CrimeKannada NewsKarnataka NewsLatest

*ಹಾಸನ ಪಬ್ ಮೇಲೆ ಎಸ್ಪಿ ದಾಳಿ*: *ಅಪ್ರಾಪ್ತರಿಗೆ ಮದ್ಯ ಪೂರೈಕೆ, ಮಾಲೀಕರ ವಿರುದ್ಧ ಕ್ರಮಕ್ಕೆ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಪಬ್‌ಗಳಲ್ಲಿ ನಿಯಮ ಉಲ್ಲಂಘನೆ ನಡೆಯುತ್ತಿದೆಯೇ? ಅಪ್ರಾಪ್ತರಿಗೆ ಮದ್ಯ ಪೂರೈಸಲಾಗುತ್ತಿದೆಯೇ? ಇಂತಹ ಅಕ್ರಮಗಳ ವಿರುದ್ಧ ಹಾಸನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ನಿನ್ನೆ ರಾತ್ರಿ ನಗರದ ಪ್ರತಿಷ್ಠಿತ ಪಬ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಪ್ರಾಪ್ತರಿಗೆ ಪ್ರವೇಶ ನೀಡಿರುವುದರ ಜೊತೆಗೆ ಮದ್ಯ ಪೂರೈಸಿರುವುದೂ ಪತ್ತೆಯಾಗಿದೆ.

ಎಎಸ್‌ಪಿ ಮತ್ತು ಡಿವೈಎಸ್‌ಪಿ ನೇತೃತ್ವದಲ್ಲಿ ನಡೆದ ತಪಾಸಣೆ ವೇಳೆ ಪಬ್‌ನ ಪರವಾನಗಿ ಹಾಗೂ ಇತರ ಅಗತ್ಯ ದಾಖಲೆಗಳನ್ನು ತೋರಿಸುವಂತೆ ಮ್ಯಾನೇಜರ್‌ಗೆ ಸೂಚಿಸಲಾಯಿತು. ಆದರೆ, ಸೂಕ್ತ ದಾಖಲೆಗಳನ್ನು ಒದಗಿಸುವ ವಿಚಾರದಲ್ಲಿ ಮ್ಯಾನೇಜರ್ ಪರದಾಡಿದ್ದಾರೆ ಎಂದು ವರದಿಯಾಗಿದೆ.

ತಪಾಸಣೆ ವೇಳೆ ಇಬ್ಬರು ಅಪ್ರಾಪ್ತರಿಗೆ ಪಬ್ ಒಳಗೆ ಪ್ರವೇಶ ನೀಡಿದ್ದಲ್ಲದೆ, ಅವರಿಗೆ ಮದ್ಯವನ್ನೂ ಪೂರೈಸಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆಲ್ಕೋಮೀಟರ್ ಮೂಲಕ ಇಬ್ಬರನ್ನು ಪರೀಕ್ಷಿಸಿದಾಗ ಅವರು ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಸ್ಪಿ ಶುಭನ್ವಿತಾ ಅವರು ಪಬ್‌ನ ಮ್ಯಾನೇಜರ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಪ್ರಾಪ್ತರಿಗೆ ಮದ್ಯ ಪೂರೈಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಶುಭನ್ವಿತಾ, ನಿಯಮ ಉಲ್ಲಂಘಿಸಿದ ಪಬ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದ ಪಬ್‌ಗಳಲ್ಲಿ ನಿಯಮ ಪಾಲನೆ ಖಚಿತಪಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button