CrimeKannada NewsKarnataka NewsLatest

*ಮಗುವಿನ ನಾಮಕರಣ*: *ಕೆಪಿಎಸ್‌ಸಿ ಹಗರಣದ ಆರೋಪಿ ಬಸವರಾಜ್ ಕನ್ನಾಳೆಗೆ ಷರತ್ತುಬದ್ಧ ಜಾಮೀನು*

ಪ್ರಗತಿವಾಹಿನಿ ಸುದ್ದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಬಸವರಾಜ್ ಕನ್ನಾಳೆಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಕ್ಟೋಬರ್ 15ರಿಂದ 20ರವರೆಗೆ ಬೀದರ್‌ಗೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ. ಪೊಲೀಸರ ಎಸ್ಕಾರ್ಟ್‌ನಲ್ಲಿಯೇ ಕನ್ನಾಳೆಯನ್ನು ಕರೆದೊಯ್ದು ವಾಪಸ್ ಕರೆತರಬೇಕು ಎಂದು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಆದೇಶಿಸಿದೆ.

ಕನ್ನಾಳೆ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಅವರ ಪತ್ನಿ ಮಗುವಿಗೆ ಜನ್ಮ ನೀಡಿದ್ದು, ಈಗ 12 ದಿನಗಳಾಗಿವೆ. ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾನವೀಯತೆಯ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿವಾದ ಮಂಡಿಸಿದ ಸರ್ಕಾರದ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ಬಿ.ಎನ್. ಜಗದೀಶ್, ಕನ್ನಾಳೆ ಹಲವು ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿರುವ ಆರೋಪವಿದೆ ಎಂದು ತಿಳಿಸಿದರು. ಬೀದರ್‌ಗೆ ತೆರಳಲು ಅನುಮತಿ ನೀಡಿದರೂ, ಅವರನ್ನು ಸಿಐಡಿ ಅಥವಾ ಪೊಲೀಸರ ನಿಗಾದಲ್ಲಿಯೇ ಕರೆದೊಯ್ಯಬೇಕು ಎಂದು ಮನವಿ ಮಾಡಿದರು.

ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್, ಅಕ್ಟೋಬರ್ 15ರಿಂದ 20ರವರೆಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪೊಲೀಸರ ಎಸ್ಕಾರ್ಟ್‌ನಲ್ಲಿ ಕರೆದೊಯ್ದು ನಿಗದಿತ ಅವಧಿ ಮುಗಿದ ಬಳಿಕ ಮರಳಿ ಕರೆತರಲು ಸೂಚಿಸಿದೆ.

ಈ ಪ್ರಕರಣದ ತನಿಖೆಯಲ್ಲಿ, ಪಶುವೈದ್ಯಾಧಿಕಾರಿಗಳ ನೇಮಕಾತಿಗಾಗಿ ಅಭ್ಯರ್ಥಿಗಳೊಂದಿಗೆ ಅಕ್ರಮ ಹಣಕಾಸು ವ್ಯವಹಾರ ನಡೆಸಿದ ಆರೋಪ ಕನ್ನಾಳೆ ವಿರುದ್ಧ ಕೇಳಿಬಂದಿದೆ. 2024ರಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾದ ಸಂದರ್ಭದಲ್ಲಿ ಪ್ರತಿ ಹುದ್ದೆಗೆ ಸುಮಾರು 80 ಲಕ್ಷ ರೂಪಾಯಿ ಪಡೆಯುವ ಯೋಜನೆ ರೂಪಿಸಲಾಗಿತ್ತು ಎಂದು ತನಿಖಾ ಮೂಲಗಳು ತಿಳಿಸಿವೆ.

15ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಮುಂಗಡವಾಗಿ ಸುಮಾರು 1.50 ಕೋಟಿ ರೂಪಾಯಿ ಸಂಗ್ರಹಿಸಲಾಗಿತ್ತು ಎಂಬ ಆರೋಪವೂ ಇದೆ. ಈ ಹಣದಲ್ಲಿ 1.30 ಕೋಟಿ ರೂಪಾಯಿಯನ್ನು ಗಂಗ್ವಾರ್‌ಗೆ ತಲುಪಿಸಲಾಗಿದೆ ಎಂದು ತನಿಖಾ ಮೂಲಗಳು ಹೇಳಿವೆ. ಅದರಲ್ಲಿ 80 ಲಕ್ಷ ರೂಪಾಯಿ ಓಂ ಶ್ರೀ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್‌ಗೆ ಜಮೆಯಾಗಿತ್ತು ಎಂದು ವರದಿಯಾಗಿದೆ.

ಇದೇ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಗಂಗ್ವಾರ್ ಅವರ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಗಂಗ್ವಾರ್ ಅವರ ಸಹೋದರನ ಖಾತೆಗೆ 10.94 ಲಕ್ಷ ರೂಪಾಯಿ ಹಾಗೂ ಅತ್ತಿಗೆಯ ಖಾತೆಗೆ 15.39 ಲಕ್ಷ ರೂಪಾಯಿ ಜಮೆಯಾಗಿರುವುದನ್ನು ತನಿಖಾ ಮೂಲಗಳು ಉಲ್ಲೇಖಿಸಿವೆ.

ಪ್ರಕರಣದ ತನಿಖೆ ಮುಂದುವರಿಸಿರುವ ಜಾರಿ ನಿರ್ದೇಶನಾಲಯವು ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಗೀತಾ ಅವರನ್ನೂ ಬಂಧಿಸಿ ವಿಚಾರಣೆ ನಡೆಸಿದೆ ಎಂದು ವರದಿಯಾಗಿದೆ. ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರಗಳು ಹಾಗೂ ಇತರ ಆರೋಪಗಳ ಕುರಿತು ತನಿಖಾ ಸಂಸ್ಥೆಗಳು ಮುಂದಿನ ಕ್ರಮ ಕೈಗೊಳ್ಳುತ್ತಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button