ಪ್ರಗತಿವಾಹಿನಿ ಸುದ್ದಿ, ಶಿರಸಿ – : ಸಪ್ತಪಧಿ ಸರಳ ವಿವಾಹಕ್ಕೆ ಯಾವುದೇ ಆದಾಯ ಮಿತಿ ಇರುವುದಿಲ್ಲ ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ರವಿವಾರ ಶಿರಸಿ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯ ಮುಜರಾಯಿ ದತ್ತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಂದ ಆಯೋಜಿಸಿದ್ದ ಸಪ್ತಪಧಿ ಸರಳ ಸಾಮೂಹಿಕ ವಿವಾಹ ವಿಚಾರ ಸಂಕಿರ್ಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗವರು ಸಪ್ತಪದಿ ಸರಳ ಸಾಮೂಹಿಕ ವಿವಾಹದಲ್ಲಿ ನೋಂದಣಿ ಮಾಡಿಸಿಕೊಂಡು ವಿವಾಹವಾಗಬಹುದಾಗಿದೆ. ಈ ರೀತಿ ಸಾಮೂಹಿಕವಾಗಿ ಸರಳವಾಗಿ ಮದುವೆಯಾಗುವ ಜೋಡಿಗಳಿಗೆ ಸರಕಾರಿ ಉಪನೋಂದಣಾಧಿಕಾರಿಗಳಿಂದ ವಿವಾಹ ರಜಿಸ್ಟರ್ ಮಾಡಿಕೊಡಲಾಗುವುದು. ಸರಕಾರ ಜನತೆಯೊಂದಿಗಿದೆ. ಅಧಿಕಾರಿಗಳು ಕೂಡ ತಮ್ಮ ಮಕ್ಕಳ ಮದುವೆ ಮಾಡುವಂತೆ ಮುತುವರ್ಜಿ ವಹಿಸಿ ಮದುವೆ ಮಾಡಿಕೊಡಬೇಕು. ಸರಳ ವಿವಾಹ ಉತ್ತೇಜಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ನ ಸುಧಾ ಮೂರ್ತಿ ಅವರು ಸಪ್ತಪಧಿ ಸರಳ ಸಾಮೂಹಿಕ ವಿವಾಹದ ರಾಯಭಾರಿ ಅಗಲಿದ್ದಾರೆ ಎಂದು ಅವರು ತಿಳಿಸಿದರು.
ಶಾಸಕ ದಿನಕರ ಶೆಟ್ಟಿ ಅವರು ಮಾತನಾಡಿ ಸರಳ ಸಾಮೂಹಿಕ ವಿವಾಹದಲ್ಲಿ ಸಾಧಕ – ಬಾಧಕಗಳು ಎರಡೂ ಇವೆ. ಕರಾವಳಿ ಭಾಗದಲ್ಲಿ ಸಾಮೂಹಿಕ ವಿವಾಹಕ್ಕೆ ಆಸಕ್ತಿ ತೋರಿಸುವುದು ಕಡಿಮೆ. ಸರಳ ಸಾಮೂಹಿಕ ವಿವಾಹ ಒಳ್ಳೆಯ ಕಾರ್ಯಕ್ರಮವಾಗಿದ್ದು, ಕರಾವಳಿ ಭಾಗದ ಜನರಲ್ಲಿ ಸಾಮೂಹಿಕ ಸರಳ ವಿವಾಹ ಉತ್ತೇಜಿಸಲು ನಾನು ಕೂಡ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಕಾರವಾರ -ಅಂಕೋಲಾ ಕ್ಷೆತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಮಾತನಾಡಿ, ಮೊದಲ ಬಾರಿ ಸರಕಾರವು ಸರಳ ಸಾಮೂಹಿಕ ವಿವಾಹ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಮದುವೆಗಾಗಿ ಸಾಲ ಮಾಡಿ ಕಷ್ಟ ಪಡುವವರಿಗೆ ಇದು ಸಹಕಾರಿಯಾಗಲಿದೆ ಎಂದರು.
ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಮಾತನಾಡಿ ಸರಳವಾಗಿ ಮದುವೆಯಾಗುವವರಿಗೆ ಸಾಮೂಹಿಕ ವಿವಾಹ ವೇದಿಕೆಯಾಗಲಿದೆ. ಇದು ಸಮಾಜಮುಖಿ ಕಾರ್ಯವಾಗಿದ್ದು, ಎಲ್ಲರನ್ನೂ ಒಳಗೊಳ್ಳಲು ಸಹಕಾರಿಯಾಗಲಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಸಪ್ತಪಧಿ ಸರಳ ವಿವಾಹ ರಥಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಅಧಿಕಾರಿ ಎಸ್. ಪುರುಸೊತ್ತಮ್, ಶಿರಸಿ ಸಹಾಯಕ ಆಯುಕ್ತ ಈಶ್ವರ್ ಉಳ್ಳಾಗಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ