ಒಂದೆರಡು ದಿನದಲ್ಲೇ ಸಚಿವರ ಉಸ್ತುವಾರಿ ಬದಲಾವಣೆ -ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೆಲಸ ಮಾಡದೆ ಮನೆಯಲ್ಲೇ ಕುಳಿತಿರುವ ಮಂತ್ರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇನ್ನು ಒಂದೆರೆಡು ದಿನದಲ್ಲೇ ಮಂತ್ರಿಗಳ ಉಸ್ತುವಾರಿ ಬದಲಾವಣೆ ಮಾಡುವುದಾಗಿ ಘೋಷಿಸಿದ್ದಾರೆ.

ಖಾಸಗಿ ಚಾನೆಲ್ ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಯಡಿಯೂರಪ್ಪ, ಇಂತಹ ಸಂದರ್ಭದಲ್ಲಿ ಮಂತ್ರಿಗಳು ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆ ಕುಳಿತು ಆಟ ಆಡುವುದಲ್ಲ. ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿ. ಕೊರೋನಾ ತಡೆಯಲು ಏನೇನು ಬೇಕೋ ಅದನ್ನು ಮಾಡಿ ಎಂದು ಕರೆ ನೀಡಿದರು.

ನಮ್ಮ ಸರಕಾರದ ಮರ್ಯಾದೆ ಉಳಿದಿದ್ದರೆ ಡಿಸಿ, ಎಸ್ಪಿಗಳಿಂದಲೇ ಹೊರತು ಮಂತ್ರಿಗಳಿಂದಲ್ಲ ಎಂದು ಖಾರವಾಗಿ ನುಡಿದ ಸಿಎಂ, ಮೈಸೂರು, ಬೆಳಗಾವಿ, ಕಲಬುರ್ಗಿ ಜಿಲ್ಲೆಗಳಲ್ಲಿ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಾನು ಯಾವ ರೀತಿಯ ಅಭಿನಂದನೆ ಸಲ್ಲಿಸಬೇಕು ತಿಳಿಯುತ್ತಿಲ್ಲ ಎಂದು ಪ್ರಶಂಸಿಸಿದರು.

ಇಂದಿನಿಂದಲೇ ನಾನು ಯಾವ ಮಂತ್ರಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಕುರಿತು ಪ್ರತಿನಿತ್ಯ ವರದಿ ತರಿಸಿಕೊಳ್ಳುತ್ತೇನೆ. ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಆಟವಾಡುತ್ತಿದ್ದರೆ ಅವರಿಗೆಲ್ಲ ಮೂಗುದಾರ ಹಾಕುವ ಕೆಲಸ ಮಾಡುತ್ತೇನೆ ಎಂದರು.

ಯಾರೂ ಕೆಲಸ ಮಾಡುತ್ತಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ  3 -4 ಮಂತ್ರಿಗಳು ಕೆಲಸ ಮಾಡುತ್ತಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇಂತವರಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಅವರು ಹೇಳಿದರು.

ಈ ಹಿಂದೆ ಒಬ್ಬೊಬ್ಬರಿಗೆ 2-3 ಜಿಲ್ಲೆಯ ಜವಾಬ್ದಾರಿ ಕೊಡಲಾಗಿತ್ತು. ಈಗ ತಕ್ಷಣ, ಇಂದು ಅಥವಾ ನಾಳೆಯೇ ಇದನ್ನು ಬದಲಾವಣೆ ಮಾಡುತ್ತೇನೆ. ಜವಾಬ್ದಾರಿಯನ್ನು ಹಂಚುತ್ತೇನೆ. ಸರಿಯಾಗಿ ಕ್ಷೇತ್ರಕ್ಕಿಳಿದು ಕೆಲಸ ಮಾಡುವಂತೆ ಕಟ್ಟಪ್ಪಣೆ ಮಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

ಕೊರೋನೋ ಸಂಬಂಧ ನಾವು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ದರಿದ್ದೇವೆ, ಆದರೆ ವಿರೋಧ ಪಕ್ಷಗಳು ಸಹಕಾರ ನೀಡಬೇಕು. ಸೂಕ್ತವಾದ ಸಲಹೆ ನೀಡಿದರೆ ಸ್ವೀಕರಿಸಲು ಸಿದ್ದರಿದ್ದೇವೆ. ಈವರೆಗೆ ನಾವು ತೆಗೆದುಕೊಂಡಿರುವ ಎಲ್ಲ ಕ್ರಮಗಳೂ ಸೂಕ್ತವಾಗಿವೆ ಎಂದು ಅವರು ತಿಳಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button