ಪ್ರಗತಿವಾಹಿನಿ ಸುದ್ದಿ; ಮೈಸೂರು: ನಾಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ನಿರೀಕ್ಷೆಗಳು ಗರಿಗೆದರಿವೆ. ಈ ನಡುವೆ ಮಾಜಿ ಶಾಸಕ ಹೆಚ್ ವಿಶ್ವನಾಥ್, ಜನಪ್ರಿಯತೆಗಾಗಿ ಬಜೆಟ್ ಮಂಡಿಸಬೇಡಿ ಜನರ ಅನುಕೂಲಕ್ಕಾಗಿ ಬಜೆಟ್ ರೂಪಿಸಿ ಎಂದು ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಮಾಜಿ ಸಿಎಂ ಸಿದ್ದರಾಮಯ್ಯರಿಂದ ಸಾಲದ ಹೊರೆ ಜಾಸ್ತಿಯಾಯಿತೇ ಹೊರತು ಬೇರೆನೂ ಆಗಿಲ್ಲ. ಹಾಗಾಗಿ ಯಡಿಯೂರಪ್ಪನವರೇ, ನೀವು ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ. ಬೇಕಾಬಿಟ್ಟಿ ಯೋಜನೆಗಳನ್ನು ಘೋಷಿಸಬೇಡಿ, ಉಳಿತಾಯದ ಬಜೆಟ್ ಮಾಡಿ. ಎಲ್ಲಾ ಸಿಎಂಗಳು 10 ವರ್ಷದ ಬಜೆಟ್ ಮಾಡಿದ್ದಾರೆ. ನೀವು ಕೇವಲ ಒಂದು ವರ್ಷದ ಬಜೆಟ್ ಮಾಡಿ ಸಾಕು ಎಂದರು.
ಸಿದ್ದರಾಮಯ್ಯ ಮಾತೆತ್ತಿದರೆ 14 ಬಾರಿ ಬಜೆಟ್ ಮಂಡನೆ ಮಾಡಿದ್ದೀನಿ ಎನ್ನುತ್ತಾರೆ. ತಮ್ಮ ಬಜೆಟ್ನಲ್ಲಿ ಆರ್ಥಿಕ ಶಿಸ್ತು, ಶಿಷ್ಟಾಚಾರ ತರಲು ಅವರಿಂದ ಸಾಧ್ಯವಾಗಿಲ್ಲ.ರಾಜ್ಯದಲ್ಲಿ ಮೂರು ಲಕ್ಷ ಕೋಟಿ ರೂಪಾಯಿಯ ಸಾಲದ ಹೊರೆ ಇದೆ. ಅದರಲ್ಲಿ ಸಿದ್ದರಾಮಯ್ಯ ಅವರೇ 1 ಲಕ್ಷ ಕೋಟಿಯವರೆಗೆ ಸಾಲ ತಂದಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಬಜೆಟ್ ಮಂಡನೆ ಜನಪ್ರಿಯತೆ ಹೆಚ್ಚಿಸುವ ಉದ್ದೇಶವಾಗಿರಬಾರದು. ಜನರ ಅನುಕೂಲಕ್ಕಾಗಿ ಬಜೆಟ್ ಮಾಡಬೇಕು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ