HealthKannada NewsKarnataka NewsLatest

*ಕಬ್ಬು ಬೆಳೆಗಾರರ ಸಮಸ್ಯೆಗೆ ಶೀಘ್ರ ಪರಿಹಾರ*: *ಎರಡು ದಿನಗಳಲ್ಲಿ ಸಮಿತಿ ರಚನೆಗೆ ಪ್ರಹ್ಲಾದ್ ಜೋಶಿ ಭರವಸೆ!*

ಪ್ರಗತಿವಾಹಿನಿ ಸುದ್ದಿ: ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಮಿತಿ ರಚಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ. ರೈತರಿಗೆ ಕಬ್ಬಿನ ಬೆಲೆ ಕಡಿಮೆಯಾಗಬಾರದು, ಅದೇ ಸಮಯದಲ್ಲಿ ಗ್ರಾಹಕರಿಗೂ ಬೆಲೆ ಏರಿಕೆಯ ಹೊರೆ ಬೀಳಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ. ಎರಡು ದಿನಗಳಲ್ಲಿ ಸಮಿತಿ ರಚನೆಗೆ ಕ್ರಮ ಕೈಗೊಂಡಿದ್ದು, ರೈತರು ಸಹಕರಿಸಿದರೆ ನಾಲ್ಕೈದು ದಿನಗಳಲ್ಲೇ ಸಭೆ ನಡೆಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದರು. ಹಲವು ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಹಿಂದೆ ಎಥೆನಾಲ್ ಖರೀದಿಗೆ ಹೆಚ್ಚಿನ ಅವಕಾಶ ಇರಲಿಲ್ಲ. ಈಗ ಎಥೆನಾಲ್ ಖರೀದಿ ನಡೆಯುತ್ತಿದೆ ಎಂದು ಹೇಳಿದ ಸಚಿವರು, ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್ ಅನ್ನು ಸಂಪೂರ್ಣವಾಗಿ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು. ಆದರೆ, ಇತರ ಮೂಲಗಳಿಂದ ಉತ್ಪಾದನೆಯಾಗುವ ಎಥೆನಾಲ್ ಅನ್ನು ಸಂಪೂರ್ಣವಾಗಿ ಖರೀದಿಸಲು ಸಾಧ್ಯವಿಲ್ಲ ಎಂದರು.

ದೆಹಲಿ ಭೇಟಿಯ ವೇಳೆ ರೈತರು ಸಮಿತಿ ರಚನೆಗೆ ಒಪ್ಪಿಕೊಂಡಿದ್ದರು. ಅದರಂತೆ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ವರದಿ ನೀಡುವಂತೆ ಸೂಚಿಸಲಾಗಿದ್ದು, ರೈತರು ಸಹಕರಿಸಿದರೆ ನಾಲ್ಕೈದು ದಿನಗಳಲ್ಲೇ ಸಭೆ ನಡೆಸಬಹುದು ಎಂದು ಜೋಶಿ ಹೇಳಿದರು. ಕಬ್ಬು ಬೆಳೆಗಾರರು ತಮ್ಮದೇ ರೈತ ಸಮುದಾಯದ ಭಾಗವಾಗಿದ್ದು, ಆಕ್ರೋಶದಲ್ಲಿ ಏನೇ ಮಾತನಾಡಿದ್ದರೂ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ ಎಂದರು. ಹಬ್ಬದ ಸಮಯದಲ್ಲಿ ರೈತರು ಮನೆಗಳಿಗೆ ತೆರಳಿ ಕುಟುಂಬದೊಂದಿಗೆ ಹಬ್ಬ ಆಚರಿಸುವಂತೆಯೂ ಮನವಿ ಮಾಡಿದರು.

ಕಬ್ಬಿಗೆ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ನಿಗದಿಪಡಿಸುವಂತೆ ಕಳೆದ ವರ್ಷವೂ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಎಂದು ಜೋಶಿ ತಿಳಿಸಿದರು. ಕಬ್ಬಿನ ತೂಕ ಮತ್ತು ಸಕ್ಕರೆ ಅಂಶದ ರಿಕವರಿಯಲ್ಲಿ ನಡೆಯುವ ವಂಚನೆ ತಡೆಯಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದೇವೆ. ಈ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಿರುವ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದರು. ಮುಖ್ಯಮಂತ್ರಿಯೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದ್ದು, ಕಬ್ಬಿಗೆ ಎಸ್‌ಎಪಿ ಘೋಷಣೆ ಮಾಡುವಂತೆ ಮನವಿ ಮಾಡಿರುವುದಾಗಿ ಹೇಳಿದರು.

ಕೇಂದ್ರ ಸರ್ಕಾರ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಬೇಕಾಗುತ್ತದೆ ಎಂದು ಜೋಶಿ ವಿವರಿಸಿದರು. ಹೀಗಾಗಿ ಎಸ್‌ಎಪಿ ವಿಚಾರದಲ್ಲಿ ರಾಜ್ಯ ಸರ್ಕಾರವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬುದು ತಮ್ಮ ನಿಲುವು ಎಂದು ತಿಳಿಸಿದರು.

ಇದೇ ವೇಳೆ ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೂ ಜೋಶಿ ಪ್ರತಿಕ್ರಿಯಿಸಿದರು. ಸಾರ್ವಜನಿಕ ಜೀವನದಲ್ಲಿರುವವರು ನೈತಿಕತೆಯನ್ನು ಕಾಪಾಡಿಕೊಳ್ಳಬೇಕು. ಸ್ಟಿಂಗ್ ಆಪರೇಷನ್ ನಡೆಸಿದವರು ಯಾರು ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಪ್ರಕರಣದ ತನಿಖೆ ಮುಂದುವರಿಯದಿದ್ದರೆ ವಿಷಯ ಅಲ್ಲಿಗೇ ಮುಕ್ತಾಯವಾಗಬಹುದು ಎಂದು ಹೇಳಿದರು.

ಕೆಪಿಎಸ್‌ಸಿ ಹಗರಣದ ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಪ್ರಹ್ಲಾದ್ ಜೋಶಿ ಆಗ್ರಹಿಸಿದರು. ಸಮಗ್ರ ತನಿಖೆ ನಡೆದರೆ ಹಲವು ಸಚಿವರು ಸಿಲುಕಿಕೊಳ್ಳಬಹುದು ಮತ್ತು ಸರ್ಕಾರಕ್ಕೂ ಸಂಕಷ್ಟ ಎದುರಾಗಬಹುದು ಎಂಬ ಆರೋಪವನ್ನು ಮಾಡಿದರು. ಸರ್ಕಾರ ಘೋಷಿಸಿದ್ದ 2,500 ರೂಪಾಯಿ ಪರಿಹಾರ ಇನ್ನೂ ಫಲಾನುಭವಿಗಳಿಗೆ ವಿತರಣೆ ಆಗಿಲ್ಲ ಎಂದು ದೂರಿದರು. ಈ ವಿಚಾರಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸ್ಟಿಂಗ್ ಆಪರೇಷನ್ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂಬ ಆರೋಪವನ್ನೂ ಜೋಶಿ ಮುಂದಿಟ್ಟರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button