
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟದ ನಡುವೆಯೇ, ಹತ್ತರಗಿ ಟೋಲ್ ಪ್ಲಾಜಾ ಬಳಿ ರೈತರೊಬ್ಬರು ಏಕಾಏಕಿ ಮೇಲೇರಲು ಯತ್ನಿಸಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಟೋಲ್ ಪ್ಲಾಜಾ ಮೇಲೆ ಹತ್ತಿದ ರೈತ ಜಿಗಿಯಲು ಮುಂದಾಗುತ್ತಿದ್ದಂತೆ, ಅಲ್ಲಿದ್ದ ಪ್ರತಿಭಟನಾಕಾರರು ತಕ್ಷಣವೇ ಅವರನ್ನು ತಡೆಯಲು ಮುಂದಾದರು.
ರೈತನ ಕಾಲು ಹಿಡಿದು ಕೆಳಗೆ ಬೀಳದಂತೆ ಕಾಪಾಡಲು ಪ್ರತಿಭಟನಾಕಾರರು ಹರಸಾಹಸಪಟ್ಟರು. ಬಳಿಕ ರೈತ ಮುಖಂಡರು ಮಧ್ಯಪ್ರವೇಶಿಸಿ ಮನವೊಲಿಸಿದ ನಂತರ ರೈತ ಕೆಳಗಿಳಿದಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ.
ಘಟನೆಯಿಂದ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಆತಂಕ ಮನೆಮಾಡಿತ್ತು. ನಂತರ ರೈತ ಮುಖಂಡರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕಬ್ಬಿಗೆ ನ್ಯಾಯಯುತ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರ ಹೆದ್ದಾರಿ ತಡೆ ಹೋರಾಟ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



