ಜನತಾ ಕರ್ಫ್ಯೂಗೆ ರಾಜ್ಯದ ಜನರ ನೈತಿಕ ಮತ್ತು ಸಾಂಘಿಕ ಬೆಂಬಲ ಅಗತ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ವೈರಸ್ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ಭಾನುವಾರ ದೇಶಾದ್ಯಂತ ಕರೆ ನೀಡಿರುವ ಜನತಾ ಕರ್ಫ್ಯೂಗೆ ರಾಜ್ಯದ ಜನತೆ ಬೆಂಬಲ ನೀಡುವಂತೆ ಸಿಎಂ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ ಯಡಿಯೂರಪ್ಪ, ನಾಳೆ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಫ್ಯೂ ಆಚರಣೆಗೆ ನಿಮ್ಮೆಲ್ಲರ ಬೆಂಬಲ ಅತಿ ಅಗತ್ಯವಾಗಿದೆ. ನಾಳೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ನಾವೆಲ್ಲರೂ ಮನೆಯಲ್ಲಿ ಉಳಿದು ನಿಜವಾದ ಅರ್ಥದಲ್ಲಿ ಕರ್ಫ್ಯೂವನ್ನು ಬೆಂಬಲಿಸೋಣ ಎಂದಿದ್ದಾರೆ.

ಕರ್ನಾಟಕ ಕೊವಿಡ್-19 ವೈರಾಣು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಇದೆಲ್ಲದಕ್ಕೂ ರಾಜ್ಯದ 6.5 ಕೋಟಿ ಜನರ ನೈತಿಕ ಮತ್ತು ಸಾಂಘಿಕ ಬೆಂಬಲ ಕಾರಣ. ಈ ಸಮಯದಲ್ಲಿ ನನ್ನ ಕಳಕಳಿಯ ಮನವಿಯೆಂದರೆ ರಾತ್ರಿ 9.00 ಗಂಟೆಯ ನಂತರ ಕರ್ಫ್ಯೂ ಅವಧಿ ಮುಗಿದಿದೆ ಎಂದು ಎಲ್ಲರೂ ಮನೆಯ ಹೊರಗಡೆ ಬಂದು ಸಂಭ್ರಮಿಸುವುದಾಗಲೀ ಅಥವಾ ನಿಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸುವುದಾಗಲೀ ಮಾಡಬೇಡಿ. ಇದು ಬೆಳಗ್ಗೆಯಿಂದ ಆಚರಿಸಿದ ರೋಗ ತಡೆಯುವ ಕ್ರಮವಾದ ಕರ್ಫ್ಯೂವನ್ನು ಅರ್ಥರಹಿತವಾಗಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಿಮಗೆ 9 ಗಂಟೆಯಿಂದ ಮನೆ ಹೊರಗಡೆ ಬರದೆ ಮನೆಯವರೆಲ್ಲರೂ ಆಪ್ತರೊಂದಿಗೆ ಕಾಲ ಕಳೆಯಲು ಮನವಿ ಮಾಡಿರುತ್ತಾರೆ. ಆವಾಗ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯ ಕರ್ಪೂಗೆ ಒಂದು ಅರ್ಥ ಬರುತ್ತದೆ ಮತ್ತು ಸಾರ್ಥಕವಾಗಲಿದೆ.

ಇನ್ನೊಮ್ಮೆ ನನ್ನ ಕಳಕಳಿಯ ಮನವಿ ನೀವು ಯಾರೂ ರಾತ್ರಿ 9 ಗಂಟೆಯ ನಂತರ ಹೊರಗೆ ಬರಬೇಡಿ. ಆದರೆ ಸಂಜೆ 5 ಗಂಟೆಗೆ ನಿಮ್ಮ ಮನೆಯ ಕಿಟಕಿಗಳಿಂದ ಮತ್ತು ಛಾವಣಿಗಳ ಮೇಲಿಂದ ಚಪ್ಪಾಳೆ ತಟ್ಟಿ ಸರ್ಕಾರದ ಮತ್ತು ರೋಗ ತಡೆಯುವಲ್ಲಿ ಭಾಗಿಯಾಗಿರುವ ಜನರಿಗೆ ನೈತಿಕ ಬೆಂಬಲ ಸೂಚಿಸಲು ಮಾತ್ರ ಮರೆಯಬೇಡಿ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button