
ಪ್ರಗತಿವಾಹಿನಿ ಸುದ್ದಿ: ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ಕಾಡಾನೆಗಳ ಕಾಟದಿಂದ ಮುಕ್ತಿ ಸಿಗುವ ಲಕ್ಷಣ ಕಾಣುತ್ತಿಲ್ಲ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಓಡಿಸಲಾಗಿದ್ದ ಆನೆಗಳ ಹಿಂಡು ಮತ್ತೆ ವಾಪಸ್ ಬಂದಿದೆ. ಬರೋಬ್ಬರಿ 38 ಕಾಡಾನೆಗಳನ್ನು ಚಿಕ್ಕಮಗಳೂರಿನಿಂದ ಹಾಸನದ ಬೇಲೂರು ತಾಲೂಕಿಗೆ ಓಡಿಸಲಾಗಿದೆ. ಈ ಕಾರ್ಯಾಚರಣೆ ವೇಳೆ ಎರಡು ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ವಿರೋಧವೂ ವ್ಯಕ್ತವಾಗಿದೆ.
ನಿನ್ನೆ ರಾತ್ರಿ ಚಿಕ್ಕಮಗಳೂರು ಸಿಸಿಎಫ್ ಮತ್ತು ಡಿಎಫ್ಒ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಚಿಕ್ಕಮಗಳೂರು ಭಾಗದಲ್ಲಿದ್ದ 38 ಕಾಡಾನೆಗಳನ್ನು ಬೇಲೂರು ಕಡೆಗೆ ಓಡಿಸಲಾಗಿದೆ. ಈ ವೇಳೆ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಇಟಿಎಫ್ ಸಿಬ್ಬಂದಿ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಆದರೆ, ವಿರೋಧದ ನಡುವೆಯೂ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಹಾಸನದತ್ತ ಓಡಿಸಿದ್ದಾರೆ. ಸದ್ಯ ಬೇಲೂರು ತಾಲೂಕಿನ ಅರಮನೆ ಗುಡ್ಡ, ಪುಟ್ಟಮ್ಮನಗೊಳ್ಳ ಮತ್ತು ಮಲ್ಲಾಪುರ ಕಾನಳ್ಳಿ ಅರಣ್ಯ ಪ್ರದೇಶದ ಬಳಿ 38 ಕಾಡಾನೆಗಳು ಬೀಡುಬಿಟ್ಟಿವೆ.
ಇನ್ನೊಂದೆಡೆ, ಕಾಫಿನಾಡು ಚಿಕ್ಕಮಗಳೂರಿನಲ್ಲಿ ‘ಆಪರೇಷನ್ ಒಂಟಿ ಸಲಗ’ ಕಾರ್ಯಾಚರಣೆ ಮುಂದುವರಿದಿದೆ. ಬೇಲೂರಿನಿಂದ ಬಂದ ಆನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಒಂಟಿ ಸಲಗವೊಂದು ಚಿಕ್ಕಮಗಳೂರು ನಗರದ ಸುತ್ತಮುತ್ತ ಸಂಚರಿಸುತ್ತಿದೆ. ಈ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.
ಕುಮ್ಕಿ ಆನೆಗಳಾದ ಸುಗ್ರೀವ, ಅಯ್ಯಪ್ಪ, ಮಾಣಿಕ್ಯ, ಸಾಗರ್, ಭೀಷ್ಮ ಮತ್ತು ಜೂನಿಯರ್ ಅರ್ಜುನ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಒಂಟಿ ಸಲಗವನ್ನು ಸೆರೆಹಿಡಿಯುವ ಕಾರ್ಯಾಚರಣೆ ಯಾವಾಗ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.




