ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜಿಲ್ಲೆಯಲ್ಲಿ ದೇವದಾಸಿಯರ ಸ್ಥಿತಿಗತಿ ಕುರಿತಂತೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ, ಬೆಳಗಾವಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಹಾಗೂ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದ ಕುಮಾರ ಬುಧವಾರ ಸಂಜೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಪೋಲಿಸ್ ಆಯುಕ್ತರು, ಪೋಲಿಸ್ ವರಿಷ್ಠಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರು, ದೇವದಾಸಿ ಪುನರ್ವಸತಿ ಯೋಜನೆಯ ನಿರ್ದೇಶಕರು,. ಶಿಕ್ಷಕರು ಮತ್ತು ಮಾಜಿ ದೇವದಾಸಿಯರೊಂದಿಗೆ ದೇವದಾಸಿ ಪದ್ದತಿಯ ನಿರ್ಮೂಲನೆ ಮತ್ತು ಪುನರ್ವಸತಿಯ ಕುರಿತು ವಿಡಿಯೊ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿದರು.
ಸಂವಾದದಲ್ಲಿ ಜಿಲ್ಲೆಯಲ್ಲಿ ಗುರುತಿಸಲಾದ ದೇವದಾಸಿಯರು, ಅವರಿಗೆ ಪಿಂಚಣಿ ನೀಡುವ ಕುರಿತು, ವಸತಿ ಯೋಜನೆ ಕುರಿತು, ಅವರ ರಕ್ಷಣೆ, ಪುನರ್ವಸತಿ ಕುರಿತು ಮನೆಯನ್ನು ಹಂಚಿಕೆ ಮಾಡಿರುವ ಕುರಿತು, ಅವರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಕುರಿತು, ಅವರನ್ನು ದೇವದಾಸಿ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡ ಕುರಿತು, ಅವರ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ನೀಡಿರುವ ಕುರಿತು ಮಾಹಿತಿಯನ್ನು ಪಡೆದು ನಿರ್ದೇಶನಗಳನ್ನು ನೀಡಿದರು.
ಮಾಜಿ ದೇವದಾಸಿಯರ ಪಿಂಚಣಿಯನ್ನು ಹೆಚ್ಚಿಸುವ ಕುರಿತು ಜಿಲ್ಲಾಡಳಿತ ಸರ್ಕಾರದೊಂದಿಗೆ ವ್ಯವಹರಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯ ಎಲ್ಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ ಸದಸ್ಯರು, ಗ್ರಾಮ ಸೇವಕರು, ಪಂಚಾಯತ ಅಭಿವೃದ್ದಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ದೇವದಾಸಿ ಸಮರ್ಪಣೆಯ ವಿಧಿ ವಿಧಾನಗಳನ್ನು ತಡೆದು ಮಹಿಳೆ ಮತ್ತು ಮಕ್ಕಳನ್ನು ದೇವದಾಸಿ ಸಮರ್ಪಣೆಯಿಂದ ರಕ್ಷಿಸುವಂತೆ ನಿರ್ದೇಶನ ನೀಡಿದರು.
ಅದಲ್ಲದೆ ವಸತಿ ರಹಿತ ಮಾಜಿ ದೇವದಾಸಿಯರಿಗೆ ವಸತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ, ದೇವದಾಸಿಯರಿಗೆ ಸರ್ಕಾರದಿಂದ ನೀಡಲಾದ ಎಲ್ಲಾ ಮನೆಗಳ ಸ್ಥಿತಿ ಗತಿಗಳನ್ನು ಪರಿಶೀಲಿಸಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ದೇವದಾಸಿಯರು ತಮ್ಮ ಸಮಸ್ಯೆಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಸಲ್ಲಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವಕುಮಾರ ಹಾಗೂ ಉಪ ಕಾರ್ಯದರ್ಶಿ ಇ. ರಾಜೀವಗೌಡ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ