*ಪಿಯುಸಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್*: *NEET, IIT, JEE ಗೆ ಸರ್ಕಾರದಿಂದ ಉಚಿತ ಕೋಚಿಂಗ್*: *ಅರ್ಜಿ ಸಲ್ಲಿಸುವುದು ಹೇಗೆ?*

ಪ್ರಗತಿವಾಹಿನಿ ಸುದ್ದಿ: ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಪ್ರತಿಷ್ಠಿತ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಬೇಕು ಎಂಬ ವಿದ್ಯಾರ್ಥಿಗಳ ಕನಸನ್ನು ಸರ್ಕಾರವೇ ನನಸು ಮಾಡಲು ಯತ್ನಿಸುತ್ತಿದೆ.
ಇನ್ಮುಂದೆ NEET, JEE,IIT,KCET ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದಲೇ ಉಚಿತವಗೈ ಕೋಚಿಂಗ್ ನೀಡಲಾಗುತ್ತದೆ. ಆರ್ಥಿಕ ಸಮಸ್ಯೆಯಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಈ ಮೂಲಕ ಉತ್ತಮ ಅವಕಾಶ ನೀಡಿದೆ.
2027ನೇ ಸಾಲಿನ NEET, IIT-JEE ಮತ್ತು KCET ಪ್ರವೇಶ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆಯು ‘ಮುಖ್ಯಮಂತ್ರಿಗಳ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ’ಯಡಿ ಈ ಸೌಲಭ್ಯ ಒದಗಿಸುತ್ತಿದೆ. ಗ್ರಾಮೀಣ ಭಾಗದ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಗುಣಮಟ್ಟದ ಡಿಜಿಟಲ್ ತರಬೇತಿ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯಡಿ ಪ್ರಮುಖ ಮೂರು ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.
NEET: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ.
JEE Main ಮತ್ತು Advanced: ಐಐಟಿ (IIT), ಎನ್‌ಐಟಿ (NIT) ಸೇರಿದಂತೆ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಬಯಸುವವರಿಗೆ.
KCET: ಕರ್ನಾಟಕದಲ್ಲಿ ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವವರಿಗೆ.
ಉಚಿತ ತರಬೇತಿಯಲ್ಲಿನ ಸೌಲಭ್ಯ:
ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಉತ್ತಮವಾಗಿ ಸಿದ್ಧತೆ ನಡೆಸಲು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಲೈವ್ ಆನ್‌ಲೈನ್ ತರಗತಿಗಳು: ಪರಿಣಿತ ಉಪನ್ಯಾಸಕರಿಂದ ನೇರ ಆನ್‌ಲೈನ್ ತರಗತಿಗಳು ನಡೆಯಲಿವೆ.
ರೆಕಾರ್ಡೆಡ್ ವಿಡಿಯೋ ಪಾಠಗಳು: ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕ ಸಮಯದಲ್ಲಿ ಪಾಠಗಳನ್ನು ವೀಕ್ಷಿಸಬಹುದು.
ಡಿಜಿಟಲ್ ಸ್ಟಡಿ ಮೆಟೀರಿಯಲ್: ಪರೀಕ್ಷಾ ಪಠ್ಯಕ್ರಮಕ್ಕೆ ಅನುಗುಣವಾಗಿ ಡಿಜಿಟಲ್ ನೋಟ್ಸ್ ಒದಗಿಸಲಾಗುತ್ತದೆ.
ಪ್ರಶ್ನೆ ಕೋಶ: ಅಭ್ಯಾಸಕ್ಕಾಗಿ ವಿವಿಧ ಪ್ರಶ್ನೆಗಳನ್ನು ನೀಡಲಾಗುತ್ತದೆ.
ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು: ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಲಭ್ಯವಿರಲಿದೆ.
ಮಾಕ್ ಟೆಸ್ಟ್: ಪರೀಕ್ಷೆಗೆ ಸಿದ್ಧತೆಯನ್ನು ಪರೀಕ್ಷಿಸಿಕೊಳ್ಳಲು ನಿಯಮಿತ ಅಣಕು ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ:
ಈ ಯೋಜನೆಯಡಿ ಉಚಿತ ಆನ್‌ಲೈನ್ ತರಬೇತಿ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಮೊದಲಿಗೆ ಕರ್ನಾಟಕ ಸರ್ಕಾರದ ಸೇವಾ ಸಿಂಧು ಅಧಿಕೃತ ವೆಬ್‌ಸೈಟ್ ತೆರೆಯಿರಿ.
ಸಂಬಂಧಿತ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆಯ ಸೇವೆಯನ್ನು ಆಯ್ಕೆ ಮಾಡಿಕೊಳ್ಳಿ.
ಅಗತ್ಯವಿರುವ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ.
ಅರ್ಜಿಯಲ್ಲಿರುವ ವಿವರಗಳನ್ನು ಪರಿಶೀಲಿಸಿ ಸಲ್ಲಿಸಿ.
ಸಹಾಯವಾಣಿ ವಿವರ
ದೂರವಾಣಿ ಸಂಖ್ಯೆ: 080-24410574
ಕಾರ್ಯನಿರ್ವಹಿಸುವ ದಿನಗಳು: ಸೋಮವಾರದಿಂದ ಶನಿವಾರದವರೆಗೆ
ಸಮಯ: ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ
ಸರ್ಕಾರಿ ರಜಾದಿನಗಳಲ್ಲಿ ಸಹಾಯವಾಣಿ ಕಾರ್ಯನಿರ್ವಹಿಸುವುದಿಲ್ಲ.
ಖಾಸಗಿ ಕೋಚಿಂಗ್ ಸಂಸ್ಥೆಗಳ ದುಬಾರಿ ಶುಲ್ಕ ಭರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸರ್ಕಾರದ ಈ ಯೋಜನೆ ಸಾಕಷ್ಟು ಅನುಕೂಲವಾಗಲಿದೆ. ಅದರಲ್ಲಿಯೂ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಗುಣಮಟ್ಟದ ಕೋಚಿಂಗ್ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬಹುದಾಗಿದೆ. ಸರ್ಕಾರದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.




