ವಾರ್ ವಿರುದ್ಧದ ಆರೋಪಗಳನ್ನು ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಮಾಡಬೇಕಿದೆ.
ಪ್ರಶ್ನೆಪತ್ರಿಕೆ ಸೋರಿಕೆಯಿಂದ ಆರಂಭವಾದ ತನಿಖೆ ಇದೀಗ ಪರೀಕ್ಷೆ ಮುಗಿದ ನಂತರದ ಅರ್ಹತಾ ಪಟ್ಟಿ ಮತ್ತು ಅಂತಿಮ ಆಯ್ಕೆ ಹಂತದವರೆಗೂ ತಲುಪಿರುವುದು ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ನೇಮಕಾತಿಗಳಲ್ಲಿನ ಅಕ್ರಮಗಳ ವಿವರಗಳು ಹೊರಬರುವ ಸಾಧ್ಯತೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



