ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಕವಗಿ ಹರಡುತ್ತಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಎಸ್.ಆರ್ ನಗರದ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಕುಟುಂಬದ ಮೂವರಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಬಳ್ಳಾರಿಯ ವಿಮ್ಸ್ ಗೆ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಇಂದು ಮೂವರ ವರದಿ ಬಂದಿದ್ದು, ಮೂವರಲ್ಲೂ ಸೋಂಕು ಇರುವುದು ದೃಢವಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.
ಸೋಂಕಿತರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದು, ಈ ಮೂವರು ಇತ್ತೀಚೆಗೆ ಬೆಂಗಳೂರಿನಿಂದ ವಾಪಸ್ಸಾಗಿದ್ದರು. ಬಳಿಕ ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಈ ಮೂವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ರಕ್ತ ಪರೀಕ್ಷೆ ವರದಿ ಕೊರೊನಾ ಪಾಸಿಟಿವ್ ಬಂದಿದೆ. ಇತ್ತ ವಿಷಯ ಗೊತ್ತಾದ ನಂತರ ಇಡೀ ಬಡಾವಣೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಅಳವಡಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸೋಂಕು ಇರುವುದು ದೃಢಪಟ್ಟಿದ್ದರಿಂದ ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆಯಿಂದಲೇ ನಿಯಮ ಜಾರಿಗೆ ಬರುವಂತೆ, ಒಳ ಹಾಗೂ ಹೊರಹೋಗುವ ಎಲ್ಲಾ ರೀತಿಯ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆ 9ರಿಂದ ಹತ್ತು ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಕುಟುಂಬದ ಒಬ್ಬ ಸದಸ್ಯರು ಹೊರಬರಲು ಅವಕಾಶ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ