Kannada NewsKarnataka News

ಕೇವಲ ಸಾಂಪ್ರದಾಯಿಕ ಶಿಕ್ಷಣ ಪಡೆದರೆ ಸಾಲದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ʻʻಕೃತಕ ಬುದ್ಧಿಮತ್ತೆ ಹಾಗೂ ಮಾಹಿತಿ ಗಣಿಯಂತಹ ಆಧುನಿಕ ತಂತ್ರಜ್ಞಾನದ ಕ್ಷೇತ್ರದಲ್ಲಿನ ಬೆಳವಣಿಗೆಗಳು ವಕೀಲರು ಕೆಲಸ ಮಾಡುವ ಶೈಲಿಯನ್ನೇ ಬದಲಾಯಿಸಲಿವೆ. ಈ ಬಗೆಯ ಸವಾಲುಗಳನ್ನು ಎದುರಿಸಲು ಯುವ ವಕೀಲರು ಹೊಸ ತಂತ್ರಜ್ಞಾನದಲ್ಲಿ ತರಬೇತಿ ಹೊಂದಬೇಕು. ಕೇವಲ ಸಾಂಪ್ರದಾಯಿಕ ಶಿಕ್ಷಣ ಪಡೆದರೆ ಸಾಲದು,ʼʼ ಎಂದು ಕರ್ನಾಟಕ ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಬಿ. ಎಮ್.‌ ಶಾಮಪ್ರಸಾದ ಅವರು ಹೇಳಿದರು.
ಅವರು ಕರ್ನಾಟಕ ಕಾನೂನು ಸಮಿತಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಎಂ. ಕೆ ನಂಬಿಯಾರ ರಾಷ್ಟ್ರೀಯ ಅಣುಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ʻʻಇದು ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗ. ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಇವುಗಳನ್ನು ನಾವು ಗಮನಿಸದೇ ಇರಲಾಗದು. ಇವು ನಮ್ಮ ಮುಂದೆ ಇರಿಸುವ ಸವಾಲುಗಳನ್ನು ಸ್ವೀಕರಿಸಲು ಯುವ ವಕೀಲರು ತಯಾರಾಗಬೇಕು. ಅದಕ್ಕೆ ಬೇಕಾದ ಜ್ಞಾನವನ್ನು ಸಂಪಾದಿಸಬೇಕು. ಕಾಲೇಜುಗಳು ವಿದ್ಯಾರ್ಥಿಗಳಿಗೆ ಇಂತ ಮಾಹಿತಿ ಪಡೆಯುವ ಅವಕಾಶಗಳನ್ನು ನೀಡುತ್ತಿರಬೇಕು. ಈ ದೇಶದಲ್ಲಿ ಅಣಕು ನ್ಯಾಯಾಲಯಗಳು ೧೯೬೨ ರಲ್ಲಿ ಆರಂಭವಾದವು. ಕೇವಲ ಮೂವತ್ತು ವರ್ಷಗಳಲ್ಲಿ ಅವು ಅಂತರೀಕ್ಷ ಕಾನೂನುಗಳನ್ನು ಚರ್ಚಿಸುವ ಮಟ್ಟಕ್ಕೆ ಬೆಳೆದಿದ್ದವು. ಭಾರತದ ಕಾಲೇಜೊಂದರಲ್ಲಿ ೧೯೯೨ ರಲ್ಲಿ ಅಂತರೀಕ್ಷ ಕಾನೂನಿಗೆ ಸಂಬಂಧ ಪಟ್ಟ ಅಣಕು ನ್ಯಾಯಾಲಯವನ್ನು ನಡೆಸಲಾಗಿತ್ತು ಎಂದು ಅವರು ತಿಳಿಸಿದರು. ಅಣಕು ನ್ಯಾಯಾಲಯಗಳು ಕಾನೂನು ಶಿಕ್ಷಣದ ಪ್ರಮುಖ ಅಂಗ. ಅವುಗಳಲ್ಲಿ ಆರಂಭವಾದ ಹೊಸ ವಿಚಾರಗಳಿಂದ ಕಾನೂನಿನ ಹೊಸ ಅಂಗವೇ ಹುಟ್ಟಿಕೊಳ್ಳುತ್ತದೆ,ʼʼ ಎಂದು ನ್ಯಾಯಮೂರ್ತಿಗಳು ಹೇಳಿದರು.
ಪೈಲಟ ಗಳಿಗೆ ಅಣಕು ಹಾರಾಟದ ಮೂಲಕ ತರಬೇತಿ ನೀಡಲಾಗುತ್ತದೆ. ಆದರೆ ನಿಜವಾದ ಹಾರಾಟದಲ್ಲಿ ಬರುವ ತೊಂದರೆಗಳನ್ನು ಅವರು ತಮ್ಮ ಬುದ್ಧಿ ಹಾಗೂ ಅನುಭವದ ಮೂಲಕ ಪರಿಹರಿಸಿಕೊಳ್ಳಬೇಕು. ಅದೇ ರೀತಿ ವಕೀಲರು ಕೂಡ ಅನುಭವ ಹಾಗೂ ವಿವೇಕದ ಆಧಾರದಲ್ಲಿ ದಿನ ನಿತ್ಯದ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಿತಿ ಅಧ್ಯಕ್ಷ ಅನಂತ ಮಂಡಗಿ ಅವರು ಯುವ ವಕೀಲರಿಗೆ ವಿಷಯವಸ್ತು ಹಾಗೂ ಕಾನೂನಿನ ಜ್ಞಾನ ಎರಡೂ ಇರುವುದು ಮುಖ್ಯ ಎಂದು ತಿಳಿಸಿದರು. ಹಿಂದಿನ ದಶಕಗಳಲ್ಲಿ ಸಿಗದ ಅನೇಕ ಕಲಿಕೆಯ ಅವಕಾಶಗಳು ಇಂದಿನ ಕಾನೂನು ವಿದ್ಯಾರ್ಥಿಗಳಿಗೆ ದೊರಕುತ್ತಿವೆ ಎಂದು ಅವರು ಅಭಿಪ್ರಾಯ ಪಟ್ಟರು. ತಮ್ಮ ಕಕ್ಷಗಾರರಿಗೆ ಆಗಲಿ, ನ್ಯಾಯಾಲಯಕ್ಕಾಗಲಿ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಅವರು ಸಲಹೆ ನೀಡಿದರು. ಕರೋನಾ ಭೀತಿಯ ನಡುವೆಯೂ ದೇಶದ ೧೫ ರಾಜ್ಯಗಳಿಂದ ೩೩ ತಂಡಗಳಲ್ಲಿ ಸುಮಾರು ಒಂದು ನೂರು ವಿದ್ಯಾರ್ಥಿಗಳು ಆಗಮಿಸಿರುವುದನ್ನು ಸ್ಮರಿಸಿದ ಅಧ್ಯಕ್ಷರು.

ಕಾರ್ಯಕ್ರಮ ಸಂಯೋಜಕ  ಸತೀಶ ಅನಿಖಿಂಡಿ ಅವರು ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಪ್ರಾಯೋಜಿಸಿದ್ದಕ್ಕಾಗಿ ಹಿರಿಯ ವಕೀಲ ಹಾಗೂ ಕೇಂದ್ರ ಸರಕಾರದ ಅಟಾರ್ನಿ ಜನರಲ್‌ ಕೆ. ಕೆ ವೇಣುಗೋಪಾಲ ಅವರನ್ನು ಅಭಿನಂದಿಸಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್.‌ ವಿ ಗಣಾಚಾರಿ ಸ್ವಾಗತಿಸಿದರು,  ಸಮಿತಿ ಸದಸ್ಯ ಪ್ರದೀಪ ಸಾಹುಕಾರ, ಪ್ರಾಂಶುಪಾಲ  ಅನಿಲ ಹವಾಲ್ದಾರ, ವಿದ್ಯಾರ್ಥಿ ಪ್ರತಿನಿಧಿ ಸಚ್ಚಿದಾನಂದ ಪಾಟೀಲ, ಅಣಕು ನ್ಯಾಯಾಲಯ ಕಾರ್ಯದರ್ಶಿ ಮೇಘಾ ಸೋಮಣ್ಣನವರ್‌, ನಿವೇದಿತಾ ದೀಕ್ಷಿತ್‌ ಹಾಗೂ ಇತರರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button