Kannada NewsKarnataka NewsPolitics

*ದಸರಾ ದೀಪಾಲಂಕಾರ ವಿಸ್ತರಣೆ*: ಸಿಎಂ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: “ಕಬ್ಬು ಬೆಳೆಗಾರರ ವಿಚಾರವಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಅವರಿಂದ ಪ್ರಯೋಜನವಾಗುವ ಬಗ್ಗೆ ನನಗೆ ವಿಶ್ವಾಸವಿದೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

“ಕಬ್ಬು ಬೆಳೆಗಾರರ ಹಿತ ಕಾಪಾಡಲು ನಾನು ಪ್ರಯತ್ನ ಪಟ್ಟಿದ್ದೇನೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಪ್ರಯತ್ನ ಪಟ್ಟು, ಕೊನೆಗೆ ಮತ್ತೆ ಕಾಂಗ್ರೆಸ್ ಮೇಲೆ ಹಾಕಿದ್ದಾರೆ. ಕೇಂದ್ರ ಸರ್ಕಾರದ ಬಗ್ಗೆ ಈಗ ಏನು ಮಾತನಾಡುವುದಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಎಲ್ಲರೂ ಸೇರಿ ಬಗೆಹರಿಸಬೇಕು” ಎಂದು ಹೇಳಿದರು.

ರೈತರ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ

“ನನಗೆ ಈ ವಿಚಾರವಾಗಿ ರಾಜಕಾರಾಣ ಮಾಡೋಕೆ ಇಷ್ಟ ಇಲ್ಲ. ರೈತರ ಹತ್ತಿರ ಏನು ರಾಜಕಾರಣ ಮಾಡ್ತೀರ? ರಾಜಕಾರಣ ಮಾಡೋಕೆ ಬೇರೆ ಜನ ಇದ್ದಾರೆ. ಅವರು ಮಾಡುತ್ತಾರೆ. ಅವರು ಟೀಕೆ ಮಾಡುತ್ತಿರಲಿ. ಅದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ” ಎಂದರು.

ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಗಳ ಭೇಟಿ

ಮುಂದಿನ ವಾರ ಬರದ ವಿಚಾರವಾಗಿ ಪ್ರಧಾನಿಗಳಿಗೆ ಮನವಿಯನ್ನು ಸಲ್ಲಿಸುತ್ತೀರ ಎಂದು ಕೇಳಿದಾಗ, “ಹೌದು, ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಗಳನ್ನು ಭೇಟಿಯಾಗಿ ಮನವಿಯನ್ನು ಮಾಡುತ್ತೇವೆ. ವಿರೋಧ ಪಕ್ಷದವರೂ ಕೂಡ ನಮ್ಮ ಜೊತೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ಈಗ ಏಕೆ ಸುಮ್ಮನೆ ಇದ್ದೀನಿ ಎಂದರೆ, ಬರಗಾಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲಾ ಕಡೆ ಇದೆ. ದಸರಾ ಮುಗಿದು ರಾಜ್ಯೋತ್ಸವದ ನಡುವೆ ಮಧ್ಯದಲ್ಲಿ ಪ್ರಧಾನಿಗಳು ಸಮಯ ಕೊಟ್ಟರೆ ಹೋಗಿ ಮಾತನಾಡುತ್ತೇನೆ” ಎಂದರು.

10 ದಿನಗಳ ಕಾಲ ದಸರಾ ಲೈಟಿಂಗ್ ಮುಂದುವರಿಕೆ

ದಸರಾ ಲೈಟಿಂಗ್ ನೋಡುವುದಕ್ಕಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ. ಇದನ್ನು ಮತ್ತಷ್ಟು ದಿನ ವಿಸ್ತರಿಸುವ ಚಿಂತನೆ ಇದೆಯೇ ಎನ್ನುವ ಪ್ರಶ್ನೆಗೆ, “ದಸರಾ ಲೈಟಿಂಗ್ ಅನ್ನು 10 ದಿನಗಳ ಕಾಲ ಮುಂದುವರಿಸುವ ಯೋಜನೆ ಇದೆ. ಸದ್ಯದಲ್ಲಿಯೇ ಈ ಬಗ್ಗೆ ಘೋಷಣೆಯಾಗಲಿದೆ’ ಎಂದು ಮಾಹಿತಿ ನೀಡಿದರು.

“ದಸರಾಕ್ಕೆ ವಿಜಯನಗರ ಕಾಲದಿಂದ ಅರಸು ಕಾಲದ ತನಕ ಇತಿಹಾಸ ಇದೆ. ಕಂಬಳ ಕದರಿ ಮಂಜುನಾಥ ದೇವರಿಗಾಗಿ ಶುರುಮಾಡಿದ್ದು. ವಿಜಯನಗರ ಕಾಲದಿಂದಲೂ ಕೋಣಗಳಿಗೆ ಗೌರವ ಕೊಡುವ ಪದ್ಧತಿ ಇದೆ.
ಚಾಮುಂಡಿಗೆ ತೆಂಗಿನ ಕಾಯಿ ಹೊಡೀತಿವಲ್ಲ. ಆ ಕಾಯನ್ನು ಕಂಬಳಕ್ಕೆ ಬಹುಮಾನವಾಗಿ ನೀಡುತ್ತಿದ್ದರು. ಈಗ ಚಿನ್ನದ ನಾಣ್ಯ ಕಾಡೊತ್ತಾರೆ. ಅದನ್ನು ಮಾರಾಟ ಮಾಡುವುದಿಲ್ಲ. ಮದುವೆಗೆ ದಾನವಾಗಿ ಕೊಡ್ತಾರೆ” ಎಂದು ಹೇಳಿದರು.

“ಕೋಣಗಳನ್ನು ಸಾಕುವುದಕ್ಕೆ15ರಿಂದ 20 ಲಕ್ಷ ಖರ್ಚು ಮಾಡ್ತಾರೆ. ಮಕ್ಕಳಂತೆ ಪೋಷಣೆ ಮಾಡ್ತಾರೆ. ಕಂಬಳ ನಡೆಸಲು 3 ಸಾವಿರ ಜನ ಬಂದಿದ್ದಾರೆ. ಲಕ್ಷಾಂತರ ಜನ ನೋಡಿದ್ದಾರೆ. ನಾವು ದಸರಾದಲ್ಲಿ ಹೊಸ ಪರಂಪರೆ ಪ್ರಾರಂಭ ಮಾಡಿದ್ದೇವೆ. ಹೊಸದಾಗಿ ನಾವು ಏರ್ ಶೋ ಆರಂಭಿಸಿದ್ದೇವೆ. ಯುವ ದಸರಾ ಮಾಡಿ ಹೊರಗಡೆ ರಾಜ್ಯದವರನ್ನು ಕರೆದು ಲಕ್ಷಾಂತರ ಜನ ಯುವಕರಿಗೆ ಮನೋರಂಜನೆಯನ್ನು ಕೊಟ್ಟಿದ್ದೇವೆ” ಎಂದರು.

“ತುಳುನಾಡು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕೊಡಗು, ತುಮಕೂರು ಚಾಮರಾಜನಗರ, ಶ್ರೀರಂಗಪಟ್ಟಣದಲ್ಲಿ ಹೀಗೆ ರಾಜ್ಯದ ಎಲ್ಲಾ ಕಡೆ ದಸರಾ ನಡೆಯುತ್ತಿದೆ. ಇದು ನಮ್ಮ ದೇಶದ ಸಂಸ್ಕೃತಿ. ಕಲೆ, ಸಾಹಿತ್ಯ ನಮ್ಮ ಆಸ್ತಿ. ಇದನ್ನು ಉಳಿಸುವುದಕ್ಕೆ ಬೆಳೆಸುವುದಕ್ಕೆ ಪ್ರೋತ್ಸಾಹ ನೀಡಬೇಕು. ಈ ಕೆಲಸ ನಾವು ಮಾಡುತ್ತಿದ್ದೇವೆ” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button