
ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿ
ಪ್ರಗತಿವಾಹಿನಿ ಸುದ್ದಿ: ಚೀನಾದ ಸಿಚುವಾನ್ ಯುಯಾಂದ ಮೀಲೆ ಹಾಗೂ ಜಪಾನ್‌ನ ಡೆನ್ಸೊ ಐರಿಸ್ ತಂಡಗಳು ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದವು. ಉಭಯ ತಂಡಗಳು ಭಾನುವಾರ ನಡೆಯಲಿರುವ ಫೈನಲ್ ಕದನದಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ.
ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡ 93-74 ಅಂಕಗಳಿಂದ ಕೊರಿಯಾದ ಕೆ.ಬಿ.ಸ್ಟಾರ್ಸ್ ತಂಡವನ್ನು ಸೋಲಿಸಿದರೆ, ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಡೆನ್ಸೊ ಐರಿಸ್ ತಂಡ 86-78 ಅಂಕಗಳಿಂದ ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ತಂಡವನ್ನು ಮಣಿಸಿತು.
- ಡೆನ್ಸೊ ಐರಿಸ್-ಕ್ಯಾಥೆ ಲೈಫ್ ಟೈಗರ್ಸ್ ಸಮಬಲದ ಹೋರಾಟ
ಎರಡನೇ ಸೆಮಿಫೈನಲ್ ಮುಖಮುಖಿಯಲ್ಲಿ ಡೆನ್ಸೊ ಐರಿಸ್ ಹಾಗೂ ಕ್ಯಾಥೆ ಲೈಫ್ ಟೈಗರ್ಸ್ ಸಮಬಲದ ಪೈಪೋಟಿ ನಡೆಸಿದವು. ಆರಂಭಿಕ ಹಂತದಲ್ಲಿ ಕ್ಯಾಥೆ ಲೈಫ್ ಟೈಗರ್ಸ್ ಮುನ್ನಡೆ ಸಾಧಿಸಿದರೂ ಡೆನ್ಸೊ ಐರಿಸ್ ತಂಡ ತಿರುಗೇಟು ನೀಡಿತು. ಇದರಿಂದ ಮೊದಲಾರ್ಧದಲ್ಲಿ ಡೆನ್ಸೊ ಐರಿಸ್ ತಂಡ 48-35 ಅಂಕಗಳಿಂದ ಮುನ್ನಡೆ ಸಾಧಿಸಿತು. ಬಳಿಕ ಎರಡನೇ ಮೂರನೇ ಕ್ವಾರ್ಟರ್ ನಲ್ಲಿ ಸಮಬಲ ಹೋರಾಟ ನಡೆದರೂ ಡೆನ್ಸೊ ಐರಿಸ್ ತಂಡ ಗೆಲುವಿನ ನಗೆ ಬೀರಿತು. - ಸಿಚುವಾನ್ ಯುಯಾಂದ ಮೀಲೆಗೆ ಸುಲಭ ಜಯ
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡ 93-74 ಅಂಕಗಳಿಂದ ಕೊರಿಯಾದ ಕೆ.ಬಿ.ಸ್ಟಾರ್ಸ್ ತಂಡವನ್ನು ಸೋಲಿಸಿತು. 2024ನೇ ಆವೃತ್ತಿಯ ಚಾಂಪಿಯನ್ ಆಗಿರುವ ಸಿಚುವಾನ್ ಯುಯಾಂದ ಮೀಲೆ ಭರ್ಜರಿ ನಿರ್ವಹಣೆ ಎದುರು ಕೊರಿಯಾ ತಂಡದ ಆಟಗಾರ್ತಿಯರು ಸಂಪೂರ್ಣ ಮಂಕಾದರು. ಮೊದಲ ಕ್ವಾರ್ಟರ್‌ನಲ್ಲೆ 26-18 ಅಂಕಗಳಿಂದ ಮುನ್ನಡೆ ಸಾಧಿಸಿದ್ದ ಚೀನಾ ತಂಡ, ಮೊದಲಾರ್ಧದಲ್ಲಿ 51-31 ಅಂಕಗಳಿಂದ ಭರ್ಜರಿ ಮುನ್ನಡೆ ಕಂಡಿತು.
ಮೂರನೇ ಹಾಗೂ ನಾಲ್ಕನೇ ಕ್ವಾರ್ಟರ್‌ನಲ್ಲೂ ಬಿಗಿ ಹಿಡಿತ ಸಾಧಿಸಿದ ಚೀನಾ ತಂಡ ಸುಲಭದ ನಗೆ ಬೀರಿತು. ಈ ಮೂಲಕ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶ ಪಡೆಯಿತು. ಚೀನಾ ತಂಡದ ಪರ ಡಬ್ಲ್ಯುಎನ್‌ಬಿಎಲ್ ಆಟಗಾರ್ತಿ, ಅಮೆರಿಕ ಮೂಲದ ಕೆನ್ನಡಿ ಕಾರ್ಟರ್ (31 ಅಂಕ), ಸಾರಾ ಬ್ಲಿಕ್ವಾಸ್ ಹಾಗೂ ನಾಯಕಿ ಸಾಂಗ್ ಗೋವ್ ತಲಾ 22 ಅಂಕಗಳನ್ನು ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
- ಭಾರತೀಯ ರೈಲ್ವೇಸ್ ತಂಡಕ್ಕೆ ಸೋಲು
ಭಾರತೀಯ ರೈಲ್ವೇಸ್ ತಂಡ 5 ಹಾಗೂ 6ನೇ ಸ್ಥಾನಕ್ಕಾಗಿ ನಡೆದ ಕ್ಲಾಸಿಫಿಕೇಷನ್ ಹಣಾಹಣಿಯಲ್ಲಿ ಫಿಲಿಫೈನ್ಸ್‌ನ ಅಕಾರಿ ಸ್ಪಾರ್ಕ್ಸ್ ಎದುರು ಸೋಲನುಭವಿಸಿತು. ಅಂತಿಮ ಅವಧಿಯಾಟದಲ್ಲಿ ಪ್ರಬಲ ಹೋರಾಟ ತೋರಿದರೂ ಭಾರತೀಯ ರೈಲ್ವೇಸ್ ತಂಡ 56-86 ಅಂಕಗಳಿಂದ ಫಿಲಿಫೈನ್ಸ್‌ನ ಅಕಾರಿ ಸ್ಪಾರ್ಕ್ಸ್ ತಂಡಕ್ಕೆ ಶರಣಾಯಿತು. ಇದರಿಂದ ಲೀಗ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಭಾರತೀಯ ರೈಲ್ವೇಸ್ ತಂಡ ಸೋಲು ಕಂಡಿತು. ಪರಾಜಿತ ತಂಡದ ಪರ ನಾಯಕಿ ಪುಷ್ಪಾ ಸೆಂಥಿಲ್ ಕುಮಾರ್ ಹಾಗೂ ಹರಿಮಾ ಸುಂದರಿ ತಲಾ 13 ಅಂಕಗಳನ್ನು ಕಲೆಹಾಕಿ ಗಮನಸೆಳೆದರು.
ಫೈನಲ್ ಪಂದ್ಯ
ಸಿಚುವಾನ್ ಯುಯಾಂದ ಮೀಲೆ- ಡೆನ್ಸೊ ಐರಿಸ್
ಆರಂಭ: ರಾತ್ರಿ 7 ಗಂಟೆಗೆ
ಮೂರನೇ ಸ್ಥಾನಕ್ಕಾಗಿ ಪಂದ್ಯ:
ಕೆ.ಬಿ.ಸ್ಟಾರ್ಸ್-ಕ್ಯಾಥೆ ಲೈಫ್ ಟೈಗರ್ಸ್
ಆರಂಭ: ಸಂಜೆ 4 ಗಂಟೆಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


