
ಪ್ರಗತಿವಾಹಿನಿ ಸುದ್ದಿ: ಉದ್ಯೋಗ ಮತ್ತು ಉತ್ತಮ ಬದುಕಿನ ನಿರೀಕ್ಷೆಯಲ್ಲಿ ಸಮುದ್ರಯಾನ ಆರಂಭಿಸಿದ್ದ ನೂರಾರು ವಲಸಿಗರಿಗೆ ದುರಂತ ಎದುರಾಗಿದೆ. ದೋಣಿಯೊಂದು ಮುಳುಗಿದ ಪರಿಣಾಮ 15 ಮಕ್ಕಳು ಸೇರಿದಂತೆ 109 ಮಂದಿ ಮೃತಪಟ್ಟಿದ್ದಾರೆ. ಈ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಯಲ್ಲಿ ಇನ್ನೂ 116 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (IOM) ನೀಡಿರುವ ಮಾಹಿತಿಯ ಪ್ರಕಾರ, ದೋಣಿ ಪೂರ್ವ ಆಫ್ರಿಕಾ ಕರಾವಳಿಯಲ್ಲಿ ಜಿಬೂಟಿಯಿಂದ ಯೆಮೆನ್ಗೆ ತೆರಳುತ್ತಿದ್ದ ವೇಳೆ ಭೀಕರ ದುರಂತ ಸಂಭವಿಸಿದೆ. ದೋಣಿಯಲ್ಲಿ ಒಟ್ಟು 305 ಮಂದಿ ಪ್ರಯಾಣಿಸುತ್ತಿದ್ದು, ದೋಣಿ ಶುಕ್ರವಾರ ಬೆಳಗ್ಗೆ ಸಮುದ್ರದಲ್ಲಿ ಮುಳುಗಿದೆ. ದುರಂತದಲ್ಲಿ 52 ಪುರುಷರು, 42 ಮಹಿಳೆಯರು ಮತ್ತು 15 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. 80ಕ್ಕೂ ಹೆಚ್ಚು ಮಂದಿ ಅಪಾಯದಿಂದ ಪಾರಾಗಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಹಾರ್ನ್ ಆಫ್ ಆಫ್ರಿಕಾ ಪ್ರದೇಶದಿಂದ ಸಾವಿರಾರು ವಲಸಿಗರು ಉದ್ಯೋಗ ಮತ್ತು ಭದ್ರತೆಯ ಹುಡುಕಾಟದಲ್ಲಿ ಜಿಬೂಟಿ ಮೂಲಕ ಯೆಮೆನ್ಗೆ ಪ್ರಯಾಣಿಸುತ್ತಾರೆ. ಅಲ್ಲಿಂದ ಬಾಬ್-ಎಲ್-ಮಂಡೇಬ್ ಜಲಸಂಧಿ ದಾಟಿ ಗಲ್ಫ್ ರಾಷ್ಟ್ರಗಳನ್ನು ತಲುಪುವುದು ಅವರ ಉದ್ದೇಶವಾಗಿತ್ತು. ಈ ಅಪಾಯಕಾರಿ ಸಮುದ್ರ ಮಾರ್ಗದಲ್ಲಿ ಪ್ರಯಾಣಿಸುವವರು ಅನೇಕ ಬಾರಿ ಜೀವದ ಹಂಗು ತೊರೆದು ಯಾನ ಕೈಗೊಳ್ಳುತ್ತಾರೆ.
ಯೆಮೆನ್ನಲ್ಲಿ ಹಿಂಸಾಚಾರ ಮತ್ತು ಅಸ್ಥಿರತೆ ಮುಂದುವರಿದಿದ್ದರೂ ವಲಸಿಗರ ಈ ಪ್ರಯಾಣ ನಿಂತಿಲ್ಲ. ಉತ್ತಮ ಉದ್ಯೋಗ ಮತ್ತು ಸುರಕ್ಷಿತ ಬದುಕಿನ ನಿರೀಕ್ಷೆಯಲ್ಲಿ ಹೊರಡುವವರು ಇಂತಹ ಅಪಾಯಕಾರಿ ಪ್ರಯಾಣಕ್ಕೆ ಸಿಲುಕುತ್ತಿದ್ದಾರೆ. ಇತ್ತೀಚಿನ ದೋಣಿ ದುರಂತವು ವಲಸಿಗರ ಸುರಕ್ಷತೆ ಮತ್ತು ಸಮುದ್ರ ಮಾರ್ಗದ ಅಪಾಯಗಳ ಕುರಿತು ಮತ್ತೊಮ್ಮೆ ಆತಂಕ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




