*ತಾಯಿಯನ್ನೇ ಕೊಲೆಗೈದು ಮಂಚದಿಂದ ಬಿದ್ದು ಸಾವೆಂದು ಕಥೆ ಕಟ್ಟಿದ ಮಗ; ಸಿಕ್ಕಿಬಿದ್ದಾಗ ಬಿಚ್ಚಿಟ್ಟ ಮೂರು ಕಾರಣ*

ಪ್ರಗತಿವಾಹಿನಿ ಸುದ್ದಿ: ಕುಡಿತದ ದಾಸನಾಅಗಿದ್ದ ಮಗನೊಬ್ಬ ತನ್ನ ತಾಯಿಯನ್ನೇ ಕೊಲೆಗೈದು, ಮಂಚದಿಂದ ಬಿದ್ದು ತಾಯಿ ಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದು ನಂಬಿಸಿ, ಗುಟ್ಟಾಗಿ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸಿದ್ದಾಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಬೆಂಗಳೂರಿನ ಕಾಡುಗೋಡಿ ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ. ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿ, ಸ್ವಾಭಾವಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಮೂರನೇ ಪುತ್ರ ಬಾಲಾಜಿ ಬಂಧಿತ ಆರೋಪಿ. ಕಾಡುಗೋಡಿಯ ಬೇವಿನಮರ ಕಾಲೋನಿಯ ನಿವಾಸಿ ಭಾಗ್ಯಮ್ಮ (60) ಕೊಲೆಯಾದ ತಾಯಿ.
ಕಳೆದ ಸೆಪ್ಟೆಂಬರ್ 24 ರಂದು ರಾತ್ರಿ ಭಾಗ್ಯಮ್ಮ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಸೆಪ್ಟೆಂಬರ್ 25 ರಂದು ಆಕೆಯ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ ಬೇವಿನಮರ ಕಾಲೋನಿಯಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಶವಸಂಸ್ಕಾರ ಮುಗಿಯುವ ಹಂತದಲ್ಲಿದ್ದಾಗ, ಘಟನೆಯ ಸುಳಿವು ತಿಳಿದ ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿದರು.
“ಸಾವು ಅನುಮಾನಾಸ್ಪದವಾಗಿದೆ, ಮರಣೋತ್ತರ ಪರೀಕ್ಷೆ ಮಾಡಬೇಕು” ಎಂದು ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆಯಲು ಮುಂದಾದರು. ಆದರೆ, ಕುಟುಂಬಸ್ಥರು ಇದನ್ನು ತೀವ್ರವಾಗಿ ವಿರೋಧಿಸಿ, ತಾಯಿ ಮಂಚದ ಮೇಲಿಂದ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾಳೆ, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನಂಬಿಸಲು ಯತ್ನಿಸಿದರು. ಆದರೆ, ಸಾರ್ವಜನಿಕರನ್ನು ಸಮಾಧಾನಪಡಿಸಿ ಮನವೊಲಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಅಂದೇ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು.
ಮರಣೋತ್ತರ ಪರೀಕ್ಷೆಯ ವರದಿ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿತ್ತು. ಡೆತ್ ಡ್ಯೂ ಟು ಹೆಡ್ ಇಂಜುರಿ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಮಹಿಳೆಯ ದೇಹದ ಬರೋಬ್ಬರಿ 12 ಕಡೆಗಳಲ್ಲಿ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಕಾಡುಗೋಡಿ ಪೊಲೀಸರು, ಸ್ಥಳೀಯರು ಹಾಗೂ ಅಕ್ಕಪಕ್ಕದವರನ್ನು ಖಾಸಗಿಯಾಗಿ ವಿಚಾರಣೆ ನಡೆಸಿದರು. ಈ ವೇಳೆ ಸೆಪ್ಟೆಂಬರ್ 24 ರಂದು ರಾತ್ರಿ ಭಾಗ್ಯಮ್ಮನ ಮನೆಯಲ್ಲಿ ಭಾರಿ ಗಲಾಟೆ ನಡೆದಿತ್ತು ಎಂಬುದು ಗೊತ್ತಾಗಿದೆ.
ಭಾಗ್ಯಮ್ಮನ ಮೂರನೇ ಪುತ್ರ ಬಾಲಾಜಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತಾಯಿಯನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಕೊಲೆಗೆ ಮೂರು ಕಾರಣ ತಿಳಿಸಿದ್ದಾನೆ. ವ್ಯಕ್ತಿಯೊಬ್ಬ ಮನೆ ಬಳಿ ಬಂದು ಕುಳಿತುಕೊಳ್ಳುತ್ತಿದ್ದ ಹಾಗೂ ತಾಯಿಯ ಬಗ್ಗೆ ಏರಿಯಾ ಜನರು ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಆತ ತೀವ್ರ ಕೋಪಗೊಂಡಿದ್ದೆ. ಗಂಡನ ಸಾವಿನ ಬಳಿಕ ತಾಯಿಗೆ ಮದ್ಯಪಾನದ ಚಟವಿತ್ತು. ಬೆಳಿಗ್ಗೆಯಿಂದಲೇ ಕುಡಿದು ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದಳು ಎಂದು ಆರೋಪಿಸಿದ್ದಾನೆ. ತಾಯಿಯ 32 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಪುತ್ರ ಬಾಲಾಜಿ ಅಡಮಾನ ಇಟ್ಟಿದ್ದ. ಅದನ್ನು ಬಿಡಿಸಿಕೊಡುವಂತೆ ತಾಯಿ ಪದೇ ಪದೇ ಜಗಳ ತೆಗೆಯುತ್ತಿದ್ದಳು. ಈ ಕಾರಣಗಳಿಂದ ಆಕ್ರೋಶಗೊಂಡಿದ್ದ ಬಾಲಾಜಿ, ತಾಯಿಯನ್ನು ಹೊಡೆದು ಕೊಲೆ ಮಾಡಿದ್ದ. ಪ್ರಸ್ತುತ ಕಾಡುಗೋಡಿ ಠಾಣೆ ಪೊಲೀಸರು ಆರೋಪಿ ಬಾಲಾಜಿಯನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




