ದಕ್ಷಿಣ ಭಾರತ ನದಿಜೋಡಣೆಯಲ್ಲಿ ಕರ್ನಾಟಕದ ಕಡೆಗಣನೆ

 ಸಂಗಮೇಶ ಆರ್. ನಿರಾಣಿ
(ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ)

ಭಾರತದಲ್ಲಿ ಹೆರಳವಾದ ಜಲಸಂಪತ್ತು ಇದ್ದರೂ ಅದು ಪ್ರತಿ ಪ್ರಾಂತ್ಯಕ್ಕೂ ಸರಿಯಾಗಿ ಹಂಚಿಕೆಯಾಗಿಲ್ಲ. ಹಿಮಾಲಯ ಪರ್ವತ ಹಾಗೂ ಪಶ್ಚಿಮಘಟ್ಟಗಳು ಭಾರತದ ಪ್ರಮುಖ ನದಿಗಳ ಉಗಮ ಸ್ಥಾನಗಳಾಗಿವೆ. ಪಶ್ಚಿಮಘಟ್ಟದ ಹಲವು ನದಿಗಳು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರಿದರೆ, ಹಿಮಾಲಯ ಹಾಗೂ ಮಧ್ಯ ಭಾರತದ ಕೆಲವು ನದಿಗಳು ಪ್ರತಿವರ್ಷ ಭಯಂಕರ ಪ್ರವಾಹದ ಆವಾಂತರ ಸೃಷ್ಟಿಸುತ್ತವೆ. ಹೀಗಾಗಿ ಒಟ್ಟು ಜಲಸಂಪತ್ತಿನ ಪರಿಪೂರ್ಣ ಬಳಕೆಗಾಗಿ ಹಾಗೂ ಪ್ರವಾಹ ನಿಯಂತ್ರಣಕ್ಕಾಗಿ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ನದಿ ಜೋಡಣೆಯನ್ನು ಕೇಂದ್ರ ಸರ್ಕಾರ ಆಸಕ್ತಿಯಿಂದ ಪರಿಶೀಲಿಸುತ್ತಿದೆ.
ರಾಷ್ಟ್ರೀಯ ನದಿ ಜೋಡಣೆ ಯೋಜನೆಯಲ್ಲಿ ೧೪ ಹಿಮಾಲಯ ನದಿಗಳು ಮತ್ತು ೧೬ ಪೆನಿನ್ಸೂಲಾರ್ ನದಿಗಳು ಎಂದು ೨ ಪ್ರಮುಖ ವಿಭಾಗಗಳಾಗಿ ವಿಂಗಡಿಸಿ ಈ ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪೆನಿನ್ಸೂಲಾರ್ ನದಿ ಜೋಡಣೆಯಲ್ಲಿ ದಕ್ಷೀಣ ಭಾರತದ ಎಲ್ಲ ಪ್ರಮುಖ ನದಿಗಳನ್ನು ಪರಸ್ಪರ ಜೋಡಿಸುವ ಸದುದ್ದೇಶದಿಂದ ಮಹಾನದಿ-ಗೋದಾವರಿ-ಕೃಷ್ಣಾ-ಪಾಲಾರ್-ಪೆನ್ನಾರ-ಕಾವೇರಿ ನದಿ ಜೋಡಣೆ ಯೋಜನೆಯ ಸಾಧ್ಯತಾ ವರದಿಯನ್ನು ೧೯೮೨ರಲ್ಲಿ ನ್ಯಾಶನಲ್ ವಾಟರ್ ಡೆವಲಪಮೆಂಟ್ ಏಜನ್ಸಿ ತಯಾರಿಸಿದೆ.

ಮಹಾನದಿ-ಗೋದಾವರಿ-ಕೃಷ್ಣಾ-ಪಾಲಾರ್-ಪೆನ್ನಾರ-ಕಾವೇರಿ ನದಿ ಜೋಡಣೆ ಯೋಜನೆ:
ದಕ್ಷಿಣ ಭಾರತದ ಪ್ರಮುಖ ನದಿಗಳನ್ನು ಒಂದಕ್ಕೊಂದು ಬೆಸೆಯುವ ಮೂಲಕ ಜಲ ಸಂಪನ್ಮೂಲ ಸದ್ಬಳಕೆಯ ದೃಷ್ಟಿಯಿಂದ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಮಹಾನದಿ ಮತ್ತು ಗೊದಾವರಿ ನದಿ ಕಣಿವೆ ಪ್ರದೇಶವು ಹೆಚ್ಚುವರಿ ಜಲಸಂಪನ್ಮೂಲಗಳನ್ನು ಹೊಂದಿವೆ. ಎಲ್ಲ ಬಳಕೆಯ ನಂತರವೂ ಲಭ್ಯವಿರುವ ಜಲ ಸಂಪನ್ಮೂಲವನ್ನು ನೀರಿನ ಅಭಾವವಿರುವ ನದಿ ಕಣಿವೆಗಳಿಗೆ ತಿರುಗಿಸುವ ಮೂಲಕ ದಕ್ಷಿಣ ಭಾರತದ ಎಲ್ಲ ಪ್ರಮುಖ ನದಿ ಕಣಿವೆಗಳನ್ನು ಸಮೃದ್ದಗೊಳಿಸಲು ಮಹಾನದಿ-ಗೋದಾವರಿ-ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ೧೯೭೨ರಲ್ಲಿಯೇ ಭಾರತ ಕಂಡ ಶ್ರೇಷ್ಟ ನೀರಾವರಿ ತಜ್ಞ ಹಾಗೂ ಅಂದಿನ ಕೇಂದ್ರ ಜಲಸಂಪನ್ಮೂಲ ಸಚಿವರಾದ ಕೆ. ಎಲ್. ರಾವ್ ಈ ಕುರಿತು ಚಿಂತನೆ ನಡೆಸಿದ್ದರು. ೨೦೧೬ರಲ್ಲಿಯೇ ಆಂದ್ರಪ್ರದೇಶ ಸರ್ಕಾರ ಪಟ್ಟೆಸೀಮಾ ಲಿಫ್ಟ್ ಇರಿಗೇಶನ್ ಪ್ರೋಜೆಕ್ಟ್ ಮೂಲಕ ಗೋದಾವರಿ-ಕೃಷ್ಣಾ ನದಿ ಜೋಡಣೆ ಮಾಡಿದೆ.

ಗೋದಾವರಿ ಮತ್ತು ಮಹಾನದಿ ಪರಿಚಯ

ಗೋದಾವರಿ ನದಿಯು ದಕ್ಷಿಣ ಭಾರತದ ಅತಿದೊಡ್ಡ ಹಾಗೂ ಭಾರತದ ೨ನೇ ಅತಿದೊಡ್ಡ ನದಿಯಾಗಿದೆ. ಮಹಾರಾಷ್ಟ್ರದ ನಾಸಿಕ್ ಬಳಿಯ ತ್ರೈಂಬಕೇಶ್ವರದಲ್ಲಿ ಹುಟ್ಟಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶದಲ್ಲಿ ೧೪೬೫ ಕಿ.ಮೀ. ಉದ್ದ ಹರಿದು ಆಂದ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ಹಾಗೂ ಅಂತರ್ವೆದಿ ಬಳಿ ಬಂಗಾಳಕೊಲ್ಲಿ ಸೇರುತ್ತದೆ. ಮಹಾರಾಷ್ಟ್ರದ ನಾಸಿಕ್ ಹಾಗೂ ಆಂದ್ರಪ್ರದೇಶದ ರಾಜಮುಂಡ್ರಿ ಈ ಎರಡು ಬೃಹತ್ ನಗರಗಳು ಗೋದಾವರಿ ನದಿ ದಂಡೆಯ ಮೇಲಿರುವ ಪ್ರಮುಖ ಬೃಹತ್ ನಗರಗಳು.
ಮಹಾರಾಷ್ಟ್ರ, ಛತ್ತಿಸಗಡ, ಮಧ್ಯಪ್ರದೇಶ, ಒಡಿಶಾ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ ಸೇರಿದಂತೆ ೭ ರಾಜ್ಯಗಳಲ್ಲಿ ಜಲಾನಯನ ಪ್ರದೇಶವನ್ನು ಹೊಂದಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಗೋದಾವರಿ ಹಾಗೂ ಅದರ ಉಪನದಿಗಳಿಗೆ ೩೫೦ಕ್ಕೂ ಅಧಿಕ ಆಣೆಕಟ್ಟು ಹಾಗೂ ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ. ಆದಿಲಾಬಾದ ಜಿಲ್ಲೆಯ ಗೋದಾವರಿ ತೀರದಲ್ಲಿರುವ ಸರಸ್ವತಿ ದೇವಾಲಯವು ಭಾರತದ ೨ನೇ ಸರಸ್ವತಿ ದೇವಾಲಯವಾಗಿದೆ. (ಮೊದಲನೇಯದು ಪಾಕ್ ಆಕ್ರಮಿತ ಕಾಶ್ಮೀರದ ಕಿಶನ್‌ಗಂಗಾ ಕಣಿವೆಯಲ್ಲಿರುವ ಶಾರದಿ ಎಂಬ ಹಳ್ಳಿಯಲ್ಲಿದೆ.)
ಮಹಾನದಿಯು ಛತ್ತಿಸಗಡ ರಾಜ್ಯದ ಉನ್ನತಪ್ರಾಂತ್ಯಕ್ಕೆ ಸೇರಿದ ರಾಯ್‌ಪುರ ಜಿಲ್ಲೆಯ ಸಿಂಹಾವ ಎಂಬಲ್ಲಿ ಹುಟ್ಟುತ್ತದೆ. ಮುಂದೆ ಒಡಿಶಾದಲ್ಲಿ ಹರಿದು ಬ್ರಾಹ್ಮಿಣಿ ನದಿಯೊಂದಿಗೆ ಸಂಗಮಿಸಿ ಬಂಗಾಳಕೊಲ್ಲಿ ಸೇರುತ್ತದೆ. ಛತ್ತಿಸಗಡ, ಮಹಾರಾಷ್ಟ್ರ, ಜಾರ್ಖಂಡ್, ಒಡಿಶಾ ರಾಜ್ಯಗಳಲ್ಲಿ ಜಲಾನಯನ ಪ್ರದೇಶವನ್ನು ಹೊಂದಿದೆ.

ಯೋಜನೆಯ ಅನುಷ್ಠಾನ ಹೇಗೆ?

ಎಲ್ಲ ಬಳಕೆಯ ನಂತರವೂ ಮಹಾನದಿಯಲ್ಲಿ ದೊರೆಯುವ ೧೨,೧೬೫ ಎಂ.ಸಿ.ಎಂ ನೀರನ್ನು ಮಹಾನದಿ-ಗೋದಾವರಿ ಲಿಂಕ್ ಕೆನಾಲ್ ಮೂಲಕ ಗೊದಾವರಿ ನದಿಗೆ ಸೇರಿಸುವುದು. ನಂತರ ಗೋದಾವರಿ ನದಿಯಿಂದ ದೊರೆಯುವ ೨೬,೧೨೨ ಎಂ.ಸಿ.ಎಂ. ನೀರನ್ನು ಇಚಂಪಲ್ಲಿ-ನಾಗಾರ್ಜುನಸಾಗರ, ಇಚಂಪಲ್ಲಿ-ಪುಲಿಚಿಂತಲಾ, ಪುಲವಾರಂ-ವಿಜಯವಾಡ ಮೂಲಕ ೩ ಲಿಂಕ್‌ಗಳ ಮೂಲಕ ಕೃಷ್ಣಾ ನದಿಗೆ ಸೇರಿಸುವುದು. ಯೋಜನೆಯ ಮೂಲಕ ಕೃಷ್ಣಾ ಕಣಿವೆಗೆ ದೊರೆತ ೨೬,೧೨೨ ಎಂ.ಸಿ.ಎಂ ನೀರಿನಲ್ಲಿ ೧೪,೦೮೦ ಎಂ.ಸಿ.ಎಂ. ನೀರನ್ನು ಆಲಮಟ್ಟಿ-ಪೆನ್ನಾರ್, ಶ್ರೀಶೈಲಂ-ಪೆನ್ನಾರ್, ನಾಗಾರ್ಜುನಸಾಗರ-ಸೋಮಸಿಲಾ ಮೂಲಕ ೩ ಲಿಂಕ್‌ಗಳಲ್ಲಿ ಪೆನ್ನಾರ್ ಕಣಿವೆಗೆ ಸೇರಿಸುವುದು. ಅಲ್ಲಿಂದ ೮,೫೬೫ ಎಂ.ಸಿ.ಎಂ. ನೀರನ್ನು ಕಾವೇರಿ ಕಣಿವೆಗೆ ಸೇರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಸಿದ್ದಪಡಿಸಿದೆ.

ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ!

೧೯೮೦ರಲ್ಲಿ ಯೋಜನೆ ಅನುಷ್ಠಾನಕ್ಕೆ ಚಿಂತಿಸಿದಾಗ ಹಂಚಿಕೆಯಾದಂತೆ ಒಟ್ಟು ೧೩೦೦ ಟಿ.ಎಂ.ಸಿ ಅಡಿ ನೀರಿನಲ್ಲಿ ಕರ್ನಾಟಕಕ್ಕೆ ೨೮೩ ಟಿ.ಎಂ.ಸಿ ಅಡಿ ಹಂಚಿಕೆ ಮಾಡಿ ಅದರಲ್ಲಿ ಕೃಷ್ಣಾ ಕಣಿವೆಯಲ್ಲಿ ೧೯೬ ಹಾಗೂ ಕಾವೇರಿ ಕಣಿವೆಯಲ್ಲಿ ೮೭ ಟಿಎಂಸಿ ಅಡಿ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಸದರಿ ಯೋಜನೆಯ ನೀರು ಹಂಚಿಕೆಯನ್ನು ೨೦೦೦ರಲ್ಲಿ ಪುನರ್ ಪರಿಶೀಲಿಸಿ ಒಟ್ಟು ನೀರಿನ ಹಂಚಿಕೆಯನ್ನು ೯೨೫ ಟಿ.ಎಂ.ಸಿ ಅಡಿಗೆ ಇಳಿಸಲಾಯಿತು. ಆಗ ಕರ್ನಾಟಕದ ಪಾಲನ್ನು ೧೬೪ ಟಿ.ಎಂ.ಸಿ ಅಡಿಗೆ ಕಡಿತಗೊಳಿಸಿ ಕೃಷ್ಣಾ ಕಣಿವೆಗೆ ೧೦೭ ಹಾಗೂ ಕಾವೇರಿ ಕಣಿವೆಗೆ ೫೭ ಟಿ.ಎಂ.ಸಿ ಅಡಿ ನಿಗದಿಪಡಿಸಲಾಯಿತು. ಇದೇ ಯೋಜನೆ ಕುರಿತು ೨೦೧೦ರಲ್ಲಿ ಎನ್.ಡಬ್ಲ್ಯೂ.ಡಿ.ಎ ಮತ್ತೊಮ್ಮೆ ಪರಿಶೀಲಿಸಿ ಒಟ್ಟು ನೀರನ್ನು ೭೧೮ ಟಿ.ಎಂ.ಸಿ ಅಡಿಗೆ ನಿಗದಿಪಡಿಸಿ ಈ ಬಾರಿ ಕರ್ನಾಟಕದ ಪಾಲನ್ನು ಸಂಪೂರ್ಣ ರದ್ದುಗೊಳಿಸಲಾಯಿತು. ಕರ್ನಾಟಕಕ್ಕೆ ಪ್ರಾರಂಭಿಕ ಹಂತದಲ್ಲಿ ೨೮೩ ಟಿಎಂಸಿ ಅಡಿ ನೀರನ್ನು ಈ ಯೋಜನೆಯಡಿ ನಿಗದಿಪಡಿಸಲಾಗಿತ್ತು. ಆದರೆ ಕೊನೆ ಹಂತದಲ್ಲಿ ನೀರು ಹಂಚಿಕೆಯನ್ನು ಪೂರ್ಣ ರದ್ದುಪಡಿಸಿದ್ದು ಕರ್ನಾಟಕಕ್ಕೆ ಮಾಡಿದ ದೊಡ್ಡ ಅನ್ಯಾಯವಾಗಿದೆ.

ಪ್ರತಿ ಹಂತದಲ್ಲೂ ಭಾಗೀದಾರ ಆದರೆ ಯೋಜನೆ ಪ್ರತಿಫಲದಲ್ಲಿ ಪಾಲಿಲ್ಲ.

ಮಹಾತ್ವಾಕಾಂಕ್ಷೆಯ ನದಿ ಜೋಡಣೆ ಯೋಜನೆಯನ್ನು ೯ ಹಂತಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಪ್ರತಿ ಹಂತದ ಯೋಜನೆಯಲ್ಲಿಯೂ ಕರ್ನಾಟಕದ ಭಾಗವಹಿಸುವಿಕೆ ಅವಶ್ಯಕವಾಗಿದೆ. ಆದರೆ ನೀರು ಹಂಚಿಕೆಯಲ್ಲಿ ಮಾತ್ರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಪೆನಿನ್ಸೂಲಾರ್ ನದಿ ಜೋಡಣೆ ಯೋಜನೆಯ ಮುಖ್ಯ ಉದ್ದೇಶವೇ ಕೊರತೆಯಾದ ಜಲಾನಯನ ಪ್ರದೇಶವನ್ನು ಸಮೃದ್ದಗೊಳಿಸುವುದು. ಕರ್ನಾಟಕದ ಕೃಷ್ಣಾ ಕಣಿವೆಯಲ್ಲಿಯೇ ಅತಿಹೆಚ್ಚು ಬಯಲುಸೀಮೆ ಪ್ರದೇಶವಿದೆ. ಆಲಮಟ್ಟಿ ಆಣೆಕಟ್ಟಿಗೆ ಹೊಂದಿಕೊಂಡ ಸುತ್ತಲಿನ ಪ್ರದೇಶದಲ್ಲಿಯೇ ನೀರಾವರಿ ಕೊರತೆ ಇದೆ.
ಬಾಗಲಕೋಟ, ಬೆಳಗಾವಿ, ವಿಜಯಪುರ, ಕೊಪ್ಪಳ, ಯಾದಗಿರಿ, ರಾಯಚೂರು, ಗದಗ ಜಿಲ್ಲೆಗಳಲ್ಲಿ ಬರಡು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಕೃಷಿಗೆ ಉತ್ತೇಜನ ನೀಡುವ ಸದಾವಕಾಶಗಳಿವೆ. ಕೃಷ್ಣೆಯ ಉಪನದಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ನಿರಂತರವಾಗಿ ನೀರಿನ ಕೊರತೆಯನ್ನು ಅನುಭವಿಸುತ್ತಿದೆ. ೨೨,೦೦೦ ಕೋಟಿ ವೆಚ್ಚದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ದಶಕಗಳೇ ಕಳೆದರೂ ಸಮರ್ಪಕ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಆದರೆ ಈ ಮಹಾತ್ವಾಕಾಂಕ್ಷೆ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕದ ವಿಷಯದಲ್ಲಿ ಈ ಯಾವುದೇ ಗಂಭೀರ ಸಮಸ್ಯೆಗಳು ಪರಿಗಣನೆಗೆ ಬರದೇ ಇರುವುದು ವಿಷಾದನೀಯವಾಗಿದೆ.
ಈಗಾಗಲೇ ಪಟ್ಟೆಸೀಮಾ ಯೋಜನೆಯಡಿ ಗೋದಾವರಿ ನೀರನ್ನು ಕೃಷ್ಣೆಗೆ ಹರಿಸಿ ಆಂದ್ರಪ್ರದೇಶ ನದಿ ಜೋಡಣೆ ಲಾಭ ಪಡೆದುಕೊಂಡಿದೆ. ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿಯೂ ಗೋದಾವರಿ-ಕೃಷ್ಣ ಜೋಡಣೆಯ ೩ ಲಿಂಕ್‌ಗಳು ಆಂದ್ರಪ್ರದೇಶಕ್ಕೆ ಲಾಭ ತಂದುಕೊಡುತ್ತವೆ. ಪಾಲಾರ್, ಪೆನ್ನಾರ, ಕಾವೇರಿಗೆ ಯೋಜನೆಯಡಿ ನೀರು ಹರಿಸುವ ಮೂಲಕ ಮೂಲಕ ತಮಿಳುನಾಡಿಗೆ ಅತಿದೊಡ್ಡ ಪ್ರಮಾಣದ ನೀರು ಹರಿಸುವ ಸ್ಪಷ್ಟ ಗುರಿ ಈ ಯೋಜನೆಯಡಿ ಕಾಣುತ್ತಿದೆ.
ಮಧ್ಯ ಹಾಗೂ ದಕ್ಷಿಣ ಭಾರತದ ಮಹಾನದಿ, ಗೋದಾವರಿ ನದಿಗಳ ಹೇರಳವಾದ ಜಲಸಂಪನ್ಮೂಲವನ್ನು ಕೃಷ್ಣಾ, ಕಾವೇರಿ ಮೂಲಕ ದಕ್ಷಿಣ ಭಾರತದಾದ್ಯಂತ ವಿಸ್ತರಿಸಿ ಸದುಪಯೋಗಪಡಿಸಿಕೊಳ್ಳುವ ಮಹಾತ್ವಾಕಾಂಕ್ಷೆ ಈ ಯೋಜನೆಯಲ್ಲಿದ್ದರೂ ಕೃಷ್ಣಾ ಮತ್ತು ಕಾವೇರಿಯ ಭಾಗಿಧಾರ ಎಲ್ಲ ರಾಜ್ಯಗಳ ಹಿತ ಕಾಯುವ ಬದಲು ಕರ್ನಾಟಕವನ್ನು ನಿರ್ಲಕ್ಷಿಸಿ ಆಂದ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಯೋಜನೆಗೆ ಭೂಮಿ, ಸೌಕರ್ಯ ನಮ್ಮದು, ನೀರು ಮಾತ್ರ ಆಂದ್ರ-ತಮಿಳುನಾಡಿಗೆ!
ಹಂತ-೧ರಲ್ಲಿ ಮಹಾನದಿಯಿಂದ ಗೊದಾವರಿ ನದಿಗೆ ನೀರು ಹರಿಸಲು ಒಡಿಶಾ ರಾಜ್ಯದಲ್ಲಿ ಮಹಾನದಿಗೆ ಅಡ್ಡಲಾಗಿ ಮಣಿಭದ್ರಾ ಬಳಿ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಇದರಿಂದ ೫೯,೪೦೦ ಹೆಕ್ಟೇರ್ ಭೂಪ್ರದೇಶ ಮುಳುಗಡೆಯಾಗುತ್ತದೆ ಎಂದು ಕಳವಳಗೊಂಡ ಓಡಿಶಾ ಸರ್ಕಾರ ಯೋಜನೆ ವಿರೋಧಿಸಿತ್ತು. ನಂತರ ಬರಮುಲ್ ಬಳಿ ಕಡಿಮೆ ಭೂಮಿಯನ್ನು ಉಪಯೋಗಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಲು ಒಪ್ಪಿಗೆ ಸೂಚಿಸಿತು. ಆದರೆ ನಮ್ಮ ರಾಜ್ಯದಲ್ಲಿ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ದೃಷ್ಟಿಯಿಂದ ಜಗತ್ತಿನಲ್ಲಿಯೇ ಅತಿದೊಡ್ಡ ಯೋಜನೆಯನ್ನಾಗಿಸಿ ಕಟ್ಟಿದ ಆಲಮಟ್ಟಿ ಆಣೆಕಟ್ಟು ಈ ಯೋಜನೆಯಡಿ ಪೆನ್ನಾರ್ ಕಣಿವೆ ಪ್ರದೇಶಕ್ಕೆ ನೀರು ಸಾಗಿಸಲು ಉಪಯೋಗವಾಗುತ್ತದೆ. ಆಲಮಟ್ಟಿ ಆಣೆಕಟ್ಟು ಉಪಯೋಗಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಿದರೂ ಆಲಮಟ್ಟಿ ಆಣೆಕಟ್ಟು ಪ್ರದೇಶ ವ್ಯಾಪ್ತಿಯ ಘಟಪ್ರಭಾ-ಮಲಪ್ರಭಾ ಕಾಡಾ ಮತ್ತು ನಾರಾಯಣಪೂರ ಕಾಡಾ ವ್ಯಾಪ್ತಿಯ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಿದ್ದರೂ, ಕೃಷ್ಣೆಗಾಗಿ ಕರ್ನಾಟಕದಲ್ಲಿ ಮಹಾನದಿ-ಗೊದಾವರಿ ನೀರು ಬಳಕೆ ಮಾಡಲು ಯೋಜನೆ ಅವಕಾಶ ಮಾಡಿಕೊಡದಿರುವುದು ಬೇಸರದ ಸಂಗತಿ.
ರಾಷ್ಟ್ರೀಯ ನದಿ ಜೋಡಣೆಯ ಪೆನಿನ್ಸೂಲಾರ್ ನದಿ ಜೋಡಣೆ ಯೋಜನೆಯಲ್ಲಿ ಅನುಷ್ಠಾನವಾಗಬೇಕಿದ್ದ ವರದಾ-ಬೆಡ್ತಿ ನದಿ ಜೋಡಣೆ ಸ್ಥಳಿಯರ ವಿರೋಧದಿಂದಾಗಿ ಸಾಧ್ಯತಾ ವರದಿ ಸಿದ್ದಪಡಿಸಲು ಸಾಧ್ಯವಾಗಲಿಲ್ಲ. ಮತ್ತೊಂದು ಯೋಜನೆ ಹೇಮಾವತಿ-ನೇತ್ರಾವತಿ ನದಿ ಜೋಡಣೆ ಯೋಜನೆಯನ್ನು ಕರ್ನಾಟಕ ಸರ್ಕಾರ ನೇತ್ರಾವತಿ ನದಿ ನೀರನ್ನು ಎತ್ತಿನಹೊಳೆ ಯೋಜನೆಯಡಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಪ್ರಸ್ತಾವಣೆ ನಿಂತು ಹೋಯಿತು. ಇನ್ನು ಉಳಿದ ಪ್ರಮುಖ ಯೋಜನೆ ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಡಿ ಕರ್ನಾಟಕದ ಪಾಲು ರದ್ದಾಗಿದೆ ಹಾಗಾದರೆ ರಾಷ್ಷ್ರೀಯ ನದಿ ಜೋಡಣೆಯಡಿ ಕರ್ನಾಟಕಕ್ಕೆ ದೊರೆಯುವ ಕೊಡುಗೆಯಾದರು ಏನು?

ನಮ್ಮ ನ್ಯಾಯಯುತ ಪಾಲು ನಮಗೆ ನೀಡಿ ಯೋಜನೆ ಅನುಷ್ಠಾನಗೊಳಿಸಿ.
ಮಹಾನದಿ-ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಡಿ ಕರ್ನಾಟಕಕ್ಕೆ ದೊರೆಯಬೇಕಾದ ೧೬೪ ಟಿಎಂಸಿ ಅಡಿ ನೀರು ದೊರೆಯಬೇಕು. ಆ ನೀರು ಕೃಷ್ಣಾ-ಕಾವೇರಿ ಕಣಿವೆಗಳಲ್ಲಿ ಸಮರ್ಪಕವಾಗಿ ಬಳಕೆಯಾಗಬೇಕು. ಕೃಷ್ಣಾ ಕಣಿವೆಯಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ಕೃಷ್ಣಾ ಕಣಿವೆ ಪ್ರದೇಶ ಅಂದರೆ ಉತ್ತರ ಕರ್ನಾಟಕ ಅತಿದೊಡ್ಡ ಬಯಲು ಪ್ರದೇಶವಾದ್ದರಿಂದ ಇರುವ ಅಚ್ಚುಕಟ್ಟು ಪ್ರದೇಶವನ್ನು ಸಮೃದ್ದಗೊಳಿಸಲು ಮತ್ತು ಹೊಸ ನೀರಾವರಿ ಕ್ಷೇತ್ರ ಸೃಷ್ಟಿಸಲು ವಿಫುಲ ಅವಕಾಶಗಳಿವೆ. ಹೊಸ ಹೊಸ ಕೃಷಿ ಆಧಾರಿತ ಕೈಗಾರಿಕೆ ಪ್ರಾರಂಭಿಸಲು ಅನುಕೂಲಕರ ವಾತಾವರಣವಿದೆ. ಆ ಮೂಲಕ ಕೃಷಿ ಹಾಗೂ ಕೈಗಾರಿಕೆಗಳಲ್ಲಿ ಉತ್ತರ ಕರ್ನಾಟಕವನ್ನು ಸಂಪನ್ನಗೊಳಿಸಲು ಮತ್ತು ಸಮಗ್ರ ಉತ್ತರ ಕರ್ನಾಟಕವನ್ನು ನೀರಾವರಿಗೆ ಒಳಪಡಿಸಲು ಈ ಮಹತ್ವಾಕಾಂಕ್ಷೆಯ ನದಿ ಜೋಡಣೆ ಯೋಜನೆಯನ್ನು ಬಳಸಿಕೊಳ್ಳಬಹುದು.
ಪಕ್ಕದ ರಾಜ್ಯಗಳಿಗೆ ನೀರು ಸಾಗಿಸಲು ಕೇವಲ ಕಾರಿಡಾರ್ ರೂಪದಲ್ಲಿ ನಮ್ಮ ರಾಜ್ಯದ ನೀರಾವರಿ ವ್ಯವಸ್ಥೆ ಬಳಕೆ ಮಾಡಿಕೊಳ್ಳುವುದು ಆರೋಗ್ಯಕರ ಸಂಗತಿಯಲ್ಲ. ಗೋದಾವರಿ, ಕೃಷ್ಣ, ಕಾವೇರಿ ಮೂರು ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಹಕ್ಕುದಾರ ರಾಜ್ಯವಾಗಿದೆ. ಕೃಷ್ಣ ಮತ್ತು ಕಾವೇರಿ ನಮ್ಮ ರಾಜ್ಯದ ಪ್ರಮುಖ ನದಿ ಕಣಿವೆಗಳು ಹೀಗಾಗಿ ನಮಗೆ ನ್ಯಾಯಯುತ ಪಾಲು ನೀಡದೇ ಈ ಯೋಜನೆ ಅನುಷ್ಠಾನಗೊಳಿಸುವುದು ಸರಿಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ, ಆಂದ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಎಲ್ಲವನ್ನು ಕೇಂದ್ರ ಸಮಾನ ದೃಷ್ಟಿಯಲ್ಲಿ ನೋಡಬೇಕು. ಪ್ರಜಾಪ್ರಭುತ್ವದ ಆಶಯವು ಅದೇ ಆಗಿದೆ. ಅನಗತ್ಯ ತಾರತಮ್ಯ ಬೇಡ.
ಕೇಂದ್ರ ಸರ್ಕಾರ ಪೆನಿನ್ಸೂಲಾರ್ ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸುವ ಉತ್ಸಾಹದಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನದಿ ಜೋಡಣೆ ಯೋಜನೆ ಕುರಿತು ವಿಶೇಷ ಕಾಳಜಿ ಹೊಂದಿದ್ದಾರೆ. ಪೆನಿನ್ಸೂಲಾರ್ ನದಿ ಜೋಡಣೆ ಯೋಜನೆಗಾಗಿ ಕೇಂದ್ರ ಸರ್ಕಾರ ೬೦,೦೦೦ ಕೋಟಿಗೂ ಅಧಿಕ ಹಣ ವಿನಿಯೋಗಿಸಲು ಸಜ್ಜಾಗಿದೆ. ಆ ಮೂಲಕ ಜಲಶಕ್ತಿ ಮಂತ್ರಾಲಯ ಜಲಕ್ರಾಂತಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಹೀಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೇಂದ್ರಕ್ಕೆ ರಾಜ್ಯದ ನೀರಿನ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಕೃಷ್ಣಾ ಕಣಿವೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಿ ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಯ ಗರಿಷ್ಠ ಲಾಭಾಂಶ ಪಡೆಯುವಂತೆ ನೋಡಿಕೊಳ್ಳಬೇಕು.
ನೀರು ಅಮೂಲ್ಯ ಸಂಪನ್ಮೂಲ. ಒದಗುವ ಸಂಪನ್ಮೂಲವನ್ನು ವೃಥಾ ಬಿಟ್ಟುಕೊಟ್ಟು ನಂತರ ಮರುಕಾಪಡುವ ಸಂದಿಗ್ದತೆ ನಮಗೆ ಬಾರದಿರಲಿ. ದಕ್ಷಿಣದ ಗಂಗೆ ಗೋದಾವರಿ ಕರ್ನಾಟಕದ ರೈತರ ಬದುಕನ್ನು ಬೆಳಗಲಿ ಎಂಬುದು ಕನ್ನಡಿಗರ ಆಶಯವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button