ತಪ್ಪಾದುದನ್ನು ಮಾಡಲು ಸರಿಯಾದ ಮಾರ್ಗವಿಲ್ಲ

ಜಯಶ್ರೀ ಜೆ. ಅಬ್ಬಿಗೇರಿ

ಪ್ರತಿ ಉಸಿರಾಟದಲ್ಲೂ ಅದೇನೋ ಒತ್ತಡದ ರಾಗ ಕೇಳಿ ಬರುತ್ತಿದೆ. ಅದ್ಯಾವ ಮಾಂತ್ರಿಕನಿಂದ ಇದನ್ನು ದುರಸ್ತಿಗೊಳಿಸುವುದೋ ಗೊತ್ತಿಲ್ಲ. ಕ್ಷಣ ಕ್ಷಣ ಹಿಮಾಲಯ ಹತ್ತಿದಷ್ಟು ದಣಿವು. ಯಾವುದರಲ್ಲೂ ಸೊಗಸಿಲ್ಲ. ದೇಹದಲ್ಲಿ ಬಲವಿಲ್ಲ. ಸೊಂಪಾದ ಚೆಲುವಿನಲ್ಲೂ ಒಲವಿಲ್ಲ. ಶ್ರೇಷ್ಠ ಸಂಸ್ಕೃತಿ ಮತ್ತು ಭವ್ಯ ಪರಂಪರೆಯನ್ನು ಹೊತ್ತ ನಾವು ಅದೇಕೆ ಹೀಗಾಗಿದ್ದೇವೆ? ಪ್ರತಿಯೊಬ್ಬರಿಗೂ ಬದುಕಿನ ಕರ್ತವ್ಯಗಳಿವೆ. ಅವುಗಳನ್ನು ಮತ್ತಷ್ಟು ಎತ್ತರಕ್ಕೇರಿಸಲು ದಿನವೂ ಪ್ರಯತ್ನ ನಡದೇ ಇದೆ. ಆ ಪ್ರಯತ್ನ ಸಾಲುತಿಲ್ಲವೇ? ಉತ್ಕೃಷ್ಟತೆಗೇರುವ ಹಂಬಲ ಇದ್ದೇ ಇದೆ.ಆದರೂ ದೇಹದ ದಣಿವಿಗಿಂತ ಮನದ ದಣಿವು ಎಲ್ಲೆಲ್ಲೂ ಎದ್ದು ಕಾಣುತ್ತಿದೆ. ಕನಸುಗಳು ಆಕಾಶದಂತೆ ಕೈಗೆಟುಕದಂತಾಗಿ ಹತಾಶೆಯನ್ನು ಹುಟ್ಟಿಸುತ್ತಿವೆ. ಚೆಂದದ ಸಂಬಂಧಗಳಿಗೆ ಮನಸ್ಸು ಹೂವಿನಂತೆ ಮುಖ ಅರಳಿಸುವುದನ್ನು ಬಿಟ್ಟು ನೀಟಾಗಿ ಮಡಚಿಟ್ಟ ಕರವಸ್ತ್ರದಂತೆ ಜಡವಾಗಿ ಕುಳಿತಿದೆ. ಅರಳಿದರೂ ತುಂಬಾ ಕ್ವಚ್ಛಿತ್ತೆನಿಸಿದೆ.
ದುಬಾರಿ ವಸ್ತುಗಳಿಂದ ಮನೆ ತುಂಬುವುದರಲ್ಲಿಯೇ ಮಗ್ನರಾಗಿದ್ದೇವೆ. ನಾಗರಿಕತೆ ಹೆಸರಿನಲ್ಲಿ ಭಾವನೆಗಳು ಸಾಕಷ್ಟು ಹದಗೆಟ್ಟಿವೆ. ಗುಡ್ಡಕ್ಕೆ ಕಲ್ಲು ಹೊತ್ತಂತೆ ಬದುಕು ನಿರರ್ಥಕವಾಗಿದೆ ಅಂತ ಪ್ರಜ್ಞಾವಂತ ಸ್ಥಿತಿಯಲ್ಲಿರುವಾಗ ಅನ್ನಿಸದೇ ಇರದು. ಬದುಕಿನ ಪ್ರತಿ ಆರೋಪ ಪಟ್ಟಿ ಸಲ್ಲಿಸುವುದೂ ನಡೆಯುತ್ತಿದೆ. ದಿನವೂ ನಮ್ಮನ್ನು ಜೀವನ, ತೀವ್ರವಾದ ಆತಂಕದ ಮಡುವಿನಲ್ಲಿ ಕೆಡವಿ ಮಜಾ ನೋಡುತ್ತಿದೆ ಎಂದು ಬೈಯ್ಯುತ್ತೇವೆ. ಇಷ್ಟೆಲ್ಲ ಅನುಭವಿಸುವುದನ್ನು ನೇರವಾಗಿ ಸರಳ ನುಡಿಗಳಲ್ಲಿ ಹೇಳಬೇಕೆಂದರೆ ಯಂತ್ರಗಳ ಸಹಾಯದಿಂದ ಕ್ಲಿಷ್ಟವೆನಿಸಿದ ಎಲ್ಲವೂ ಸುಲಭವಾಗಿವೆ. ವಿಪರ್ಯಾಸವೆನ್ನುವಂತೆ ವರ್ತನೆಗಳು ಕಳಪೆ ಮಟ್ಟಕ್ಕೆ ಬಲಿಯಾಗುತ್ತಿವೆ. ತಪ್ಪಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಆದ್ದರಿಂದ ಶಾಂತಿಯುತ ಸಂತೃಪ್ತಿ ಜೀವನ ಗಗನ ಕುಸುಮವಾಗುತ್ತಿದೆ.
ಬಹುತೇಕ ವ್ಯವಹಾರಗಳು ವೃತ್ತಿ ಪರತೆಯಿಂದ ದೂರ ದೂರ ಸಾಗುತ್ತಿವೆ. ಬೇಸರ, ನಿರಾಶೆ, ಹತಾಶೆ, ಒತ್ತಡಗಳಿಗೆಲ್ಲ ಮದ್ದು ಅರೆಯುವುದು ಹೇಗೆ? ಎಂಬ ಪ್ರಶ್ನೆ ತಲೆ ಹೊಕ್ಕು ಗುಂಗಿ ಹುಳುವಿನಂತೆ ಗುಂಯ್ಯ ಎನ್ನುತ್ತಿದೆ. ಜ್ಞಾನದ ಸಮುದ್ರವೇ ಕೈಯಲ್ಲಿರುವಾಗ ಈ ಪ್ರಶ್ನೆಗೆ ಉತ್ತರ ಸಿಗಲಿಕ್ಕಲ್ಲವೇ? ನೂರಕ್ಕೆ ನೂರರಷ್ಟು ಉತ್ತರ ದೊರೆಯುತ್ತದೆ.ಆದರೆ ನಮಗೆ ಕೊರತೆ ಇರುವುದು ಅವುಗಳ ಅನುಷ್ಟಾನಕ್ಕೆ ಪುರುಸೊತ್ತಿಲ್ಲ. ಪುರುಸೊತ್ತಿಲ್ಲ ಎನ್ನುವುದರ ನೆಪದಲ್ಲಿ ಜಡವಾಗಿದ್ದೇವೆ. ಕೆಲ ಹೊತ್ತು ಮುದ್ದಾಂ ಪುರುಸೊತ್ತು ಮಾಡಿಕೊಂಡು ಪ್ರಯತ್ನಿಸಿದರೆ ನಮ್ಮ ಸಂಸ್ಕೃತಿಗೆ ಮತ್ತು ನಾಗರಿಕತೆಗೆ ಒಗ್ಗುವ ಅಚ್ಚುಕಟ್ಟಾದ ಸಂತೃಪ್ತ ಜೀವನ ನಮ್ಮದಾಗಿಸಿಕೊಳ್ಳಲು ಕೆಲ ಮಾರ್ಗಗಳನ್ನು ಅನುಸರಿಸೋಣ. ಅವುಗಳನ್ನು ತಿಳಿಯಲು ಮುಂದಕ್ಕೆ ಓದಿ.

ಅಮೂಲ್ಯ ಸರಕು
ಜೀವನದ ಮುಖ್ಯ ಸರಕು ಯಾವುದೆಂದರೆ ನಮ್ಮಲ್ಲಿ ಬಹುತೇಕ ಜನರು ಹಣ ಎಂದೇ ಉತ್ತರಿಸುತ್ತೇವೆ. ಹಣ ಇಲ್ಲದೇ ಜೀವನದಿ ಮುಂದಕ್ಕೆ ಹರಿಯದು, ಅನ್ನುವುದು ಒಪ್ಪಿಕೊಳ್ಳಬೇಕಾದ ಸಂಗತಿ. ಹಾಗಂತ ಹಣದ ಅಳತೆಗೋಲಿನಲ್ಲೇ ಪ್ರತಿಯೊಂದನ್ನೂ ಅಳೆದು ತೂಗಿ ನೋಡುವುದು ಸರಿಯಲ್ಲ. ಒಂದು ಗಿಡ ದೃಢವಾಗಿದ್ದರೆ ಅದು ಬಿರುಗಾಳಿಗೇಕೆ ಹೆದರಬೇಕು ಎನ್ನುವ ಮಾತಿನಂತೆ ಹಣದ ಇರುವಿಕೆಯನ್ನು ತಪ್ಪಾಗಿ ತಿಳಿದು ಎಲ್ಲದಕ್ಕೂ ಹಣವನ್ನೇ ಮೂಲ ಮಾಡಿಕೊಂಡು ದರ್ಪ ಮೆರೆಯುವುದು ತರವಲ್ಲ. ಹಣವಿಲ್ಲ ಎನ್ನುವ ಮಾತ್ರಕ್ಕೆ ಬದುಕೇ ಶೂನ್ಯ ಅಂತಲೂ ಇಲ್ಲ. ಚಿನ್ನಕ್ಕಾಗಿ ಆಸೆ ಪಟ್ಟರೆ ಅದಕ್ಕಾಗಿ ಅಗೆಯಬೇಕಾಗುತ್ತದೆ. ಇಲ್ಲದಿದ್ದಲ್ಲಿ ಹುಲ್ಲಿಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಶ್ರದ್ಧೆಯ ಬೆವರಿನ ದುಡಿಮೆ ಹಣವನ್ನು ಕಾಲ ಬಳಿ ತಂದು ಚೆಲ್ಲುವುದು. ಹಣ ನಮ್ಮ ದಾಸನಾಗಬೇಕೇ ಹೊರತು ನಾವು ಅದರ ಗುಲಾಮನಲ್ಲ. ಸಹಸ್ರಾರು ರೂಪಾಯಿ ಬೆಲೆ ಬಾಳುವ ಪಾದ ರಕ್ಷೆಗಳಾದರೂ ದೇವಸ್ಥಾನದ ಹೊರಗೇ ಬಿಡಬೇಕು. ಹಾಗೆಯೇ ಹಣ ಎಷ್ಟೊಂದು ಅಮೂಲ್ಯ ಸರಕು ಎನಿಸಿದರೂ ಸಂಬಂಧಗಳ ಮುಂದೆ ಮೇಲುಗೈ ಸಾಧಿಸಲು ಬಿಡಬಾರದು. ಅಂದಾಗ ಮಾತ್ರ ಹೂವಿನಂಥ ಸುಂದರ ಬಾಳು ಅರಳಿ ನಿಲ್ಲುತ್ತದೆ.

ಮರ್ಕಟ ಮನವು
ಪರಿಶುಭ್ರವಾದ ಹಿಮಾಲಯದ ಬೆಟ್ಟದ ಸಾಲಿನಲ್ಲಿ ಕುಳಿತು ಧ್ಯಾನ ಮಾಡಲು ಹೊರಟರೂ ಮನಸ್ಸು ಹಿಡಿತಕ್ಕೆ ಸಿಗುವುದಿಲ್ಲ. ಒಂದು ನಿಮಿಷವೂ ಒಂದೇ ಕಡೆ ನಿಲ್ಲಲು ಆಗದ ಮಂಗನಂತೆ ಆ ವಿಚಾರದಿಂದ ಈ ವಿಚಾರಕ್ಕೆ ಈ ವಿಚಾರದಿಂದ ಈ ವಿಚಾರಕ್ಕೆ ನೆಗೆಯುವುದು. ಯಾವುದನ್ನೂ ಸಂಪೂರ್ಣವಾಗಲು ಬಿಡದು. ಅದು ಸಿಕ್ಕರೆ ಇದು ಬೇಕು. ಇದು ದೊರೆತರೆ ಅದು ಬೇಡ ಮತ್ತೊಮದು ಬೇಕೆನ್ನುವ ಹುಚ್ಚುತನಕ್ಕೆ ಬದುಕು ಸುಸ್ತಾಗಿ ನಿಂತಿದೆ. ಹೀಗಾದರೆ ಜೀವನದಲ್ಲಿ ಪರಮಶಾಂತಿ ದೊರೆಯುವುದು ಹೇಗೆ? ಎನ್ನುವ ಪ್ರಶ್ನೆಗೆ ’ಮನಸ್ಸು ಮತ್ತು ಚಿತ್ತಗಳನ್ನು ನಿಯಂತ್ರಣದಲ್ಲಿರಿಸಿದಾಗ ಅನಗತ್ಯ ಹಂಬಲಗಳು ದೂರವಾಗುತ್ತವೆ. ನಾನು ನನ್ನದು ಎನ್ನುವ ಭಾವ ಮರೆಯಾಗುತ್ತದೆ. ದೇಹ ಪೋಷಣೆಗಷ್ಟೇ ಕರ್ಮ ಮಾಡಿದರೂ ದೋಷ ತಟ್ಟುವುದಿಲ್ಲ. ಜೀವನದಲ್ಲಿ ಸಂತೃಪ್ತಿ ದೊರೆಯಬೇಕಾದರೆ ಮೊದಲು ಬೇಕು ಬೇಡಗಳ ಪಟ್ಟಿ ಕಡಿಮೆಯಾಗಬೇಕು’ ಎಂದಿದ್ದಾನೆ ಶ್ರೀ ಕೃಷ್ಣ.

ಕನ್ನಡಿಯಂತಿರುವ ಬದುಕು 
ಬದುಕೆಂಬುದು ಕನ್ನಡಿ ಇದ್ದಂತೆ. ನಾವು ಮಾಡಿದ ಕರ್ಮಗಳಿಗೆ ತಕ್ಕ ಫಲಗಳು ಸಿಗುವವು. ದೊಡ್ಡದಾದ ಪ್ರತಿಫಲವೂ ಅಲ್ಲ. ಚಿಕ್ಕದೂ ಅಲ್ಲ. ಇದ್ದಂತೆ ತೋರುವ ನಿಯತ್ತು ಬದುಕಿಗಿದೆ. ಮಾಡಿದ ಕರ್ಮಗಳು ನೆರಳಿನಂತೆ ಹಿಂಬಾಲಿಸುತ್ತವೆ. ಆದ್ದರಿಂದ ಯಾವುದೇ ಕಾರ್ಯ ಮಾಡುವಾಗಲೂ ನೂರು ಬಾರಿ ಯೋಚಿಸಬೇಕು. ಬದುಕೆನ್ನುವುದು ಹಾವು ಏಣಿಯ ಆಟದಂತೆ. ಸಾಕಷ್ಟು ಏರಿಳಿತಗಳನ್ನು ದಾಟಲೇಬೇಕು. ಮೇಲಕ್ಕೇರಿದವರು ಒಮ್ಮೆ ಕೆಳಕ್ಕಿಳಯಲೇಬೇಕು. ಸುಖ ಯಾರ ಸ್ವತ್ತೂ ಅಲ್ಲ. ದುಃಖವೂ ಶಾಶ್ವತವಲ್ಲ. ಏಣಿ ಅಂದರೆ ಸಹನೆ ಆರೈಕೆ ದಯೆ ಕರುಣೆ ವಾತ್ಸಲ್ಯ ಪ್ರೀತಿ ಮಮತೆ ಸಹಕಾರ ಔದಾರ್ಯದಂಥ ಸದ್ಗುಣಗಳು ಅವು ನಮ್ಮನ್ನು ಮೇಲಕ್ಕೇರಿಸುತ್ತದೆ. ಹಾವು ದುರ್ಗಣದ ಪ್ರತೀಕ. ಅತಿಯಾದ ವ್ಯಾಮೋಹ, ಲೋಭ ಅಹಂಕಾರದಂಥ ದುರ್ಗಣಗಳು ನಮ್ಮನ್ನು ಪಾತಾಳಕ್ಕೆ ತಳ್ಳುತ್ತವೆ. ಕಷ್ಟ ಸುಖಗಳು ಏಳು ಬೀಳುಗಳು ಬದುಕಿನ ಸಾಮಾನ್ಯ ಹಾಗೂ ಕುತೂಹಲಕಾರಿ ಅಂಶಗಳು. ಖುಷಿ ಹುಡುಕುವವರಿಗೆ ಸಿಗುವುದಿಲ್ಲ. ಅಂತಃಶಕ್ತಿಯ ಅರಿವಿನಿಂದ ಸಣ್ಣ ಪುಟ್ಟದರಲ್ಲೂ ಸಂತಸ ಪ್ರಾಪ್ತಿಯಾಗುತ್ತದೆ. ಸವಾಲಿನ ಸಂದರ್ಭಗಳಲ್ಲೂ ಖುಷಿ ನಿರ್ಮಾಣ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ನಗಿಸುವ ತುಟಿಗಳಿಗಿಂತ ಕಣ್ಣೀರು ಒರೆಸುವ ಕಯ ಬೆರಳುಗಳು ಮೇಲು ಏಕೆಂದರೆ ನಗುವ ನಗಿಸುವ ಮನಗಳು ಸಿಗಬಹುದು. ಆದರೆ ನೋವಿಗೆ ಸ್ಪಂದಿಸುವ ಮಾತು ಸಮಸ್ಕಾರ ನಡುವಳಿಕೆ ನೆರವು ಮುಖ್ಯ.

ಸಂಸ್ಕೃತಿಯ ಹರಿವು
ಆಧುನಿಕತೆ ಹೆಸರಿನಲ್ಲಿ ಪುರಾತನ ಕಾಲದ ಕೂಡು ಕುಟುಂಬಗಳು ಒಡೆದು ಹೋಗಿವೆ. ಸಂಬಂಧಗಳು ಹೇಳ ಹೆಸರಲ್ಲದಂತಾಗಿವೆ. ವಿಭಕ್ತ ಕುಟುಂಬದಲ್ಲಿ ನಾವೂ ಹೇಳ ಹೆಸರಿಲ್ಲದಂತಾಗಿದ್ದೇವೆ. ಕೌಟುಂಬಿಕ ಪದ್ದತಿ ಸಂಸ್ಕಾರ ಬಹಳ ಎನಿಸುವಷ್ಟು ಬದಲಾಗಿವೆ. ಎಲ್ಲರೂ ಒಗ್ಗೂಡಿ ಆಚರಿಸುತ್ತಿದ್ದ ಹಬ್ಬಹರಿದಿನದ ಚಿತ್ರಣವೂ ಅಜಗಜಾಂತರ ಎನಿಸುವಷ್ಟು ಬದಲಾಗಿದೆ. ವರ್ತಮಾನಕ್ಕೆ ತಕ್ಕಂತೆ, ಪ್ರಸ್ತುತವೆನಿಸುವ, ಪ್ರಚಲಿತದಲ್ಲಿರಬೇಕೆಂದು ಅಸಂಬದ್ಧ ರೀತಿಯಲ್ಲಿ ಅನಾಗರಿಕ ವರ್ತನೆಯನ್ನು ಅನುಸರಿಸುವುದು ತರವಲ್ಲ. ಅನುಗಾಲವೂ ಅನುಕ್ಷಣವೂ ಪೋಷಿಸುವಂಥ ಅಮೂಲ್ಯವಾದ ಸದ್ಗುಣಗಳ ಆಸರೆಯಲ್ಲಿ ಇತರರಿಗೂ ಆಸರೆ ನೀಡುವಂತೆ ಹೆಮ್ಮರವಾಗಿ ಬಾಳಬೇಕು. ಗಂಡೊಂದು ದುಡಿದರೆ ಕುಟುಂಬ ನಿರ್ವಹಣೆ ಸಾಲದು ಎನ್ನುವ ಕಾಲ ಬಂದಿದೆ. ಹೀಗಾಗಿ ಆರ್ಥಿಕವಾಗಿ ಕುಟುಂಬದ ಆದಾಯ ಹೆಚ್ಚಿಸಲು ಹೆಂಗಳೆಯರು ಹೊಸ್ತಿಲಾಚೆ ನಡೆಯುತ್ತಿದ್ದಾರೆ. ಸ್ವಾವಲಂಬಿ ಜೀವನ ನಡೆಸಲು ಅಭ್ಯಂತರವಿಲ್ಲ. ಆದರೆ ನಮ್ಮ ಭವ್ಯ ಸಂಸ್ಕೃತಿಯನ್ನು ಮರೆ ಮಾಡುವ ಹಾಗಿಲ್ಲ. ಸಂಸ್ಕೃತಿ ಪೋಷಣೆಯಲ್ಲಿ ಗಂಡು ಹೆಣ್ಣೆಂಬ ಭೇದವಿಲ್ಲ. ಇಬ್ಬರೂ ಪೋಷಿಸಿ ಬೆಳೆಸಬೇಕು. ಮುಂದುವರೆದು ಜತನದಿಂದ ಬದುಕು ಕಟ್ಟಿಕೊಳ್ಳುವ ಕಾಯಕದಲ್ಲಿ ತೊಡಗಬೇಕಿದೆ. ಮನೆ ಮಂದಿಯ ಕಷ್ಟ ಸುಖಗಳಿಗೆ ಜೊತೆ ನಿಲ್ಲಬೇಕಿದೆ. ಸಾರ್ಥಕ ಬದುಕಿನ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ.

ಕೊನೆಯ ಗುಟುಕು
ಬುದ್ಧಿವಂತ ಪ್ರಾಣಿಗಳಾಗಿ ಒಂದಲ್ಲ ಎರಡಲ್ಲ ನೂರಾರು ತಪ್ಪುಗಳನ್ನು ಮಾಡುತ್ತಿದ್ದೇವೆ. ನಮ್ಮ ಕಾಲಿನ ಮೇಲೆ ನಾವೇ ಕಲ್ಲು ಚೆಲ್ಲಿಕೊಳ್ಳುತ್ತಿದ್ದೇವೆ. ಭೂಮಿಯೇ ನಮ್ಮ ದರ್ಬಾರಾಗಿದೆ. ಸೃಷ್ಟಿ ದೇವಿಯಾದ ಭೂ ತಾಯಿಯನ್ನೇ ದಿನ ದಿನವೂ ಬಗೆದು ತಿನ್ನುತ್ತಿದ್ದೇವೆ. ಇಲ್ಲಿ ಯಾರೂ ನಮ್ಮನ್ನು ಕೇಳುವವರಿಲ್ಲ. ನಮಗೆ ಹೇಳುವವರಿಲ್ಲ ಎಂದು ನಡೆದುಕೊಳ್ಳುತ್ತಿದ್ದೇವೆ. ಇದು ನಮ್ಮ ವಿನಾಶಕ್ಕೆ ನಾವೇ ಆಹ್ವಾನ ಕೊಟ್ಟು ಕೊಂಡಂತೆ. ನಿಸರ್ಗದ ಆಗು ಹೋಗುಗಳಿಗೆ ಪ್ರತಿದಿನವೂ ಲಕ್ಷ್ಯವಹಿಸಬೇಕು. ನೈಸರ್ಗಿಕ ಜೀವನಕ್ಕೆ ಪ್ರೇರಣೆ ನೀಡುವ ನಡೆ ನುಡಿಗಳತ್ತ ವಾಲಬೇಕು. ಸಕಲ ಜೀವಾತ್ಮರ ಲೇಸಿಗೆ ಕಂಕಣಬದ್ಧರಾಗಬೇಕು. ಸರ್ವೋದಯದ ಗಾನಕ್ಕೆ ನಾಂದಿ ಹಾಡಲು ಆಲೋಚಿಸಬೇಕು.’ಆಲೋಚನೆಗಳು ಭೂಮಿಯ ಮೇಲಿನ ಅತಿ ಶಕ್ತಿಯುತ ಪ್ರಭಾವಗಳು ಒಬ್ಬ ಮನುಷ್ಯನಲ್ಲಿ ಆಲೋಚಿಸಲ್ಪಟ್ಟ ಆಲೋಚನೆ ಅವನನ್ನು ಪುನರುಜ್ಜೀವನಗೊಳಿಸಬಹುದು.’ ತಪ್ಪಾದುದನ್ನು ಮಾಡಲು ಸರಿಯಾದ ಮಾರ್ಗವಿಲ್ಲ’

ಆದ್ದರಿಂದ ಹಣದ ಹುಡುಕಾಟದಲ್ಲಿ, ದುರಾಸೆಯಲ್ಲಿ ಇತರರನ್ನು ಕೀಳಾಗಿ ಕಾಣುವದನ್ನು ಬಿಟ್ಟು, ಬದುಕಿನಲ್ಲಿ ಸ್ನೇಹ ಪ್ರೀತಿ ತುಂಬಿಕೊಂಡರೆ ಬೇಸರ ನಿರಾಶೆ ಹತಾಶೆ ದೂರ ಸರಿಸುವ ಮಾರ್ಗ ತಾನೇ ಸನಿಹ ಬಂದು ದೊಡ್ಡ ನಗೆ ಚೆಲ್ಲುವುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button