*‘365 ದಿನವೂ ನಿಮ್ಮೊಂದಿಗಿದ್ದು ಕೆಲಸ ಮಾಡಿ ಮತ ಕೇಳುತ್ತೇನೆ’*: *ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಮೋದಗಾ: ಗ್ರಾಮದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮದುವೆ, ಶುಭ ಸಮಾರಂಭಗಳು ಹಾಗೂ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಶ್ರೀ ಸಿದ್ಧೇಶ್ವರ ಸಮುದಾಯ ಭವನವನ್ನು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾನುವಾರ ಸಂಜೆ ಲೋಕಾರ್ಪಣೆಗೊಳಿಸಿದರು.
ನೂತನ ಸಮುದಾಯ ಭವನವನ್ನು ಸಾರ್ವಜನಿಕ ಬಳಕೆಗೆ ಸಮರ್ಪಿಸಿದ ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ತಾವು ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಿದ್ದು, ಕ್ಷೇತ್ರದ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಹನುಮಂತ ದೇವಸ್ಥಾನದ 93 ಎಕರೆ ಜಮೀನು ಬಿಡಿಸಿಕೊಟ್ಟಿದ್ದೇನೆ
ಮೋದಗಾ ಗ್ರಾಮದ ಹನುಮಂತ ದೇವಸ್ಥಾನಕ್ಕೆ ಸೇರಿದ 93 ಎಕರೆ ಜಮೀನನ್ನು ಬಿಡಿಸಿಕೊಟ್ಟಿದ್ದೇನೆ. ಈ ಕುರಿತು ಯಾರಾದರೂ ಸುಳ್ಳು ಹೇಳಿದರೆ ಅದನ್ನು ನಂಬಬೇಡಿ. ಅಂತಹವರು ಶ್ರೀ ಸಿದ್ಧೇಶ್ವರ ದೇವರ ಎದುರು ಬಂದು ಪ್ರಮಾಣ ಮಾಡಲಿ. ನಾನೂ ಪ್ರಮಾಣ ಮಾಡಲು ಸಿದ್ಧಳಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಂಸದ ಜಗದೀಶ್ ಶೆಟ್ಟರ್ ಇರಲಿ ಅಥವಾ ಮತ್ತಾರೇ ಇರಲಿ, ಈ ಊರಿಗೆ ಮತ್ತು ಕ್ಷೇತ್ರಕ್ಕೆ ಅವರು ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನರ ಮುಂದೆ ತಿಳಿಸಲಿ. ನಾನು ಅತ್ಯಂತ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿದ್ದೇನೆ. ಹೀಗಾಗಿ ಜನರ ಬಳಿ ಮತದ ಕೂಲಿ ಕೇಳುವ ಅಧಿಕಾರ ನನಗಿದೆ ಎಂದು ಅವರು ಹೇಳಿದರು.
ಚುನಾವಣೆ ಬಂದಾಗ ಮಾತ್ರ ಜನರ ಬಳಿಗೆ ಹೋಗಿ ಮತ ಕೇಳುವವಳು ನಾನಲ್ಲ. ವರ್ಷದ 365 ದಿನವೂ ನಿಮ್ಮೊಂದಿಗಿದ್ದು, ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿ ಮತ ಕೇಳುತ್ತೇನೆ. ಕ್ಷೇತ್ರದಲ್ಲಿ 156 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಂಡಿದ್ದೇನೆ. ಪ್ರತಿ ಗ್ರಾಮದಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದೇನೆ ಎಂದು ತಿಳಿಸಿದರು.
ಜಾತಿ, ಧರ್ಮದ ಹೆಸರಿನಲ್ಲಿ ಮನಸ್ಸಿನ ಜೊತೆ ಆಟವಾಡುವವರನ್ನು ನಂಬಬೇಡಿ: ಚನ್ನರಾಜ ಹಟ್ಟಿಹೊಳಿ
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಜಾತಿ, ಧರ್ಮ ಹಾಗೂ ಪಾಕಿಸ್ತಾನದ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಮನಸ್ಸಿನ ಜೊತೆ ಆಟವಾಡುವವರನ್ನು ನಂಬಬಾರದು ಎಂದು ಹೇಳಿದರು.
ಲಕ್ಷ್ಮೀ ಹೆಬ್ಬಾಳಕರ್ ಅವರು ಜನರೊಂದಿಗಿದ್ದು, ಅವರ ಅಗತ್ಯಗಳಿಗೆ ಸ್ಪಂದಿಸಿ ಕೆಲಸ ಮಾಡುವ ನಾಯಕಿಯಾಗಿದ್ದಾರೆ. ಇಂತಹ ಜನಪರ ಕಾರ್ಯಗಳಿಗೆ ಬೆಂಬಲ ನೀಡುವ ಮೂಲಕ ಅವರ ಕೈ ಬಲಪಡಿಸೋಣ ಎಂದು ಕರೆ ನೀಡಿದರು.

ಗ್ರಾಮದ ಬಹುದಿನಗಳ ಬೇಡಿಕೆ ಈಡೇರಿಕೆ
ಮೋದಗಾ ಗ್ರಾಮದಲ್ಲಿ ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ಸಿದ್ಧೇಶ್ವರ ಸಮುದಾಯ ಭವನವು ಗ್ರಾಮಸ್ಥರ ಬಹುದಿನಗಳ ಅಗತ್ಯವನ್ನು ಈಡೇರಿಸಿದೆ. ಮದುವೆ, ನಿಶ್ಚಿತಾರ್ಥ, ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿವಿಧ ಸಾಮಾಜಿಕ ಸಭೆ-ಸಮಾರಂಭಗಳನ್ನು ಆಯೋಜಿಸಲು ಈ ಭವನ ಅನುಕೂಲವಾಗಲಿದೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಸಹಕಾರಿಯಾಗಲಿದೆ.
ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಗ್ರಾಮದ ಹಿರಿಯರು, ಗಣ್ಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯರಾದ ಗಂಗಣ್ಣ ಕಲ್ಲೂರ್, ನಾಗೇಶ್ ದೇಸಾಯಿ, ಓಮಣ್ಣ ಅಷ್ಠೆಕರ್, ಅಬ್ದುಲ್ ಬಾಗವಾನ್, ಬಸವರಾಜ ಮ್ಯಾಗೋಟಿ, ಅಪ್ಪಯ್ಯಗೌಡ ಪಾಟೀಲ, ಮಹೇಶ್, ನಮೃತಾ ಕಾಳೆ, ಬಸವಣ್ಣಿ ಮುಗಳಿ, ಸಂಜಯ ಅಷ್ಠೆಕರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




