CrimeKannada NewsKarnataka NewsLatest

*ಕಾಡಾನೆಗೆ ಕಲ್ಲು ಎಸೆದ ಕಿಡಿಗೇಡಿಗಳಿಗೆ ಅರಣ್ಯ ಇಲಾಖೆ ಶಾಕ್*: *ವಿಡಿಯೋ ವೈರಲ್ ಬೆನ್ನಲ್ಲೇ ಕಠಿಣ ಕ್ರಮ*

ಪ್ರಗತಿವಾಹಿನಿ ಸುದ್ದಿ: ಕಾಡಿನ ರಸ್ತೆಯಲ್ಲಿ ಶಾಂತವಾಗಿ ಸಾಗುತ್ತಿದ್ದ ಕಾಡಾನೆಯ ಮೇಲೆ ಕಲ್ಲು ಎಸೆದು ವಿಕೃತಿ ಮೆರೆದಿದ್ದ ಇಬ್ಬರು ಯುವಕರಿಗೆ ಅರಣ್ಯ ಇಲಾಖೆ ಬಿಸಿ ಮುಟ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಕೃತ್ಯಕ್ಕೆ ಬಳಸಿದ್ದ ಸ್ಕೂಟರ್‌ ಅನ್ನು ವಶಕ್ಕೆ ಪಡೆದಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ. ಕುಪ್ಪೆ ವಲಯದ ವ್ಯಾಪ್ತಿಯ ಮೈಸೂರು–ವಯನಾಡು ಅಂತರರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿತ್ತು. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಯುವಕರು ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಒಂಟಿ ಸಲಗವನ್ನು ಕೆಣಕಿ ಕಲ್ಲು ಎಸೆದಿದ್ದರು. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಾಣಿಪ್ರಿಯರು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಕಿಡಿಗೇಡಿಗಳ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದರು.

ಸಚಿವರ ಸೂಚನೆಯ ಬೆನ್ನಲ್ಲೇ ಕಾರ್ಯಾಚರಣೆ ಆರಂಭಿಸಿದ ಅರಣ್ಯಾಧಿಕಾರಿಗಳು, ವಿಡಿಯೋ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಈ ವೇಳೆ ಕೃತ್ಯ ಎಸಗಿದವರು ಆನೆಮಾಳ ಹಾಡಿಯ ಯುವಕರು ಎಂಬುದು ಗೊತ್ತಾಗಿದೆ.

ಇಬ್ಬರ ವಿರುದ್ಧವೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಸ್ಕೂಟರ್‌ ಅನ್ನು ಜಪ್ತಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ಜಾರಿಗೊಳಿಸಲಾಗಿದೆ.

ಕಾಡುಪ್ರಾಣಿಗಳೊಂದಿಗೆ ಇಂತಹ ದುರ್ವರ್ತನೆ ತೋರಿಸುವವರಿಗೆ ಕಾನೂನಿನ ಮೂಲಕ ಎಚ್ಚರಿಕೆ ನೀಡಿರುವ ಅರಣ್ಯ ಇಲಾಖೆಯ ಕ್ರಮ ಸಾರ್ವಜನಿಕರ ಗಮನ ಸೆಳೆದಿದೆ.

Related Articles

Back to top button