
ಪ್ರಗತಿವಾಹಿನಿ ಸುದ್ದಿ: ಕೇವಲ 10ನೇ ತರಗತಿ ವಿದ್ಯಾರ್ಹತೆ ಹಾಗೂ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಉತ್ತಮ ಅವಕಾಶ.
ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರಿಗೆ ರೈಲ್ವೆ ಇಲಾಖೆಯಿಂದ ಉತ್ತಮ ಆಫರ್ ನೀಡಲಾಗುತ್ತಿದೆ. ರೈಲ್ವೆಯಲ್ಲಿ ಕೆಲಸ ಪಡೆಯಲು ಆಸಕ್ತಿ ಇದ್ದರೆ ಅರ್ಜಿ ಸಲ್ಲಿಸಬಹುದು. ಅದೂ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ! ಸೆಂಟ್ರಲ್ ರೈಲ್ವೆಯಲ್ಲಿ ಬರೋಬ್ಬರಿ 2,861 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಆಯ್ಕೆಯಾದವರಿಗೆ ಒಂದು ವರ್ಷದ ತರಬೇತಿ ಜೊತೆಗೆ ತಿಂಗಳಿಗೆ ₹9,600 ಸ್ಟೈಪೆಂಡ್ ಸಿಗಲಿದೆ.
ರೈಲ್ವೆ ರಿಕ್ರೂಟ್‌ಮೆಂಟ್ ಸೆಲ್ (RRC), ಮುಂಬೈ ವತಿಯಿಂದ ಸೆಂಟ್ರಲ್ ರೈಲ್ವೆಯ ವಿವಿಧ ವರ್ಕ್‌ಶಾಪ್‌ಗಳು, ಡಿಪೋಗಳು ಹಾಗೂ ಘಟಕಗಳಲ್ಲಿ ಆಕ್ಟ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಷಿನಿಸ್ಟ್, ಕಾರ್ಪೆಂಟರ್ ಸೇರಿದಂತೆ ಹಲವು ತಾಂತ್ರಿಕ ಟ್ರೇಡ್‌ಗಳಲ್ಲಿ ತರಬೇತಿ ಪಡೆಯಲು ಅವಕಾಶವಿದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 2, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
2,861 ಹುದ್ದೆಗಳು; ಯಾವ ವಿಭಾಗದಲ್ಲಿ ಎಷ್ಟು ನೇಮಕ?
ಮುಂಬೈ ಸೇರಿದಂತೆ ಸೆಂಟ್ರಲ್ ರೈಲ್ವೆಯ ವಿವಿಧ ಕ್ಲಸ್ಟರ್‌ಗಳಲ್ಲಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.
ಮುಂಬೈ ಕ್ಲಸ್ಟರ್ – 1,712 ಹುದ್ದೆಗಳು
ಭುಸಾವಲ್ ಕ್ಲಸ್ಟರ್ – 500 ಹುದ್ದೆಗಳು
ಪುಣೆ ಕ್ಲಸ್ಟರ್ – 271 ಹುದ್ದೆಗಳು
ನಾಗಪುರ ಕ್ಲಸ್ಟರ್ – 221 ಹುದ್ದೆಗಳು
ಸೋಲಾಪುರ ಕ್ಲಸ್ಟರ್ – 157 ಹುದ್ದೆಗಳು
ಫಿಟ್ಟರ್, ಮೆಷಿನಿಸ್ಟ್, ಶೀಟ್ ಮೆಟಲ್ ವರ್ಕರ್, ವೆಲ್ಡರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಮೆಕ್ಯಾನಿಕ್ (ಮಷಿನ್ ಟೂಲ್ಸ್ ಮೆಂಟೆನನ್ಸ್), ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (COPA), ಮೆಕ್ಯಾನಿಕ್ ಹಾಗೂ ಪೇಂಟರ್ ಸೇರಿದಂತೆ ವಿವಿಧ ಟ್ರೇಡ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ.
ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
10ನೇ ತರಗತಿಯಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು.
ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.
ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಹರಲ್ಲ.
ವಯೋಮಿತಿ:
2026ರ ನವೆಂಬರ್ 3ರ ವೇಳೆಗೆ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ 24 ವರ್ಷ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ.
ಅರ್ಜಿ ಶುಲ್ಕ
ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ₹100.
SC, ST, ದಿವ್ಯಾಂಗರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
ಪರೀಕ್ಷೆಯಿಲ್ಲ, ಮೆರಿಟ್ ಆಧಾರದಲ್ಲಿ ಆಯ್ಕೆ!
ಈ ನೇಮಕಾತಿಯ ಪ್ರಮುಖ ಆಕರ್ಷಣೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು 10ನೇ ತರಗತಿ ಹಾಗೂ ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ. ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತದೆ. ತರಬೇತಿಯ ಅವಧಿಯಲ್ಲಿ ಪ್ರತಿ ತಿಂಗಳು ₹9,600 ಸ್ಟೈಪೆಂಡ್ ಸಿಗಲಿದೆ. ರೈಲ್ವೆಯ ತಾಂತ್ರಿಕ ವಾತಾವರಣದಲ್ಲಿ ಅನುಭವ ಪಡೆಯಲು ಬಯಸುವ ಯುವಜನರಿಗೆ ಇದು ಉತ್ತಮ ಅವಕಾಶವಾಗಿದ್ದು, ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.




