
ಪ್ರಗತಿವಾಹಿನಿ ಸುದ್ದಿ: ಎಷ್ಟೇ ಎಚ್ಚರಿಕೆ ನೀಡಿದರೂ ತಪ್ಪು ತಿದ್ದಿಕೊಳ್ಳದ ಸ್ಪರ್ಧಿಗೆ ಕೊನೆಗೂ ಬಿಗ್‌ಬಾಸ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ ಮಾಡರ್ನ್ ಮಹಾಕವಿ ಮಂಜುನಾಥ್ ಅಲಿಯಾಸ್ ಮಂಜು ಅವರನ್ನು ನಿಯಮ ಉಲ್ಲಂಘನೆಯ ಕಾರಣದಿಂದ ನೇರವಾಗಿ ಮನೆಯಿಂದ ಹೊರಹಾಕಲಾಗಿದೆ. ಮನೆಯಿಂದ ಹೊರಬಂದ ಬಳಿಕ ಕಿಚ್ಚ ಸುದೀಪ್ ಎದುರು ಭಾವುಕರಾಗಿ ಕಣ್ಣೀರಿಟ್ಟ ಮಂಜು, ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ.
ಮನೆಯೊಳಗೆ ಪದೇ ಪದೇ ಅಸಭ್ಯ ಪದಗಳನ್ನು ಬಳಸುವುದು ಮತ್ತು ಸಹ ಸ್ಪರ್ಧಿಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪ ಮಂಜು ವಿರುದ್ಧ ಕೇಳಿಬಂದಿತ್ತು. ಈ ಹಿಂದೆ ಕೂಡ ಇದೇ ರೀತಿಯ ವರ್ತನೆಗಾಗಿ ಬಿಗ್‌ಬಾಸ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ, ಬಳಿಕ ಮತ್ತೆ ಮನೆಯೊಳಗೆ ಪ್ರವೇಶ ನೀಡಿದ್ದರು. ಆದರೆ, ಮತ್ತೊಮ್ಮೆ ಎಚ್ಚರಿಕೆ ನೀಡಿದರೂ ವರ್ತನೆಯಲ್ಲಿ ಬದಲಾವಣೆ ಕಾಣದ ಹಿನ್ನೆಲೆಯಲ್ಲಿ ಈ ಬಾರಿ ಶಾಶ್ವತವಾಗಿ ಹೊರಹಾಕುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ವಾರ ಮಂಜು ಅವರ ವರ್ತನೆ ಮಿತಿಮೀರಿದ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಅವರ ತಾಯಿಯ ಮೂಲಕವೂ ಬುದ್ಧಿವಾದ ಹೇಳಿಸಿದ್ದರು. ಕಿಚ್ಚ ಸುದೀಪ್ ಕೂಡ ಕಠಿಣ ಎಚ್ಚರಿಕೆ ನೀಡಿದ್ದರು. ಆದರೂ ನಿಯಮ ಉಲ್ಲಂಘನೆ ಮುಂದುವರಿದಿದ್ದರಿಂದ ಬಿಗ್‌ಬಾಸ್ ಈ ಕ್ರಮ ಕೈಗೊಂಡಿದ್ದಾರೆ. ಮಂಜು ಮನೆಯಿಂದ ಹೊರಹೋಗುತ್ತಿದ್ದಂತೆ ಕೆಲವು ಸಹ ಸ್ಪರ್ಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ವೇದಿಕೆಗೆ ಬಂದ ಮಂಜು, ಕಿಚ್ಚ ಸುದೀಪ್ ಎದುರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬಿಗ್‌ಬಾಸ್‌ಗೆ ಬರುವುದು ತಮ್ಮ ಹತ್ತು ವರ್ಷಗಳ ಕನಸಾಗಿತ್ತು. ಆದರೆ, ತಮ್ಮ ವರ್ತನೆಯಿಂದ ಸುದೀಪ್ ಅವರ ಎದುರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿ, “ತಪ್ಪಾಯ್ತು ಸರ್” ಎಂದು ಕ್ಷಮೆ ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, “ತಪ್ಪಾಯ್ತು ಬಿಡಿ, ಇನ್ಮುಂದೆ ತಿದ್ದಿಕೊಳ್ಳಿ. ಹತ್ತು ವರ್ಷದ ಕನಸನ್ನು ಹೀಗೆ ಹಾಳು ಮಾಡಿಕೊಳ್ಳಬೇಕಿತ್ತಾ?” ಎಂದು ಪ್ರಶ್ನಿಸಿದ್ದಾರೆ. ಇದನ್ನು ಕೇಳಿದ ಮಂಜು ಮತ್ತಷ್ಟು ಭಾವುಕರಾಗಿ ತಮ್ಮ ತಪ್ಪಿನ ಅರಿವಾಗಿದೆ ಎಂದು ಹೇಳಿದ್ದಾರೆ. ಕೊನೆಯಲ್ಲಿ ಸುದೀಪ್ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




