Kannada NewsKarnataka NewsLatest

ಹಿಂದೆ ಆಯ್ಕೆಯಾದವರು ಈ ಜನರ ಸ್ವಭಾವವನ್ನು ದುರುಪಯೋಗಪಡಿಸಿಕೊಂಡಿದ್ದಾರೆ

ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ:  ಐತಿಹಾಸಿಕ ನಂದಗಡ ಗ್ರಾಮದಿಂದ -ಹಲಸಿ ವರೆಗಿನ ಸಂಪರ್ಕ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಖಾನಾಪುರ ಕ್ಷೇತ್ರದ ಜನರ ಋಣ ತೀರಿಸುವುದೇ ನನ್ನ ಆದ್ಯ ಕರ್ತವ್ಯ ಎಂದರು.

ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಮಾತನಾಡಿ, ಕ್ಷೇತ್ರದ ಜನ ಮೃದು ಮನಸ್ಸಿನವರು. ಇಲ್ಲಿಂದ ಈ ಹಿಂದೆ ಶಾಸಕರಾಗಿ ಆಯ್ಕೆಯಾದವರು ಈ ಜನರ ಸ್ವಭಾವವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದರು.

ಆದರೆ ಕ್ಷೇತ್ರದ ಜನರ ಸೇವೆ ಸಲ್ಲಿಸಲು ತಮಗೆ ಸದವಕಾಶ ದೊರಕಿದ್ದು, ಮತ ಹಾಕಿ ಆಯ್ಕೆ ಮಾಡಿದ ಕ್ಷೇತ್ರದ ಜನರ ಪ್ರಾಮಾಣಿಕ ಸೇವೆ ಮಾಡುವೆ. ನಂದಗಡ ಗ್ರಾಮವು ಐತಿಹಾಸಿಕ ಸ್ಥಳವಾಗಿದೆ. ಈ ಗ್ರಾಮದ ಕುರಿತು ಸದನದಲ್ಲಿ ಮಾತನಾಡಿದ್ದೇನೆ. ನಂದಗಡ ಗ್ರಾಮಕ್ಕೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಗೊಳ್ಳಿ ರಾಯಣ್ಣ ಅವರ ಇತಿಹಾಸ ಇಡೀ ಜಗತ್ತಿನಾದ್ಯಂತ ಪಸರಿಸುತ್ತಿದೆ. ಇಂತಹ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಾರದೆಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತರಬೇಕು ಎಂದು  ಸದನದಲ್ಲಿ ಸಚಿವ ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದ್ದೇನೆ. ಅತೀ ಶೀಘ್ರದಲ್ಲೇ ಈ ಕೆಲಸ ಪ್ರಾರಂಭವಾಗಲಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ 4 ಕೋಟಿ ವೆಚ್ಚದ 4.31 ಕಿ. ಮೀ. ನಂದಗಡ – ಹಲಸಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯಿಂದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಮೊದಲನೆ ಬಾರಿಗೆ ರಸ್ತೆ ಕಾಮಗಾರಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ಮಂಜೂರಾಗಿದೆ. ಜೊತೆಗೆ ನಂದಗಡ ಗ್ರಾಮಕ್ಕೆಇರುವ ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇವೆಂದು ಪಂಚಾಯತ ರಾಜ್ ಇಲಾಖೆ ಸಚಿವರು ಭರವಸೆ ನೀಡಿದ್ದಾರೆ ಎಂದರು.

ಖಾನಾಪುರ ತಾಲೂಕಿನ ಹಲವೆಡೆ ಅಭಿವೃದ್ಧಿ ಕೆಲಸಕ್ಕೆ ನನಗೆ ಗ್ರಾಮಸ್ಥರು ಸಾಥ್ ನೀಡುತ್ತಿದ್ದಾರೆ ಎಂದು ಶಾಸಕರು ಸಂತಸ ವ್ಯಕ್ತಪಡಿಸಿದರು.

ನಂದಗಡ ಗ್ರಾಪಂ ಸದಸ್ಯ ಮಹಾಂತೇಶ ರಾವುತ ಮಾತನಾಡಿ, ನಂದಗಡ ಗ್ರಾಮದ ಬಗ್ಗೆ ಶಾಸಕರು ಸದನದಲ್ಲಿ ಕಳಕಳಿ, ಪ್ರೀತಿಯಿಂದ ಮಾತನಾಡಿದ್ದಾರೆ. ಖಾನಾಪುರ ವಿಧಾನಸಭಾ ಕ್ಷೇತ್ರ ಶಾಸಕಿ ಅವರ ರಾಜಕೀಯ ತವರುಮನೆ ಆಗಿರುವುದರಿಂದ ಕ್ಷೇತ್ರದ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇದೆ. ಒಬ್ಬ ಮಹಿಳೆಗೆ ಹೇಗೆ ತವರುಮನೆಯ ಬಗ್ಗೆ ಅಭಿಮಾನ ಇರುತ್ತದೋ ಹಾಗೆ ಶಾಸಕಿ ಅಂಜಲಿತಾಯಿ ಅವರಿಗೂ ಇದೆ. ನಂದಗಡ ಗ್ರಾಮದ ಬಗ್ಗೆ ವಿಶೇಷ ಕಾಳಜಿವಹಿಸಿ ಸದನದಲ್ಲಿ ಮಾತನಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾದೇವ ಕೋಳಿ, ಅನಿಲ ಸುತಾರ, ಮಹಿಳಾ ಅಧ್ಯಕ್ಷೆ ಅನಿತಾ ದಂಡಗಲ್ಲ, ಗೀತಾ ಅಂಬಡಗಟ್ಟಿ, ಮಧುಕರ ಕವಳೆಕರ, ಮಹಾಂತೇಶ ಕಲ್ಯಾಣಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಮಹಿಳೆಯರು, ಗ್ರಾಮಸ್ಥರು ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು ಬಹುಸಂಖ್ಯೆಯಲ್ಲಿ ಹಾಜರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button