ಪ್ರಗತಿವಾಹಿನಿ ಸುದ್ದಿ, ಅಥಣಿ – ನಮ್ಮ ಜಿಲ್ಲೆಯಲ್ಲಿ ಕೋವಿಡ್-೧೯ ಬಂದಿಲ್ಲ ಎಂಬ ಉದಾಸೀನ ಯಾವುದೇ ಕಾರಣಕ್ಕೂ ಮಾಡದಿರಿ. ರಾಜ್ಯದಲ್ಲಿ ಕೋರೋನಾ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಸ್ಥಳೀಯ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಅಗತ್ಯ ಸಿದ್ದತಾ ಕ್ರಮಗಳನ್ನು ಕೂಡಲೇ ಮಾಡಿಕೊಳ್ಳಬೇಕು ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಹೇಳಿದರು.
ಅವರು ಶನಿವಾರ ಸಂಜೆ ಇಲ್ಲಿನ ತಾ.ಪಂ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಕೋವಿಡ್-೧೯ ಅಥವಾ ಕೋರೋನಾ ವೈರಸ್ ವ್ಯಾಪಕವಾಗಿ ಹರಡದಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಲಾಕಡೌನ್ ಘೋಷಿಸಿದೆ. ಅಲ್ಲದೇ ಚಿಕಿತ್ಸೆಗೆ ಬೇಕಾಗುವ ಅಗತ್ಯ ಸವಲತ್ತು ಮತ್ತು ಹಣಕಾಸಿನ ನೆರವು ನೀಡುತ್ತಿವೆ.
ಈ ವೈರಾಣು ನಮ್ಮ ಜನರಿಗೆ ಹರಡದಂತೆ ಸುರಕ್ಷಾ ಕ್ರಮಗಳನ್ನು ಅನುಸರಿಸುವುದು ಅಗತ್ಯವಿದೆ.ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಮೂಲಕ ಜನಜಾಗೃತಿ ಮೂಡಿಸಬೇಕು. ಜನರು ಮನೆಯಿಂದ ಹೊರಗೆ ಬರದಂತೆ ತಿಳುವಳಿಕೆ ನೀಡಿ, ಅವರಿಗೆ ಬೇಕಾಗುವ ಅಗತ್ಯ ವಸ್ತುಗಳ ಪುರೈಕೆಗೆ ವ್ಯವಸ್ಥೆ ಮಾಡಬೇಕು.
ನಮ್ಮ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗದೇ ಇರುವುದು ಅತ್ಯಂತ ಸಮಾಧಾನಕರ ಸಂಗತಿಯಾಗಿದೆ. ಆದರೆ ಉದಾಸೀನತೆ ಬೇಡ, ನೆರೆಯ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೊರಗಿನಿಂದ ಬಂದವರ ಮೇಲೆ ನಿಗಾ ಇಡುವುದು ಅಗತ್ಯವಿದೆ ಎಂದು ಹೇಳಿದರು.
2 ತಿಂಗಳ ಪಡಿತರ ಒಮ್ಮೆಲೆ ನೀಡಿ-
ಜನರು ಮನೆಯಿಂದ ಹೊರಗೆ ಬರದೇ ಇರುವುದರಿಂದ ದಿನಸಿ ವಸ್ತುಗಳ ಮತ್ತು ಪಡಿತರ ವ್ಯವಸ್ಥೆ ಒದಗಿಸುವುದು ಅಗತ್ಯವಿದೆ. ಪಡಿತರದಾರರಿಗೆ ತೊಂದರೆಯಾಗದಂತೆ ಬೈಯೋಮೇಟ್ರಕ್ ಪದ್ದತಿ ಇಲ್ಲದೇ ರಜಿಸ್ಟರ್ ನಲ್ಲಿ ಹೆಸರು ನಮೂದಿಸಿಕೊಂಡು ಎಪ್ರೀಲ್ ಮತ್ತು ಮೇ ತಿಂಗಳಿಗೆ ಆಗುವಷ್ಟು ಪಡಿತರ ಧಾನ್ಯಗಳನ್ನು ನೀಡುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಪಟ್ಟಣದಲ್ಲಿ ಪುರಸಭೆಯವರು, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾ.ಪಂ ಅಧಿಕಾರಿಗಳು ಪ್ರತಿದಿನ ಡಂಗುರ ಸಾರುವ ಮೂಲಕ ಕೊರೋನಾ ವೈರಸ್ ಬಗ್ಗೆ ಜಾಗ್ರತಿ ಮೂಡಿಸಬೇಕು.
ಅನಾವಶ್ಯಕವಾಗಿ ಓಡಾಡುವ ಜನರನ್ನು ಪೋಲಿಸರು ನಿಯಂತ್ರಣ ಮಾಡಬೇಕು. ಹೊರಗಿನಿಂದ ಬಂದು ಗ್ರಾಮಗಳಲ್ಲಿ ವಾಸ ಮಾಡಿರುವ ಜನರ ಆರೋಗ್ಯದ ಮೇಲೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಬೇಕು. ಖಾಸಗಿ ದವಾಖಾನೆಯವರಿಗೆ ಮತ್ತು ಔಷಧಿ ಅಂಗಡಿಯವರಿಗೆ ಕಡ್ಡಾಯವಾಗಿ ಆಸ್ಪತ್ರೆ ಆರಂಭಿಸುವಂತೆ ಒತ್ತಾಯ ಮಾಡಬೇಡಿ, ಅವರಲ್ಲಿ ಕೆಲವರಿಗೆ ಸಿಬ್ಬಂದಿಗಳ ಕೊರತೆ, ಅಗತ್ಯ ಸೌಲಭ್ಯಗಳ ಕೊರತೆ, ಮತ್ತು ಸುರಕ್ಷತಾ ಕಿಟ್ ಗಳ ಕೊರತೆಯಿಂದ ಕೆಲವು ಸ್ವಯಂ ಪ್ರೇರಿತವಾಗಿ ತಮ್ಮ ಆಸ್ಪತ್ರೆಯ ಮೂಲಕವೇ ವೈರಾಣು ಹರಡಬಾರದು ಎಂದು ಕ್ಲಿನಿಕ್ ಬಂದ್ ಮಾಡಿದ್ದಾರೆ. ಅವರಿಗೆ ಒತ್ತಾಯ ಮಾಡಬೇಡಿ ಎಂದು ಅಧಿಕಾರಿಗಳು ಸೂಚನೆ ನೀಡಿದರು.
ಜನರಿಗೆ ಅಗತ್ಯವಿರುವ ದಿನಸಿ ವಸ್ತುಗಳನ್ನು ಅಂಗಡಿಕಾರರು ದುಬಾರಿ ಬೆಲೆಗೆ ಮಾರುತ್ತಿರುವ ದೂರುಗಳು ಬಂದಿವೆ. ಅಧಿಕಾರಿಗಳು ಎಲ್ಲ ಅಂಗಡಿಕಾರರಿಗೆ ಈ ಬಗ್ಗೆ ಸೂಚನೆ ನೀಡಬೇಕು. ದೂರುಗಳು ಬಂದಲ್ಲಿ ಕೇಸ್ ಹಾಕಿ ಅಂಗಡಿ ಸೀಜ್ ಮಾಡಬೇಕು ಎಂದರು.
ಕೃಷಿ ಚಟುವಟಿಕೆಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿ-
ಅಥಣಿ ತಾಲೂಕಿನಲ್ಲಿ ರೈತರು ಈಗ ಬೆಳೆದ ಬೆಳೆಗಳ ರಾಶಿಯಲ್ಲಿ ತೊಡಗಿದ್ದಾರೆ. ತಾಲೂಕಿನಲ್ಲಿ ಬೆಳೆದಿರುವ, ದ್ರಾಕ್ಷಿ, ಮುಸಿಕಿನ ಜೋಳ, ರೇಶ್ಮೆ ಬೆಳೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸಿ ರೈತರ ದಾಸ್ತಾನುಗಳ ಮಾರಾಟಕ್ಕೆ ಅಗತ್ಯ ಕ್ರಮ ಕೈಕೊಳ್ಳುವಂತೆ ಶಾಸಕ ಮಹೇಶ ಕುಮಠಳ್ಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಿಲಿಂಗನವರ ಮಾತನಾಡಿ, ಕೊವಿಡ್-೧೯ ಸೊಂಕು ಹರಡದಂತೆ ತಾಲೂಕಿನ ಎಲ್ಲ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು. ಪ್ರತಿ ಗ್ರಾ.ಪಂ ಮಟ್ಟದಲ್ಲಿ ಮತ್ತು ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.
ಈ ವೇಳೆ ತಾ.ಪಂ ಅಧ್ಯಕ್ಷೆ ಕವಿತಾ ನಾಯಿಕ, ತಹಶೀಲ್ದಾರ ದುಂಡಪ್ಪ ಕೋಮಾರ, ತಾ.ಪಂ.ಅಧಿಕಾರಿ ರವಿಂದ್ರ ಬಂಗಾರೆಪ್ಪನವರ, ಡಿವೈಎಸ್ಪಿ ಎಸ್.ವಿ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ. ಆರೋಗ್ಯ ಅಧಿಕಾರಿ ಡಾ.ಮುತ್ತಣಾ ಕೊಪ್ಪದ, ಡಾ.ಚನ್ನಗೌಡ ಪಾಟೀಲ,ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ, ಬಸವರಾಜ ಯಾದವಾಡ. ಇನ್ನಿತರರು ಉಪಸ್ಥಿತರಿದ್ದರು.
ಹೆಸ್ಕಾಂ ಅಧಿಕಾರಿಗೆ ಶಾಸಕರಿಂದ ತರಾಟೆ-
ಇಲ್ಲಿನ ಹೆಸ್ಕಾಂ ಶಾಖಾಧಿಕಾರಿ ಮಲಕಪ್ಪನವರ ಯಾವುದೇ ಮಾಹಿತಿ ಇಲ್ಲದೇ ಸಭೆಗೆ ಬಂದಿದ್ದ ಕಾರಣ ಶಾಸಕ ಮಹೇಶ ಕುಮಠಳ್ಳಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ರೈತರ ಟಿ.ಸಿ.ಗಳನ್ನು ೨೪ ಗಂಟೆಯಲ್ಲಿ ಕೊಡಬೇಕು ಎಂಬ ನಿಯಮ ಇದ್ದರೂ ಹಣದಾಸೆ ೧೫ ದಿನ ಕಳೆದರೂ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ಕೆಟ್ಟ ಚಾಚಿಯನ್ನು ಬಿಟ್ಟು ರೈತರ ವಿಷಯದಲ್ಲಿ ಸೇವಾಭಾವನೆ ಕಲಿಯಿರಿ, ಈಗ ಬೇಸಿಗೆ ಬಂದಿದೆ, ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ಶಿಷ್ಟಾಚಾರ ಉಲ್ಲಂಘನೆ
ಯಾವುದೇ ಚುನಾಯಿತ ಪ್ರತಿನಿಧಿ ಅಲ್ಲದ ಬಿಜೆಪಿ ಮುಖಂಡ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ಪುತ್ರ ಚಿದಾನಂದ ಸವದಿಯವರನ್ನು ವೇದಿಕೆ ಮೇಲೆ ಕೂಡ್ರಿಸಲಾಗಿತ್ತು.
ಅಥಣಿ ತಾಲೂಕಾ ದಂಡಾಧಿಕಾರಿ, ಅಥಣಿ ತಾ.ಪಂ ಅಭಿವೃದ್ದಿ ಅಧಿಕಾರಿ ಸೇರಿದಂತೆ ಇತರ ಅಧಿಕಾರಿಗಳು ವೇದಿಕೆ ಮೇಲೆ ಕೂಡ್ರದೆ ಕೆಳಗಡೆ ಕುಳಿತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಇದು ವ್ಯಾಪಕ ಟೀಕೆಗೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ