Kannada NewsNationalSports

*ಟೀಮ್ ಇಂಡಿಯಾ ನಾಯಕತ್ವಕ್ಕೆ ಹರ್ಮನ್​ಪ್ರೀತ್ ಕೌರ್ ರಾಜೀನಾಮೆ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಮಹಿಳಾ ಕ್ರಿಕೆಟ ತಂಡದ ದೀರ್ಘಾವಧಿಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಟೀಂ ಇಂಡಿಯಾ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್‌ನ ನಾಯಕತ್ವದ ಜವಾಬ್ದಾರಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ಈ ದಿಢೀರ್ ಬೆಳವಣಿಗೆಯು ಜಾಗತಿಕ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ತಮ್ಮ ರಾಜೀನಾಮೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಹರ್ಮನ್‌ಪ್ರೀತ್, “ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುವ ಈ ನಿರ್ಧಾರ ಸುಲಭದ್ದಾಗಿರಲಿಲ್ಲ. ಇದು ಕೇವಲ ಒಂದು ಜವಾಬ್ದಾರಿಯಲ್ಲ, ನನ್ನ ರಕ್ತ, ಬೆವರು, ಸಮಯ ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಜರ್ನಿ. ತಂಡದ ಹಿತದೃಷ್ಟಿಗಾಗಿ ನಾನು ಹಲವು ಬಾರಿ ನನ್ನ ವೈಯಕ್ತಿಕ ಪ್ರದರ್ಶನ ಹಾಗೂ ಬೆಳವಣಿಗೆಯನ್ನು ಬದಿಗಿಟ್ಟಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ನಾಯಕತ್ವದ ಅವಧಿಯಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬಂದಿದ್ದನ್ನೂ ಅವರು ಸ್ಮರಿಸಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಪ್ರಮುಖ ಸಾಧನೆಗಳು:
ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ (ಪುರುಷ ಅಥವಾ ಮಹಿಳಾ ಕ್ರಿಕೆಟ್) ಅತಿ ಹೆಚ್ಚು ಅಂದರೆ 150ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಜಗತ್ತಿನ ಏಕೈಕ ನಾಯಕಿ ಎಂಬ ಐತಿಹಾಸಿಕ ದಾಖಲೆ.
ಏಷ್ಯಾ ಕಪ್ ಸಾರ್ವಭೌಮತ್ವ: ಭಾರತ ತಂಡಕ್ಕೆ ನಾಯಕಿಯಾಗಿ ದಾಖಲೆಯ ನಾಲ್ಕು ಏಷ್ಯಾ ಕಪ್ ಟ್ರೋಫಿಗಳನ್ನು ತಂದುಕೊಡುವ ಮೂಲಕ ಮಿಥಾಲಿ ರಾಜ್ ಅವರ ದಾಖಲೆಯನ್ನು ಮೀರಿಸಿದ್ದಾರೆ.
ಐತಿಹಾಸಿಕ ಜಯ: ಇತ್ತೀಚೆಗಷ್ಟೇ ಏಷ್ಯನ್ ಗೇಮ್ಸ್‌ನಲ್ಲಿ ತಂಡಕ್ಕೆ ಚಿನ್ನದ ಪದಕ ತಂದುಕೊಟ್ಟ ಕೀರ್ತಿ ಹಾಗೂ ಮಹಿಳಾ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟ ದಾಖಲೆ

ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಟ್ಟು 211 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದೆ.

ನಾಯಕತ್ವದಿಂದ ಕೆಳಗಿಳಿದರೂ ಹರ್ಮನ್‌ಪ್ರೀತ್ ಕೌರ್ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್ ಆಗಿ ಮುಂದುವರಿಯಲಿದ್ದಾರೆ. 2017ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ ಅಜೇಯ 171 ರನ್‌ಗಳಂತಹ ಸ್ಫೋಟಕ ಇನ್ನಿಂಗ್ಸ್‌ಗಳ ಮೂಲಕ ಭಾರತೀಯ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿದ್ದ ಹರ್ಮನ್, ಇನ್ನು ಮುಂದೆ ಯಾವುದೇ ಒತ್ತಡವಿಲ್ಲದೆ ಕೇವಲ ಬ್ಯಾಟಿಂಗ್ ಕಡೆಗೆ ಗಮನ ಹರಿಸಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button