ಹಳೇ ಸಿನೇಮಾ; ಹಳೇ ಥೇಟರ್
ನೀತಾ ರಾವ್, ಬೆಳಗಾವಿ
ಇಂದಿನ ದಿನಗಳಲ್ಲಿ ಒಂದು ಭಾನುವಾರ ಸಿನೆಮಾ ನೋಡಬೇಕೆಂದು ಟಿ.ವ್ಹಿ. ಮುಂದೆ ಕುಳಿತು, ನಡುನಡುವೆ ಜಾಹಿರಾತುಗಳಿಗಾಗಿ ಕೊಡುವ ಬ್ರೇಕ್ ಗಳಲ್ಲಿ ಮನೆಯವರಿಗೆ ಟೀ, ಕಾಫಿ ಸಮಾರಾಧನೆ ಮಾಡಿ, ಮತ್ತೇನಾದರೂ ಸಣ್ಣಪುಟ್ಟ ಕೆಲಸ ಮಾಡುತ್ತಲೇ ನಡುನಡುವೆ ಬಂದು ಕುಳಿತುಕೊಂಡು ನಾಲ್ಕು ತಾಸಿನ ದೀರ್ಘವಾದ ಸಿನೆಮಾ+ಜಾಹಿರಾತುಗಳನ್ನು ನೋಡುವಾಗ ಮಧ್ಯೆ ಮಧ್ಯೆ ಮಕ್ಕಳು, ಮನೆಯವರು ರಿಮೋಟ್ ಕಸಿದುಕೊಂಡು ‘ಕ್ರಿಕೆಟ್ ಸ್ಕೋರ್ ಎಷ್ಟಾಯ್ತು ನೋಡಿ ಕೊಟ್ಟುಬಿಡ್ತೀನಿ’ ಅಂತ ತಲೆ ಚಿಟ್ಟು ಹಿಡಿಸುವುದು, ಮಧ್ಯೆ ಯಾರೋ ಮನೆಬಾಗಿಲಿಗೇ ಬಂದು ಹಪ್ಪಳ-ಸಂಡಿಗೆ ಬೇಕಾ ಎನ್ನುವುದು, ನಾನು ಅಸಹನೆಯಿಂದಲೇ ಬೇಡ ಬೇಡ ಎಂದು ಬೇಗ ಮಾತು ಮುಗಿಸಲು ಗಡಿಬಿಡಿ ಮಾಡಿದರೂ ಅವನು ಈ ವಾರ ಚುಡಿದಾರ ಸೆಟ್ ಕೂಡಾ ತಂದಿದಿನಿ ನೋಡ್ತೀರಾ ಎಂದು ಗೋಗರೆಯುವುದು – ಎಲ್ಲದರ ಮಧ್ಯೆ ಈ ಹಾಳು ಸಿನೆಮಾನೂ ಬೇಡ, ಟಿ.ವ್ಹಿ. ಸಹವಾಸಾನೂ ಬೇಡ ಎಂದು ಎದ್ದು ಹೋಗಿ ಬೆಡ್ ರೂಮಿನ ಬಾಗಿಲು ಹಾಕಿ ಮಲಗಿಕೊಂಡು ನಿದ್ರೆಯಿಲ್ಲದೇ ಒದ್ದಾಡುವಾಗ ನಮ್ಮ ಹಳೆಯ ಕಾಲೇಜು ದಿನಗಳ ಸಿನೆಮಾ ನೋಡುವ ಸಂಭ್ರಮದ ಗತವೈಭವ ಕಣ್ಣಿಗೆ ಕಟ್ಟುತ್ತದೆ.
ಅವು ಎಂಬತ್ತರ ದಶಕದ ಆರಂಭದ ದಿನಗಳು, ನಾವೂ ಆಗಷ್ಟೇ ಶಾಲೆ ಮುಗಿಸಿ ಪಿ.ಯು.ಸಿ.ಗೆ ಕಾಲೇಜು ಕಟ್ಟೆ ಏರಿದವರು. ಬೆಳಗಾವಿಯ ತುಂಬೆಲ್ಲಾ ಎಲ್ಲಿ ನೋಡಿದರಲ್ಲಿ ಟಾಕೀಜುಗಳು ತುಂಬಿದ್ದವು. ಮನೆಯ ಹತ್ತಿರವೇ ಎಂಟು-ಹತ್ತು ಥೇಟರುಗಳು. ಒಂದಂತೂ ಮನೆಯ ಹಿತ್ತಲಿನಲ್ಲೇ, ರೇಡಿಯೊ ಥೇಟರ ಅಂತ. ಮನೆಯಿಂದ ನಾಲ್ಕು ಹೆಜ್ಜೆ ನಡೆದರೆ ರಿಟ್ಝ್ ಟಾಕೀಜು. ಮತ್ತೆ ಹುರುಪು, ಕಸುವು ಎರಡೂ ಇದ್ದ ಕಾಲದಲ್ಲಿ ಕಪೀಲ್, ಕೃಷ್ಣಾ, ಬಾಳಕೃಷ್ಣಾ, ಗ್ಲೋಬ್, ರೂಪಾಲಿ, ಅಝಾದ್, ಅರುಣ, ಹೀಗೆ ಯಾವ ಥೇಟರಗಳೂ ದೂರವಲ್ಲ ನಮಗೆ. ಒಂದು ಸಿನೆಮಾ ಬರುವುದಿದೆಯೆಂದರೆ ಅದರ ಕಥೆ ಏನಿರಬಹುದು, ನಾಯಕ-ನಾಯಕಿ ಯಾರು ಯಾರು, ನಿರ್ದೇಶಕ ಯಾರು, ಹಾಡುಗಳನ್ನು ಯಾರು ಯಾರು ಹಾಡಿದ್ದಾರೆ, ಅವು ಚೆನ್ನಾಗಿವೆಯೇ, ಎಂದೆಲ್ಲಾ ಚರ್ಚೆಯಾಗುತ್ತಿತ್ತು, ಗೆಳತಿಯರ ಮಧ್ಯೆ, ಮುಖ್ಯವಾಗಿ ನಾವಿಬ್ಬರು ಅಕ್ಕ-ತಂಗಿಯರ ಮಧ್ಯೆ. ಆನಂತರ, ಹಾಗಾದರೆ ಸಿನೆಮಾಕ್ಕೆ ಹೋಗುವುದೋ ಬೇಡವೋ ಎಂದು ಡಿಸೈಡ್ ಮಾಡಿ ಕಾಲೇಜಿನಿಂದ ಬಂದವರೇ ಗಬಗಬನೇ ಊಟ ಮಾಡಿ ಅಮ್ಮನ ಮುಂದೆ ಹಾಜರಾಗಿ ಬೇಡಿಕೆಯಿಡುವುದು. ಅವಳು ಮೊದಲು “ಊಹೂಂ, ಊಹೂಂ, ಆ ಸಿನೆಮಾ ನೋಡಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಈಗ ಇಷ್ಟು ಬೇಗ ಇನ್ನೊಂದಕ್ಕೆ ಕಳಿಸುವುದಿಲ್ಲ” ಎನ್ನುವಳು. “ಅಮ್ಮಾ ಪ್ಲೀಜ್” ಅಂತ ಗೋಗರೆತದ ನಂತರ “ಹಾಗಾದ್ರೆ ಬಾಲ್ಕನಿಗೆ ಹೋಗಬೇಡ್ರಿ, ಸ್ಟಾಲಿಗೆ ಹೋಗಿ ಸಾಕು” ಅಂತ ಒಂದು ಕಂಡಿಷನ್ ಹಾಕುವಳು. ಅಂತೂ ಒಪ್ಪಿಗೆ ಸಿಕ್ಕಿತಲ್ಲಾ ಅಷ್ಟೇ ಸಾಕು ಅಂತ ನಾವು ಓಡುವುದು.
ಅಲ್ಲಿ ನೋಡಿದರೆ ಗದ್ದಲವೋ ಗದ್ದಲ. ಉದ್ದಾನುದ್ದ ಕ್ಯೂಗಳು- ಹುಡುಗರ ಕ್ಯೂ ಬೇರೆ, ಹುಡುಗಿಯರದೇ ಬೇರೆ. ಅಷ್ಟರ ಮೇಲೆ “ಒಬ್ಬರಿಗೆ ಎರಡೇ ಟಿಕೆಟ್ ಕೊಡ್ತಾರಂತೆ ಕಣೆ” ಅಂತ ಮುಂದೆ ನಿಂತವರಾರೋ ಹೆದರಿಸುವುದು. ಹಾಗಾಗಿ ಎನಾದರಾಗಲಿ ಎಂದು ಎಲ್ಲರೂ ಕ್ಯೂನಲ್ಲಿ ನಿಂತೇ ಬಿಡುವುದು. ಉಡಾಫೆ ಮಾಡ್ಕೊಂಡು ಲೇಟಾಗಿ ಬಂದ ಹುಡುಗರು ನಮ್ಮ ಹತ್ತಿರ ಬಂದು ಬಹಳ ಸಭ್ಯರಂತೆ ಸುಳ್ಳು ಸುಳ್ಳೇ ನಟಿಸುತ್ತಾ, “ಸಿಸ್ಟರ್ ಸಿಸ್ಟರ್, ನಮಗೆರಡು ಟಿಕೆಟ್ ತೆಗಿಸಿಕೊಡಿ ಸಿಸ್ಟರ್, ಹುಡುಗರ ಲೈನಲ್ಲಿ ಭಾಳ ರಷ್ ಇದೆ” ಎಂದು ದೈನಾಸಿ ಪಡುವುದು ಕೇಳಿ ಮೇಲೆ ಮೇಲೆ “ಹೂಂ ಹೂಂ” ಎಂದು ದುಡ್ಡಿಸಿದುಕೊಂಡ್ರೂ ಅವರು ಸ್ವಲ್ಪ ಆಚೆ ಹೋಗುತ್ತಲೂ ಈ ಕಡೆ “ಸಿಸ್ಟರ್ ಮೈ ಫುಟ್” ಅಂತ ಆ ಹುಡುಗರನ್ನು ಬೈಯ್ಯುವುದು, ಆದ್ರೂ “ಇರ್ಲಿ ಪಾಪ, ಅವೂ ನೋಡ್ಕೊಳ್ಲಿ” ಅಂತ ಒಂದೆರಡು ಟಿಕೆಟು ತೆಗಿಸಿಕೊಟ್ಟು ಉಪಕಾರ ಮಾಡಿ, ಅವರ ಥ್ಯಾಂಕ್ಸಿಗೆ ಒಂದು ಹೂನಗೆ ನಕ್ಕು ಸೀಟು ಹಿಡಿಯಲು ಧಾವಿಸುವುದು.
ಗುದ್ದಾಡಿ ಸೀಟು ಸಿಕ್ಕು ಗೆಳತಿಯರು, ಅಕ್ಕ, ಒಮ್ಮೊಮ್ಮೆ ಅವಳ ಗೆಳತಿಯರು ಹೀಗೆ ಉದ್ದಾನುದ್ದ ಸಾಲು ನಾವೇ ಕೂತ್ಕೊಂಡು, ಸಣ್ಣ ಪುಟ್ಟ ಡೈಲಾಗಿಗೆಲ್ಲಾ ಖೊಳ್ ಅಂತ ನಕ್ಕು ಸೊಕ್ಕು ತೋರಿಸಿ, ಒಮ್ಮೊಮ್ಮೆ ಬೇರೆ, ವಯಸ್ಸಾದ ಸಿರಿಯಸ್ ಜನರಿಂದ ಬೈಸಿಕೊಂಡಿದ್ದೂ ಇದೆ. ನನಗಿನ್ನೂ ನೆನಪಿದೆ, ವಿಷ್ಣುವರ್ಧನ, ಭವ್ಯಾ ಅಭಿನಯದ ‘ನೀ ಬರೆದ ಕಾದಂಬರಿ’ ಚಿತ್ರದಲ್ಲಿ ಸಿ.ಆರ್. ಸಿಂಹ ಅವರ ಡೈಲಾಗ್ ಕೇಳಿ ಇಡೀ ಒಂದು ಸಾಲು ನಾವೇ ನಾವಾಗಿ ಕುಳಿತಿದ್ದ ಗೆಳತಿಯರ ಬಳಗ ನಕ್ಕಿದ್ದೇ ನಕ್ಕಿದ್ದು.
ಹಾಗಂತ ಎಲ್ಲಾ ಸಿನೆಮಾಗಳಿಗೆ ಆ ಥರ ರಶ್ ಇರ್ತಿತ್ತು ಅಂತಲ್ಲ. ಒಂದೊಂದು ಸಿನೆಮಾಕ್ಕೆ ಹೋಗಿ ಅವು ಖಾಲಿ ಹೊಡೆಯುವುದನ್ನು ನೋಡಿ, ಇನ್ನೇನು ಇಷ್ಟು ದೂರ ಬಿಸಿಲಲ್ಲಿ ಹ್ಯಾಗೂ ನಡಕೊಂಡು ಬಂದಿದ್ದೀವಲ್ಲ ಸಿನಮಾ ನೋಡಿಯೇ ಹೋದರಾಯ್ತು ಅಂತ ಕೂತ್ಕೊಂಡು ಅಷ್ಟು ಕಷ್ಟ ಪಟ್ಟಿದಕ್ಕೆ ಮತ್ತೆ ಹಂಗೇ ಮಜಾ ಮಾಡಿ ನಕ್ಕು ನಕ್ಕು ಹೊರಬಂದ ಉದಾಹರಣೆಗಳೂ ಇವೆ.
ಮುಂದೆ ೮೬-೮೭ರಲ್ಲಿ ನಮ್ಮಣ್ಣ (ದೊಡ್ಡಪ್ಪನ ಮಗ) ಬೆಳಗಾವಿಗೆ ಬಂದಮೇಲಂತೂ ನಾವು ಮನೆಮಂದಿಯೆಲ್ಲಾ ಕೂಡಿ ರಾತ್ರಿ ಒಂಬತ್ತರ ಆಟಕ್ಕೆ ಸಿನೆಮಾಕ್ಕೆ ಹೋಗುವುದು ಬಹಳ ಕಾಮನ್ ಆಯಿತು. ಅವನು ತನ್ನ ಕೆಲಸ ಮುಗಿಸಿ ಎಂಟು ಗಂಟೆಗೆ ಬಂದು “ಕಾಕು ಇವತ್ತು ನಯಾ ದೌರ ಸಿನೆಮಾಕ್ಕೆ ಹೋಗುವುದಿದೆ, ಬೇಗ ಅಡಿಗೆ ಮಾಡು” ಎನ್ನುವುದು, ನಮ್ಮಮ್ಮ ಗಡಬಡಿಸಿ ಮುಂದೆ ಹದಿನೈದು ಇಪ್ಪತ್ತು ನಿಮಿಷದೊಳಗೆ ಅನ್ನ ಝುಣಕ ರೆಡಿ ಮಾಡುವುದು, ಬಿಸಿ ಬಿಸಿ ಅನ್ನ ಉಂಡು ಓಡುವ ನಡಿಗೆಯಲ್ಲಿ ಹೋಗಿ ಟಿಕೆಟ್ ತೆಗೆದುಕೊಂಡು ಒಳಸೇರಿ ಕತ್ತಲೆಯಲ್ಲಿ, ಲೈಟ್ ಬಿಡುವವನ ಹಿಂದೆ ಹಿಂದೆ ಹೊರಟು ಯಾರದೋ ಕಾಲು ತುಳಿದು ಸಾರಿ ಹೇಳಿ, ಆತ ತೋರಿಸಿದ ಸೀಟ್ ಮೇಲೆ ಉಫ್ ಅಂತ ಕುಳಿತು, ಪಿಕ್ಚರ್ ಶುರುವಾಗಿಬಿಟ್ಟಿದೆಯೇನೋ ಅಂತ ಹೆದರಿ ಪರದೆ ಮೇಲೆ ಇನ್ನೂ ಜಾಹಿರಾತು ಬರುತ್ತಿರುವುದನ್ನು ನೋಡಿ ನಿಟ್ಟುಸಿರು ಬಿಟ್ಟು ಖುಶಿ ಪಡುವುದು, …. ಹೀಗೆ ಎಷ್ಟು ಸಿನೆಮಾಗಳನ್ನು ನೋಡಿದೆವೋ ಲೆಕ್ಕವಿಲ್ಲ.
ಹಳೇ ಕಪ್ಪು ಬಿಳುಪಿನ ಚಿತ್ರಗಳು ಮತ್ತೆ ಮತ್ತೆ ಬರುವ ಕಾಲವದು. ಹಾಗಾಗೇ ಅನೇಕ ಹಳೆಯ ಹಿಂದಿ ಚಿತ್ರಗಳನ್ನು ಟಾಕೀಜಿನಲ್ಲೇ ನೋಡುವ ಭಾಗ್ಯ ನಮ್ಮದಾಯಿತು. ಬೈಜೂ ಬಾವರಾ, ಅನಾರಕಲಿ, ಹರಿಯಾಲಿ ಔರ್ ರಾಸ್ತಾ, ದೋ ಬದನ್, ಕಶ್ಮೀರ್ ಕಿ ಕಲಿ, ಲೀಡರ್, ನಯಾದೌರ್, ಪ್ಯಾಸಾ, ಸಾಹಿಬ್ ಬೀಬಿ ಔರ್ ಗುಲಾಮ, ಸಂಗಮ, ಇಂಥ ನೂರಾರು ಹಳೆಯ ಚಿತ್ರಗಳನ್ನು ಈಗ ಬಣ್ಣಗೆಟ್ಟು ಹಳೆಯದಾದ, ಅಥವಾ ಅಳಿದು ಇನ್ನಾವುದೋ ಕಟ್ಟಡಕ್ಕೆ ಆಧಾರವಾದ ಹಳೆಯ ಟಾಕೀಜುಗಳಲ್ಲೇ ನಾವೆಲ್ಲಾ ನೋಡಿದ್ದೇವೆ. ಅಷ್ಟೇ ಅಲ್ಲ, ಆಯಾ ಕಾಲಕ್ಕೆ ಬರುತ್ತಿದ್ದ ಹೊಸ ಚಿತ್ರಗಳನ್ನೂ ಇದೇ ಥರ ನೋಡುತ್ತಿದ್ದೆವು. ಅಭಿಮಾನ, ಮಿಲಿ, ತ್ರಿಶೂಲ, ದೋಸ್ತಾನ, ಮುಂತಾದ ಚಿತ್ರಗಳನ್ನು ನಿಜಕ್ಕೂ ಟಾಕೀಜಿನಲ್ಲೇ ನೋಡಬೇಕು. ಮುಕದ್ದರ ಕಾ ಸಿಕಂದರ, ಶಂಕರ ಗುರು, ಅನಂತರದ ದಿನಗಳಲ್ಲಿ ಬಂದ ತೆಲಗಿನ ಸ್ವಾತಿಮುತ್ಯಂ ಈ ಚಿತ್ರಗಳನ್ನಂತೂ ನಾವು ಟಾಕೀಜಿನಲ್ಲಿ ಮೂರು ಮೂರು ಸಲ ನೋಡಿದ್ದೆವು ಎಂದು ಹೇಳಿ ಮಕ್ಕಳಿಂದ ಮಂಗಳಾರತಿ ಮಾಡಿಸಿಕೊಂಡೂ ಆಗಿದೆ.
ಈಗ ಬೆಳಗಾವಿಯ ಹೆಚ್ಚಿನ ಟಾಕೀಜುಗಳು ನೆಲಸಮವಾಗಿ ಆ ಸ್ಥಳದಲ್ಲಿ ಕಾಂಪ್ಲೆಕ್ಸಗಳು ತಲೆ ಎತ್ತಿವೆ. ಯಾವ ರೇಡಿಯೋ ಥೇಟರಿನಲ್ಲಿ (ನಮ್ಮ ಮನೆಯ ಹಿತ್ತಲಿನಲ್ಲೇ ಇದ್ದ ಥೇಟರು) ನಾವು ಜಯಪ್ರದಾ, ರಿಷಿಕಪೂರನ ‘ಸರಗಮ್’ ಚಿತ್ರವನ್ನು ನೋಡಿ, ನಂತರ ಆರು ತಿಂಗಳ ಕಾಲ ಹಾಡುಗಳನ್ನು ಕೇಳಿ ಖುಶಿಪಟ್ಟಿದ್ದೆವೋ, ಅನಂತನಾಗ, ಆರತಿ, ರೂಪಾ ಅಭಿನಯದ ‘ಮುಳ್ಳಿನ ಗುಲಾಬಿ’ ಚಿತ್ರವನ್ನು ನೋಡಿ ಹುಚ್ಚುಹಿಡಿದವರಂತೆ ತಿಂಗಳುಗಟ್ಟಲೇ ಹಿತ್ತಲಲ್ಲಿ ಕುಳಿತು ಹಾಡು, ಡೈಲಾಗುಗಳನ್ನು ಕೇಳಿ ಬಾಯಿಪಾಠ ಮಾಡಿ ಆನಂದಿಸಿದ್ದೆವೋ, ಆ ರೇಡಿಯೋ ಥೇಟರ್ ಈಗ ನಾಲ್ಕು ಅಂತಸ್ತಿನ ರೇಡಿಯೋ ಕಾಂಪ್ಲೆಕ್ಸ್ ಆಗಿ ಮಾರ್ಪಟ್ಟಿದೆ. ಕಪೀಲ ಥೇಟರ್ ಹೋಗಿ ನ್ಯೂಕ್ಲಿಯಸ್ ಮಾಲ್ ಆಗಿದ್ದರೂ ಅದರ ನೆತ್ತಿಯ ಮೇಲೆ ಬಿಗ್ ಸಿನೆಮಾದ ಎರಡು ಸ್ಕ್ರೀನ್ ಗಳಿವೆ. ಎಂದೂ ನಡೆಯದ ಚಂದನ ಟಾಕೀಜ್ ಈಗ ಚಂದನ ಐನಾಕ್ಸ್ ಆಗಿ ಮೂರು ಮೂರು ಸ್ಕ್ರೀನ್ ಗಳಲ್ಲಿ ಚಿತ್ರಗಳನ್ನು ಜನರಿಗೆ ತೋರಿಸುತ್ತ ಬಹುಷಃ ಲಾಭ ಮಾಡಿಕೊಳ್ಳುತ್ತಿದೆ. ಆಝಾದ್ ನ ನೆನಪೂ ಜನಕ್ಕೆ ಉಳಿಯಲಾರದಂತೆ ಅದನ್ನು ಕಾಲ್ಕೆಳಗೆ ದಬ್ಬಿ, ಅದರ ಮೇಲೆಯೇ ‘ಸ್ವರೂಪ್ ಪ್ಲಾಝಾ’ ಎತ್ತರವಾಗಿ ಎದ್ದು ನಿಂತಿದೆ. ಕೃಷ್ಣಾ ಟಾಕೀಜ್ ಹೋಗಿ ಯಾವುದೋ ಕಂಪನಿಯ ಶೋರೂಮ್ ಆಗಿದೆ. ಅರುಣ ಥೇಟರ್ ಏನೂ ಆಗದೇ ಪಿಕ್ಚರೂ ನಡೆಯದೇ, ಬಂದಾಗಿ, ಮೂಕವಾಗಿ ಖಾಲಿ ನಿಂತಿದೆ. ರಿಟ್ಝ್ ಥೇಟರ್ ಸ್ವಲ್ಪವೇ ಪರಿವರ್ತನೆಗೊಂಡು ಲೋಕಮಾನ್ಯ ರಂಗಮಂದಿರವಾಗಿದೆ. ನರ್ತಕಿ ಥೇಟರ್ ಹೋಗಿ ಅಪಾರ್ಟಮೆಂಟ್ ಆಗಿದೆ. ಸ್ವರೂಪ, ಚಿತ್ರಾ, ಪ್ರಕಾಶ ಮುಂತಾದ ಕೆಲವೇ ಕೆಲವು ಟಾಕೀಜುಗಳು ಕಾಲಕ್ಕೆ ತಕ್ಕಂತೆ ನವೀಕರಣಗೊಂಡು ಒಂದಿಷ್ಟು ಲಾಭ ಮಾಡಿಕೊಳ್ಳುತ್ತಿವೆಯೇನೋ! ಉಳಿದವೆಲ್ಲ ಹಾಗೆಯೇ ಹರಿದ ಕುಶನ್ನಿನ ಚೇರುಗಳು, ಬಣ್ಣ ಕಿತ್ತುಹೋದ ಗೋಡೆಗಳು, ಅದೇ ಹಳೆಯ ಸ್ಕ್ರೀನು ಇಟ್ಟುಕೊಂಡು ಅಂತೂ ಇನ್ನೂ ಬದುಕಿದ್ದೇವೆ ಎಂದು ಉಸಿರಾಡುತ್ತಿರುವ ಹಳೇ ಥೇಟರುಗಳು.
ಆ ದಿನಗಳ ಮಜಾ, ಆ ಹುಚ್ಚು, ಆಗಿನ ಕಾಲದ ಸಿನೆಮಾಗಳು ಈಗ ಬರುವುದು ಸಾಧ್ಯವೇ ಇಲ್ಲ. ಈಗಿನ ಕೆಲವು ಸಿನೆಮಾಗಳನ್ನು ನೋಡಲಾಗದೇ ಟಾಕೀಜಿನಿಂದ ಎದ್ದು ಬಂದ ಮೇಲೆ ನಾನು ಮತ್ತು ನನ್ನಕ್ಕ ಇದನ್ನೆಲ್ಲ ನೆನಪಿಸಿಕೊಂಡು ಮಾತಾಡಿ ನಕ್ಕು, ಒಂದಿಷ್ಟು ವಿಷಾದಿಸಿ, ನೋವು ನಲಿವುಗಳನ್ನು ಒಟ್ಟಿಗೆ ಅನುಭವಿಸಿದೆವು. ಯಾಕೆಂದರೆ ಆಗಿನ ಕಾಲದ ತುಡಿತಗಳೇ ಬೇರೆ, ನಮ್ಮ ವಯಸ್ಸೂ ಹಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ