ಪ್ರಗತಿವಾಹಿನಿ ಸುದ್ದಿ; ಮ್ಯಾಡ್ರಿಡ್: ವಿಶ್ವಾದ್ಯಂತ ತನ್ನ ಕಬಂದ ಬಾಹು ಚಾಚುತ್ತಿರುವ ಮಾರಣಾಂತಿಕ ಕೊರೊನಾ ವೈರಸ್, ಸ್ಪೇನ್ನ ರಾಜಕುಮಾರಿ ಮಾರಿಯಾ ತೆರೆಸಾ ಅವರನ್ನು ಬಲಿ ಪಡೆದಿದೆ. ಕೊರೊನಾ ಸೋಂಕಿಗೆ ಮಾರಿಯಾ ಸಾವನ್ನಪ್ಪಿರುವ ಬಗ್ಗೆ ಸ್ಪೇನ್ ಅರಮನೆ ಅಧಿಕೃತ ಘೋಷಣೆ ಹೊರಡಿಸಿದೆ.
ಕೊರೊನಾ ವೈರಸ್ ವಿಶ್ವಾದ್ಯಂತ ಬಡವ, ಬಲ್ಲಿದ, ರಾಜಮನೆತನದವರನ್ನೂ ಕಾಡುತ್ತಿದೆ. ಮಾರಿಯಾ ತೆರೆಸಾ ಕೊರೊನಾ ವೈರಾಣುವಿಗೆ ಬಲಿಯಾದ ವಿಶ್ವದ ಮೊದಲ ರಾಜಮನೆತನದ ಮಹಿಳೆಯಾಗಿದ್ದಾರೆ.
ಮಾರಿಯಾ ತೆರೆಸಾಗೆ 86 ವರ್ಷ ವಯಸ್ಸಾಗಿತ್ತು. ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ ಎಂದು ಸಹೋದರ ಪ್ರಿನ್ಸ್ ಸಿಕ್ಟೋ ಎನ್ರಿಕ್ ಡಿ ಬೊರ್ಬನ್ ಮಾಹಿತಿ ನೀಡಿದ್ದಾರೆ.
ಮಾರಿಯಾ ಸ್ಪೇನ್ ರಾಜಮನೆತನದ ಹೌಸ್ ಆಫ್ ಬೌರ್ಬನ್-ಪಾರ್ಮಾದ ಸದಸ್ಯೆಯಾಗಿದ್ದರು. 1933ರಲ್ಲಿ ಪ್ಯಾರಿಸ್ನಲ್ಲಿ ಜನಿಸಿದ್ದ ಮಾರಿಯಾ ಥೆರೇಸಾ ಫ್ರಾನ್ಸ್ ನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಬಳಿಕ ಪ್ಯಾರಿಸ್ನ ಸೊರ್ಬೊನ್ನಲ್ಲಿ ಹಾಗೂ ಮ್ಯಾಡ್ರಿಡ್ನ ಕಾಂಪ್ಲುಟೆನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.
ಈ ನಡುವೆ ಕೊರೊನಾ ವೈರಸ್ಗೆ ಸ್ಪೇನ್ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 5,982ಕ್ಕೆ ಏರಿದೆ. ಇದು ಚೀನಾವನ್ನೂ ಮೀರಿಸಿದೆ. ಸ್ಪೇನ್ನಲ್ಲಿ 73,235 ಕೊರೊನಾ ಸೋಂಕಿತ ಪ್ರಕರಣಗಳಿದ್ದು, 54,968 ಜನರು ಚಿಕಿತ್ಸೆ ಪಡೆಯುತ್ತಿದ್ದು, 12,285 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ತುರ್ತು ಪರಿಸ್ಥಿತಿಯನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲು ಸ್ಪೇನ್ ಸಂಸತ್ತು ನಿರ್ಧರಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ