*ನಾನಿನ್ನೂ ಮನೆಯಲ್ಲಿ ಮಲಗಿದ್ದೆ; ಅಪರಿಚಿತರು ಬಂದು ನನ್ನನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು*: *ಧ್ರುವ್ ರಾಠಿ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ: ಸಿಜೆಪಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳಲು ಸಿದ್ಧರಾಗಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿಯನ್ನು ಶನಿವಾರ ಪೊಲೀಸರು ಅವರ ಮನೆಯಲ್ಲಿಯೇ ವಶಕ್ಕೆ ಪಡೆದಿದ್ದರು. ಒಂದು ದಿನದ ಬಳಿಕ ಬಿಡುಗಡೆ ಮಾಡಿದ್ದಾರೆ.
ಬಿಡುಗಡೆ ಬೆನ್ನಲ್ಲೇ ಪೊಲೀಸರ ವಿರುದ್ಧ ಕಿಡಿಕಾರಿರುವ ಧ್ರುವ ರಾಠಿ, ಅದು ಬಂಧನವಲ್ಲ, ನನ್ನನ್ನು ಕಿಡ್ನ್ಯಾಪ್ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿ ಪೊಲೀಸರ ವಶದಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಧ್ರುವ್ ರಾಠಿ ಬಂಧನದ ನೆಪದಲ್ಲಿ ನನ್ನನ್ನು ಅಪಹರಿಸಲಾಗಿತ್ತು ಎಂದು ಹೇಳಿದ್ದಾರೆ.
ಭಾನುವಾರ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಬಿಡುಗಡೆಯಾದ ನಂತರ, ರಾಠಿ ಬಂಧನದ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಧ್ರುವ್ , ನಾನು ಗುರುಗ್ರಾಮ್ ನಿವಾಸದಲ್ಲಿ ಇದ್ದಾಗ ನನ್ನನ್ನು ಪೊಲೀಸರು ಏಕಾಏಕಿ ಅರೆಸ್ಟ್ ಮಾಡಿದ್ದಾರೆ. ನನ್ನನ್ನು ಕಾನೂನುಬದ್ಧವಾಗಿ ಬಂಧಿಸಲಾಗಿಲ್ಲ, ನಾನಿನ್ನೂ ಆಗ ಮಲಗಿದ್ದೆ, ಅಪರಿಚಿತರು ಬಂದು ನನ್ನನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ 7:00 ಗಂಟೆಗೆ ಸಾಮಾನ್ಯ ಉಡುಪಿನಲ್ಲಿದ್ದ ಸುಮಾರು 20 ಜನ ನನ್ನ ಮಲಗುವ ಕೋಣೆಗೆ ಪ್ರವೇಶಿಸಿದರು. ನನ್ನನ್ನು ಕರೆದುಕೊಂಡು ಹೋದರು. ನನನ್ನು ಹಲವು ಪೊಲೀಸ್ ಠಾಣೆಗಳಿಗೆ ಸ್ಥಳಾಂತರಿಸಲಾಯಿತು. ಸುಮಾರು 22 ರಿಂದ 23 ಗಂಟೆಗಳ ಕಾಲ ನನ್ನ ಕಾನೂನು ಸಲಹೆಗಾರರು ಅಥವಾ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಅವಕಾಶ ಕೊಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನಿಷೇಧಾಜ್ಞೆಗಳ ನಡುವೆ ಪ್ರತಿಭಟನಾಕಾರರು ಸೇರುವುದನ್ನು ತಡೆಯಲು, ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು ಮತ್ತು ಗುರುಗ್ರಾಮ್ನಲ್ಲಿರುವ ಅವರ ನಿವಾಸದಿಂದ ರಾಠಿ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




