*ಬೆಳಗಾವಿಯಲ್ಲಿ ಹೆರಾಯಿನ್ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಸಮೀಪ ಹೆರಾಯಿನ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 3 ಲಕ್ಷ ರೂ. ಮೌಲ್ಯದ ಹೆರಾಯಿನ್ ಪೌಡರ್ ಹಾಗೂ ಎರಡು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಅ.17ರಂದು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ನಾಯಕ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಗರದ ರಾಷ್ಟ್ರೀಯ ಹೆದ್ದಾರಿ ಸಮೀಪದ ಜೈ ಕಿಸಾನ್ ಬಾಜಿ ಮಾರ್ಕೆಟ್ ಗೇಟ್ ನಂ.1ರ ಬಳಿ ದಾಳಿ ನಡೆಸಲಾಯಿತು.
ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ಸ್ವಂತ ಲಾಭಕ್ಕಾಗಿ ನಿಷೇಧಿತ ಮಾದಕ ವಸ್ತುವಾದ ಹೆರಾಯಿನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹಾಂತೇಶ ರಾಮಣ್ಣ ಅಂಬಿಗೇರ (37), ಆಕಾಶ ಸುರೇಶ ನಂದಿ (28) ಎಂಬುವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 2.90 ಲಕ್ಷ ರೂ. ಮೌಲ್ಯದ 14.49 ಗ್ರಾಂ ಹೆರಾಯಿನ್ ಪೌಡರ್ ಅನ್ನು 124 ಸಣ್ಣ ಪ್ಯಾಕೆಟ್ಗಳಲ್ಲಿ ಹಾಗೂ 10 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 3 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರು ಮಹಾರಾಷ್ಟ್ರದ ‘ಅಮ್ಮ’ ಎಂಬಾಕೆಯಿಂದ ಹೆರಾಯಿನ್ ಪೌಡರ್ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 21(ಬಿ) ಮತ್ತು 8(ಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರನೇ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




