*ಪನ್ನುನ್ ಹತ್ಯೆ ಸಂಚು ಪ್ರಕರಣಕ್ಕೆ ಅಮೆರಿಕ ಕೋರ್ಟ್ ತೀರ್ಪು*: *ಭಾರತೀಯ ಪ್ರಜೆಗೆ 19 ವರ್ಷ ಜೈಲು ಶಿಕ್ಷೆ*

ಪ್ರಗತಿವಾಹಿನಿ ಸುದ್ದಿ: ಅಮೆರಿಕದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸುಪಾರಿ ನೀಡಿದ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಪ್ರಜೆ ನಿಖಿಲ್ ಗುಪ್ತಾಗೆ 19 ವರ್ಷ 7 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯೂಯಾರ್ಕ್‌ನ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಸುಮಾರು 80 ನಿಮಿಷಗಳ ವಿಚಾರಣೆ ಬಳಿಕ ಸದರ್ನ್ ಡಿಸ್ಟ್ರಿಕ್ಟ್ ನ್ಯಾಯಾಧೀಶ ವಿಕ್ಟರ್ ಮರೆರೊ ಶಿಕ್ಷೆ ಪ್ರಕಟಿಸಿದರು. ಸುಪಾರಿ ಹತ್ಯೆ, ಹತ್ಯೆಗೆ ಸಂಚು ಹಾಗೂ ಅಕ್ರಮ ಹಣ ವರ್ಗಾವಣೆಯ ಸಂಚು ಸೇರಿದಂತೆ ವಿವಿಧ ಆರೋಪಗಳನ್ನು ನಿಖಿಲ್ ಗುಪ್ತಾ ಈ ವರ್ಷದ ಆರಂಭದಲ್ಲಿ ಒಪ್ಪಿಕೊಂಡಿದ್ದರು.
ವಿಚಾರಣೆ ವೇಳೆ ಪನ್ನುನ್, ಜೀವ ಬೆದರಿಕೆ ತಿಳಿದ ನಂತರ ಕಳೆದ 1,200ಕ್ಕೂ ಹೆಚ್ಚು ದಿನಗಳಿಂದ ತಮ್ಮ ದೈನಂದಿನ ವಕೀಲ ವೃತ್ತಿಯನ್ನು ನಡೆಸಲು ಸಾಧ್ಯವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ನಿಖಿಲ್ ಗುಪ್ತಾ ನ್ಯಾಯಾಲಯದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಪ್ರಾಸಿಕ್ಯೂಟರ್‌ಗಳ ಪ್ರಕಾರ, ಅಂದಿನ ಭಾರತ ಸರ್ಕಾರದ ಉದ್ಯೋಗಿಯಾಗಿದ್ದ ವಿಕಾಸ್ ಯಾದವ್ ಅವರು 2023ರ ಮೇ ತಿಂಗಳಲ್ಲಿ ಪನ್ನುನ್ ಹತ್ಯೆಗೆ ಸುಪಾರಿ ಹಂತಕನನ್ನು ನೇಮಿಸುವಂತೆ ನಿಖಿಲ್ ಗುಪ್ತಾಗೆ ಸೂಚಿಸಿದ್ದರು. ಯಾದವ್ ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ರಾ (RAW) ಜೊತೆ ಕೆಲಸ ಮಾಡುತ್ತಿದ್ದರು ಎಂದು ಅಮೆರಿಕದ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
ಯಾದವ್ ಸೂಚನೆಯಂತೆ ಗುಪ್ತಾ ಅಪರಾಧ ಹಿನ್ನೆಲೆಯ ಸಹಚರನೆಂದು ಭಾವಿಸಿ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ್ದರು. ಆದರೆ, ಆ ವ್ಯಕ್ತಿ ಅಮೆರಿಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ಜೊತೆ ಕೆಲಸ ಮಾಡುತ್ತಿದ್ದ ರಹಸ್ಯ ಮಾಹಿತಿದಾರನಾಗಿದ್ದ. ಬಳಿಕ ಆತ ಗುಪ್ತಾರನ್ನು ಸುಪಾರಿ ಹಂತಕನ ಸೋಗಿನಲ್ಲಿದ್ದ DEA ರಹಸ್ಯ ಅಧಿಕಾರಿಗೆ ಪರಿಚಯಿಸಿದ್ದ.
ಪನ್ನುನ್ ಹತ್ಯೆಗಾಗಿ ಒಂದು ಲಕ್ಷ ಡಾಲರ್ ನೀಡಲು ಯಾದವ್ ಒಪ್ಪಿಕೊಂಡಿದ್ದರು. ಮುಂಗಡವಾಗಿ 15 ಸಾವಿರ ಡಾಲರ್‌ಗಳನ್ನು ನ್ಯೂಯಾರ್ಕ್‌ನಲ್ಲಿ ನೀಡಲಾಗಿತ್ತು ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು. ಅಲ್ಲದೆ, ಪನ್ನುನ್ ಮನೆಯ ವಿಳಾಸ, ದೂರವಾಣಿ ಸಂಖ್ಯೆಗಳು, ದೈನಂದಿನ ಚಟುವಟಿಕೆಗಳ ಮಾಹಿತಿ ಹಾಗೂ ಕಣ್ಗಾವಲು ಛಾಯಾಚಿತ್ರಗಳನ್ನು ಗುಪ್ತಾ ಹಸ್ತಾಂತರಿಸಿದ್ದರು ಎಂಬ ಆರೋಪವೂ ಇದೆ.
2023ರ ಜೂನ್ 30ರಂದು ಜೆಕ್ ಗಣರಾಜ್ಯದ ಪ್ರೇಗ್‌ನಲ್ಲಿ ನಿಖಿಲ್ ಗುಪ್ತಾ ಬಂಧನವಾಗಿತ್ತು. ಬಳಿಕ 2024ರ ಜೂನ್‌ನಲ್ಲಿ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ವಿಕಾಸ್ ಯಾದವ್ ಅಮೆರಿಕದ ವಶದಲ್ಲಿಲ್ಲ.
ಈ ಸಂಚಿನಲ್ಲಿ ಭಾರತೀಯ ಸರ್ಕಾರಿ ಅಧಿಕಾರಿಗಳ ಪಾತ್ರವಿದೆ ಎಂಬ ಆರೋಪವನ್ನು ಭಾರತ ನಿರಾಕರಿಸಿದೆ. 2023ರ ನವೆಂಬರ್‌ನಲ್ಲಿ ಅಮೆರಿಕ ದೋಷಾರೋಪ ಪಟ್ಟಿಯನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಅಧಿಕಾರಿಯೊಬ್ಬರ ಹೆಸರು ಪ್ರಕರಣದಲ್ಲಿ ಕೇಳಿಬಂದಿರುವುದು ಕಳವಳಕಾರಿ. ಇಂತಹ ಕೃತ್ಯಗಳು ಸರ್ಕಾರದ ನೀತಿಗೆ ವಿರುದ್ಧವಾಗಿವೆ ಎಂದು ತಿಳಿಸಿತ್ತು.
ಅಮೆರಿಕದ ಆರೋಪಗಳ ಕುರಿತು ತನಿಖೆ ನಡೆಸಲು ಭಾರತ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿತ್ತು. 2025ರ ಜನವರಿಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡಿದ್ದ ಹೇಳಿಕೆಯಲ್ಲಿ, ಅಪರಾಧ ಹಿನ್ನೆಲೆ ಮತ್ತು ಸಂಪರ್ಕಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖಾ ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿಸಿತ್ತು. ಆದರೆ, ಆ ವ್ಯಕ್ತಿಯ ಹೆಸರನ್ನು ಸಚಿವಾಲಯ ಬಹಿರಂಗಪಡಿಸಿರಲಿಲ್ಲ.



