ಮಲಗಿದ್ರೆ-ಸಾವು, ಕೂತಿದ್ರೆ–ರೋಗ, ನಡೀತಿದ್ರೆ ಜೀವನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮುಂಜಾಗೃತಾ ಕ್ರಮವಾಗಿ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದ್ದರೂ ಜನರು ಅಲ್ಲಲ್ಲಿ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಈ ನಡುವೆ ರಿಯಲ್ ಸ್ಟಾರ್ ಉಪೇಂದ್ರ ಸಿಎಂ ಬಿ ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿದ್ದು, ಒಂದು ಸಂಪೂರ್ಣ ಲಾಕ್ ಡೌನ್ ಘೋಷಿಸಿ ಇಲ್ಲ ಲಾಕ್ ಡೌನ್ ತೆರವುಗೊಳಿಸಿ ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿರುವ ಉಪೇಂದ್ರ ಎರಡರಲ್ಲಿ ಯಾವುದಾದರೂ ಒಂದನ್ನು ಮಾಡಿ ಎಂದಿದ್ದಾರೆ.

1. ಶೇಕಡ ನೂರಕ್ಕೆ ನೂರು ಲಾಕ್‍ಡೌನ್: ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸಿ
* ಹಾಲು, ತರಕಾರಿ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರುತ್ತಾರೆ.
* ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ.

2. ಜನರಿಗೆ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್‍ಡೌನ್ ತೆರೆಯಿರಿ: ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅವರವರ ವ್ಯವಹಾರಗಳನ್ನು ಮುಂದುವರಿಸುವುದು. ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರು (ಹೀಗೆ ನಾಯಕರಯ ಮಾಡಿಬಿಟ್ಟಿದ್ದಾರೆ) ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ.
* ಲಾಕ್‍ಡೌನ್ ಮಾಡಿ ಜನರನ್ನು ಹಾಲು, ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯ್ಯುವುದು ಎಷ್ಟು ಸರಿ?

ಇಷ್ಟೆಲ್ಲಾ ಲಾಕ್‍ಡೌನ್ ಮಾಡಿಯೇ ನಮ್ಮ ದಡ್ಡ ಜನರು ಹೀಗೆ. ಇನ್ನು ಲಾಕ್‍ಡೌನ್ ತೆಗೆದ್ರೆ ರೋಡ್ ರೋಡಲ್ಲಿ ಹೆಣ ಬೀಳುತ್ತೆ ಅಂತ ಹೇಳುವವರಿಗೆ (ಹೆದರುವವರಿಗೆ) ಒಂದು ಕಿವಿ ಮಾತು. ಹೀಗೆ ಲಾಕ್‍ಡೌನ್ ಮುಂದುವರಿಸಿದ್ರೂ ಅದೇ ಪರಿಸ್ಥಿತಿ ಬರಬಹುದು ಯೋಚನೆ ಮಾಡಿ.
ಮಲಗಿದ್ರೆ-ಸಾವು | ಕೂತಿದ್ರೆ – ರೋಗ | ನಡೀತಿದ್ರೆ ಜೀವನ ಎಂದು ಬರೆದು ಸಿಎಂ ಯಡಿಯೂರಪ್ಪನವರಿಗೆ ಟ್ಯಾಗ್ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button