Kannada NewsKarnataka NewsPolitics

*ಸಿಎಂ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದ ವಿಶೇಷ ಭೋಜನ ಕೂಟದ ಹಿಂದಿದೆ ಹಲವು ಲೆಕ್ಕಾಚಾರ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸ ‘ಗಂಗಾ’ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ಗಂಗಾ ನಿವಾಸದಲ್ಲಿ ಸಚಿವರು, ಸರ್ವಪಕ್ಷಗಳ ಶಾಸಕರು, ಸಂಸದರು ಸೇರಿದಂತೆ ಬರೋಬ್ಬರಿ 500 ಗಣ್ಯರಿಗೆ ವಿಶೇಷ ಭೋಜನ ಕೂಟ ಆಯೋಜಿಸಿದ್ದರು. ಮೇಲ್ನೋಟಕ್ಕೆ ಗೃಹಪ್ರವೇಶದ ಸೌಹಾರ್ದ ಕೂಟ ಎಂದು ಕಂಡುಬಂದರೂ ರಾಜಕೀಯ ವಲಯದಲ್ಲಿ ಮಾತ್ರ ಇದರ ಹಿಂದೆ ಹಲವು ಲೆಕ್ಕಾಚಾರಗಳು ಅಡಗಿದೆ ಎಂಬ ಚರ್ಚೆಯಾಗುತ್ತಿದೆ.

ಸಿಎಂ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸ ‘ಗಂಗಾ’ದಲ್ಲಿ ಗುರುವಾರ ಅದ್ಧೂರಿ ಔತಣಕೂಟ ಆಯೋಜನೆ ಮಾಡಲಾಗಿತ್ತು. ಸಚಿವರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ನೂತನ ಅಧಿಕೃತ ನಿವಾಸದ ಪ್ರವೇಶದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಈ ಸೌಹಾರ್ದ ಕೂಟ ಈಗ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.

ಸರ್ವಪಕ್ಷಗಳ ನಾಯಕರಿಗೆ ಆಹ್ವಾನ ನೀಡಿರುವುದೇ ಈ ಔತಣಕೂಟದ ಪ್ರಮುಖ ವಿಶೇಷತೆ. ಆಡಳಿತ ಪಕ್ಷ ಕಾಂಗ್ರೆಸ್ ಮಾತ್ರವಲ್ಲದೆ, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರನ್ನೂ ಆಹ್ವಾನಿಸಲಾಗಿತ್ತು.‌ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಸಂದರ್ಭದಲ್ಲಿ ಪಕ್ಷಾತೀತವಾಗಿ ಜನಪ್ರತಿನಿಧಿಗಳೊಂದಿಗೆ ಸೌಹಾರ್ದ ಸಂಬಂಧ ಬೆಳೆಸುವ ಪ್ರಯತ್ನ ಇದಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ. ಸದನದ ಒಳಗೆ ಮತ್ತು ಹೊರಗೆ ರಾಜ್ಯದ ಪ್ರಮುಖ ವಿಚಾರಗಳಲ್ಲಿ ಸಹಕಾರ ಪಡೆಯುವ ಉದ್ದೇಶವೂ ಇರಬಹುದು ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪಕ್ಷದೊಳಗಿನ ಒಗ್ಗಟ್ಟಿನ ಲೆಕ್ಕಾಚಾರವೂ ಈ ಔತಣಕೂಟದ ಹಿಂದೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಸಚಿವರು, ಶಾಸಕರು ಮಾತ್ರವಲ್ಲದೆ ಚುನಾವಣೆಯಲ್ಲಿ ಪರಾಜಿತಗೊಂಡ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಆಹ್ವಾನ ನೀಡಲಾಗಿತ್ತು. ಪಕ್ಷದ ವಿವಿಧ ಹಂತದ ನಾಯಕರನ್ನು ಒಂದೇ ವೇದಿಕೆಗೆ ಕರೆತರುವ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಎನ್ನಲಾಗುತ್ತಿದೆ. ಆಡಳಿತದಲ್ಲಿ ಸ್ಥಿರತೆ, ಪಕ್ಷದೊಳಗಿನ ಸಮನ್ವಯ ಮತ್ತು ತಮ್ಮ ನಾಯಕತ್ವದ ಸುತ್ತ ಒಗ್ಗಟ್ಟು ಪ್ರದರ್ಶಿಸುವ ವೇದಿಕೆಯಾಗಿ ಈ ಔತಣಕೂಟ ಗಮನ‌ ಸೆಳೆದಿದೆ.

ಇದರ ಜೊತೆಗೆ ರಾಜ್ಯದ ಪ್ರಮುಖ ಯೋಜನೆಗಳ ವಿಚಾರದಲ್ಲೂ ಸರ್ವಪಕ್ಷಗಳ ಸಹಕಾರ ಪಡೆಯುವ ಪ್ರಯತ್ನದ ಚರ್ಚೆ ಇದೆ. ವಿಶೇಷವಾಗಿ ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯದ ನೀರಾವರಿ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳನ್ನು ಒಗ್ಗೂಡಿಸುವ ಉದ್ದೇಶವೂ ಈ ಸೌಹಾರ್ದ ಕೂಟದ ಹಿಂದೆ ಇರಬಹುದು ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿದೆ. ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪಕ್ಷಭೇದ ಮರೆತು ಒಂದಾಗಬೇಕೆಂಬ ಸಂದೇಶ ನೀಡುವ ಪ್ರಯತ್ನವಾಗಿಯೂ ಇದನ್ನು ನೋಡಲಾಗುತ್ತಿದೆ.

ಇನ್ನು ‘ಗಂಗಾ’ ಹೆಸರಿನ ವಿಚಾರವಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಕುಮಾರಕೃಪಾ ಅತಿಥಿ ಗೃಹಕ್ಕೆ ‘ಗಂಗಾ’ ಎಂದು ಹೆಸರಿಟ್ಟಿರುವುದನ್ನು ವಿರೋಧಿಸಿ ಮುಖ್ಯಮಂತ್ರಿ ನಿವಾಸದ ಮುಂದೆ ಕಪ್ಪು ಬಟ್ಟೆ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಎಂ ನಿವಾಸದ ಔತಣಕೂಟದ ಸಂಭ್ರಮದ ನಡುವೆಯೇ ಹೆಸರಿನ ವಿವಾದವೂ ಮುನ್ನೆಲೆಗೆ ಬಂದಿದೆ.

Related Articles

Back to top button