Kannada NewsKarnataka NewsLatestPolitics

*ಕಬ್ಬು ಬೆಳೆಗಾರರ ಹೋರಾಟ ತೀವ್ರ:* *ಪ್ರಧಾನಿ ಮೋದಿಗೆ ಸಿಎಂ ಡಿ.ಕೆ.ಶಿವಕುಮಾರ್ ಪತ್ರ* – *5 ಪ್ರಮುಖ ಬೇಡಿಕೆಗಳಿಗೆ ತುರ್ತು ಪರಿಹಾರಕ್ಕೆ ಮನವಿ!*

ಕಬ್ಬು ಬೆಳೆಗಾರರ ಹೋರಾಟ ತೀವ್ರ: ಪ್ರಧಾನಿ ಮೋದಿಗೆ ಸಿಎಂ ಡಿ.ಕೆ.ಶಿವಕುಮಾರ್ ಪತ್ರ – 5 ಪ್ರಮುಖ ಬೇಡಿಕೆಗಳಿಗೆ ತುರ್ತು ಪರಿಹಾರಕ್ಕೆ ಮನವಿ!

*ಪ್ರಗತಿವಾಹಿನಿ ಸುದ್ದಿ/ಬೆಂಗಳೂರು :
ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುರ್ತು ಪತ್ರ (CM/304/GOI/2026, ದಿ.19.10.2026) ಬರೆದಿದ್ದಾರೆ.

ಪರಿಸ್ಥಿತಿ ಗಂಭೀರ:
ಉತ್ತರ ಕರ್ನಾಟಕದ ವಿವಿಧೆಡೆ ರೈತರು ಪ್ರತಿಭಟನೆ, ಹುಬ್ಬಳ್ಳಿ ಕಡೆಗೆ ಪಾದಯಾತ್ರೆ ನಡೆಸುತ್ತಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಯೋಜನೆ ಹೊಂದಿದ್ದಾರೆ. ಹಲವೆಡೆ ರಸ್ತೆ ತಡೆ ನಡೆದಿದೆ. ಹೈಕೋರ್ಟ್ ಪ್ರತಿಭಟನೆಗೆ ನಿರ್ಬಂಧ ಹೇರಿದೆ.

ಅ.17 ರಂದು ಕಿತ್ತೂರಿನಲ್ಲಿ ಪ್ರತಿಭಟನಾ ನಿರತ ರೈತರನ್ನು ಭೇಟಿಯಾಗಿ ಪಾದಯಾತ್ರೆ ಕೈಬಿಡುವಂತೆ ಮನವಿ ಮಾಡಿದ್ದೆ, ಆದರೆ ತಮ್ಮ ಪ್ರಮುಖ ಬೇಡಿಕೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ, ಕೇಂದ್ರದ ಭರವಸೆ ಇಲ್ಲದೆ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.

ಈ ಪ್ರತಿಭಟನೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಕಬ್ಬು ಅರೆಯುವ ಹಂಗಾಮು (Crushing Season) ಇನ್ನೂ ಆರಂಭವಾಗಿಲ್ಲ. ಹೊಲದಲ್ಲಿ ಬೆಳೆದ ಕಬ್ಬು ಒಣಗುತ್ತಿದ್ದು, ಪ್ರತಿದಿನ ವಿಳಂಬದಿಂದ ತೂಕ ಮತ್ತು ಸಕ್ಕರೆ ಅಂಶ ನಷ್ಟವಾಗುತ್ತಿದೆ.

ರಾಜ್ಯ ಸರ್ಕಾರ ಕೈಗೊಂಡ ಕ್ರಮ:

  • ತೂಕದ ಯಂತ್ರಗಳ ಅಕ್ರಮ ತಡೆಗೆ SOP ಜಾರಿ, 81 ಕಾರ್ಖಾನೆಗಳಲ್ಲಿ ಡಿಜಿಟಲ್ ಲೋಡ್ ಸೆಲ್ ಅಳವಡಿಕೆ
  • ಸಕ್ಕರೆ ಇಳುವರಿ ಪರಿಶೀಲನೆಗೆ ಜಿಲ್ಲಾ ಮಟ್ಟದ ತಂಡ
  • ಸರಾಸರಿ ಇಳುವರಿ 2022-23ರಲ್ಲಿ 9.91% ಇದ್ದದ್ದು 2025-26ರಲ್ಲಿ 11.09% ಕ್ಕೆ ಏರಿಕೆ
  • 2025-26ರಲ್ಲಿ ಪ್ರತಿ ಟನ್ ಗೆ ₹100 ಹೆಚ್ಚುವರಿ ಬೆಲೆ, ಅದರಲ್ಲಿ ₹50 ರಾಜ್ಯ ಸರ್ಕಾರ ಭರಿಸಿದೆ – ಸುಮಾರು ₹290 ಕೋಟಿ ರೈತರಿಗೆ ನೇರ ಪಾವತಿ

ಆದರೂ ರೈತರ ಮೂಲ ಬೇಡಿಕೆಗಳು ಕೇಂದ್ರದ ವ್ಯಾಪ್ತಿಗೆ ಬರುತ್ತವೆ ಎಂದಿದ್ದಾರೆ.

ಕೇಂದ್ರ ಸರ್ಕಾರ ರಚಿಸಿದ ಸಮಿತಿಯನ್ನು ಸ್ವಾಗತಿಸಿದ ರಾಜ್ಯ:
ಅ.14, 2026 ರಂದು ನೀತಿ ಆಯೋಗದ ಮಾಜಿ ಸದಸ್ಯ ರಮೇಶ್ ಚಾಂದ್ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಶೀಲನೆಗೆ ಕೇಂದ್ರ ಸಮಿತಿ ರಚಿಸಿರುವುದನ್ನು ರಾಜ್ಯ ಸ್ವಾಗತಿಸಿದೆ. ಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ. ಆದರೆ ಹಂಗಾಮು ವಿಳಂಬವಾಗುತ್ತಿರುವುದರಿಂದ ಕೆಲವು ತುರ್ತು ನಿರ್ಧಾರಗಳನ್ನು ಸಮಿತಿ ಕೆಲಸ ಮುಂದುವರೆದಿರುವಾಗಲೇ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಧಾನಿಗೆ ಇಟ್ಟ 5 ಪ್ರಮುಖ ಬೇಡಿಕೆಗಳು:

1. ಸಕ್ಕರೆ ಕನಿಷ್ಠ ಮಾರಾಟ ಬೆಲೆ (MSP) ಪರಿಷ್ಕರಣೆ: ಸಕ್ಕರೆ MSP 14.02.2019 ರಿಂದ ₹31/kg ನಲ್ಲೇ ಇದೆ, ಆದರೆ FRP ₹2,750 ರಿಂದ ₹3,650/ಟನ್ ಗೆ ಏರಿದೆ. 2019ರ ಸಕ್ಕರೆ ಬೆಲೆಯಲ್ಲಿ ಕಾರ್ಖಾನೆಗಳು ನ್ಯಾಯಯುತ ಕಬ್ಬು ಬೆಲೆ ಕೊಡಲು ಸಾಧ್ಯವಿಲ್ಲ.

2. ದೇಶೀಯ ಮತ್ತು ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ MSP: ಗೃಹ ಬಳಕೆದಾರರನ್ನು ರಕ್ಷಿಸಿ, ವಾಣಿಜ್ಯ ಬೃಹತ್ ಖರೀದಿದಾರರು ನ್ಯಾಯಯುತ ಬೆಲೆ ಕೊಡುವಂತೆ ಮಾಡಲು.

3. ಕಬ್ಬು ಆಧಾರಿತ ಎಥೆನಾಲ್ ಟೆಂಡರ್ ನಿಂದ ಹೊರಗಿಟ್ಟಿರುವುದನ್ನು ಮರುಪರಿಶೀಲಿಸಲು: 16.10.2026 ರಂದು ತೈಲ ಕಂಪನಿಗಳು 2026-27 ಎಥೆನಾಲ್ ಪೂರೈಕೆ ವರ್ಷಕ್ಕೆ ಹೊರಡಿಸಿದ ಟೆಂಡರ್ ನಲ್ಲಿ ಕಬ್ಬಿನ ರಸ, ಸಿರಪ್ ಮತ್ತು B-Heavy Molasses ನಿಂದ ತಯಾರಿಸಿದ ಎಥೆನಾಲ್ ಅನ್ನು ಹೊರಗಿಟ್ಟು, C-Heavy ನಿಂದ ತಯಾರಿಸಿದ್ದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲಿ ವಾರ್ಷಿಕ 225 ಕೋಟಿ ಲೀಟರ್ ಸಾಮರ್ಥ್ಯವಿದೆ. ಇದರಿಂದ ಕಾರ್ಖಾನೆ ಆದಾಯಕ್ಕೆ ಹೊಡೆತ ಬಿದ್ದು ರೈತರಿಗೆ ಪಾವತಿ ವಿಳಂಬವಾಗುತ್ತದೆ.

4. ಕಬ್ಬು ಆಧಾರಿತ ಎಥೆನಾಲ್ ಬೆಲೆ ಏರಿಕೆ: ಕಬ್ಬಿನ ರಸ ಮತ್ತು B-Heavy ಎಥೆನಾಲ್ ಬೆಲೆ 2022-23 ರಿಂದ ಏರಿಕೆಯಾಗಿಲ್ಲ, ಆದರೆ FRP ಪ್ರತಿ ವರ್ಷ ಏರಿಕೆಯಾಗಿದೆ. ಧಾನ್ಯ ಆಧಾರಿತ ಎಥೆನಾಲ್ ಬೆಲೆ ಏರಿಕೆಯಾಗಿದೆ.

5. FRP ಮೂಲ ಚೇತರಿಕೆ (Base Recovery) 9.50% ಗೆ ಮರುಸ್ಥಾಪನೆ: ಈ ಹಿಂದೆ 9.50% ಇದ್ದ ಮೂಲ ಚೇತರಿಕೆಯನ್ನು ಹಂತ ಹಂತವಾಗಿ 10.25% ಗೆ ಏರಿಸಲಾಗಿದೆ. ಮಣ್ಣು, ಹವಾಮಾನ, ಅರೆಯುವ ಸಮಯದ ಮೇಲೆ ಇಳುವರಿ ಅವಲಂಬಿತವಾಗಿದ್ದು, ರೈತರ ನಿಯಂತ್ರಣದಲ್ಲಿ ಇಲ್ಲ. ಇದರಿಂದ ಕಡಿಮೆ ಇಳುವರಿ ಪ್ರದೇಶದ ರೈತರಿಗೆ ಮೂಲ FRP ಕೂಡ ಸಿಗುತ್ತಿಲ್ಲ. ಆದ್ದರಿಂದ 9.50% ಗೆ ತರುವಂತೆ ಮನವಿ.

“ಈ ವಿಷಯಗಳಲ್ಲಿ ಕೇಂದ್ರದ ಸ್ಪಷ್ಟ ಮತ್ತು ಸಮಯೋಚಿತ ಘೋಷಣೆಯಿಂದ ರಾಜ್ಯ ಸರ್ಕಾರ ರೈತರ ಮನವೊಲಿಸಿ ಹೋರಾಟ ಕೈಬಿಡಿಸಿ, ಅರೆಯುವ ಹಂಗಾಮನ್ನು ವಿಳಂಬವಿಲ್ಲದೆ ಆರಂಭಿಸಲು ಅನುಕೂಲವಾಗುತ್ತದೆ. ಲಕ್ಷಾಂತರ ಕಬ್ಬು ಬೆಳೆಗಾರರು ಮತ್ತು ಕರ್ನಾಟಕ ಜನತೆಯ ಹಿತದೃಷ್ಟಿಯಿಂದ ತುರ್ತು ಮಧ್ಯಪ್ರವೇಶಕ್ಕೆ ಮನವಿ ಮಾಡುತ್ತೇನೆ” ಎಂದು ಸಿಎಂ ಪತ್ರದಲ್ಲಿ ಕೋರಿದ್ದಾರೆ.

#Pragativahini #SugarcaneFarmers #DKShivakumar #PMModi #KarnatakaNews

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button