ಶಿವಮೊಗ್ಗದಲ್ಲಿ ಹೆಚ್ಚುತ್ತಿದೆ ಮಂಗನ ಕಾಯಿಲೆ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಮಂಗನ ಕಾಯಿಲೆ ಕೂಡ ಹೆಚ್ಚುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 139 ಪ್ರಕರಣಗಳಲ್ಲಿ ಕೆಎಫ್​ಡಿ ಸೋಂಕು ದೃಢಪಟ್ಟಿದೆ.

ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್​ಡಿಗೆ ಸಂಬಂಧಿಸಿದಂತೆ ಇದುವರೆಗೆ 4,570 ಜನರ ರಕ್ತದ ಮಾದರಿ ಪರೀಕ್ಷಿಸಲಾಗಿದ್ದು, ಇದರಲ್ಲಿ 139 ಪ್ರಕರಣಗಳಲ್ಲಿ ಪಾಸಿಟಿವ್ ಕಂಡು ಬಂದಿದೆ.

ಜಿಲ್ಲೆಯಲ್ಲಿ ಒಟ್ಟು 3 ಜನರು ಮಂಗನ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ. ತೀರ್ಥಹಳ್ಳಿ, ಸಾಗರ, ಸೊರಬ, ಹೊಸನಗರ ಭಾಗದಲ್ಲಿ ಮಂಗನ ಕಾಯಿಲೆ ಹೆಚ್ಚಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಈಗಾಗಾಲೇ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಗೊಬ್ಬರಕ್ಕಾಗಿ ಅರಣ್ಯ ಪ್ರದೇಶದಿಂದ ಒಣ ಎಲೆಗಳನ್ನು ತಂದಿರುವ ಪ್ರಕರಣಗಳಲ್ಲಿ ಮಂಗನ ಕಾಯಿಲೆ ಹೆಚ್ಚಿನ ಪ್ರಮಾಣದಲ್ಲಿ ಹರಡಿರುವುದನ್ನು ಪತ್ತೆ ಹಚ್ಚಲಾಗಿದ್ದು, ಈ ಹಿನ್ನೆಲೆಯಲ್ಲಿ ಒಣ ಎಲೆಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಾಲಿನ 129 ಮಂಗನ ಕಾಯಿಲೆ ಪ್ರಕರಣಗಳು ಜಿಲ್ಲೆಯ ಕೇವಲ 31 ನಿರ್ದಿಷ್ಟ ಪ್ರದೇಶಗಳಲ್ಲಿ ವರದಿಯಾಗಿದ್ದು, ಇವುಗಳನ್ನು ಅತಿಸೂಕ್ಷ್ಮ ಪ್ರದೇಶ ಎಂದು ಜಿಲ್ಲಾಡಳಿತ ಗುರುತಿಸಿದೆ.

ಅರಣ್ಯ ಪ್ರದೇಶದಲ್ಲಿ ವಿಷಾಣು ಸೋಂಕಿತ ಉಣ್ಣೆಗಳಿಂದ ಮಂಗನ ಕಾಯಿಲೆ ಹರಡುವುದರಿಂದ ಸಾವು-ನೋವುಗಳು ಹೆಚ್ಚಾಗುವ ಆತಂಕವಿದೆ. ತೀರ್ಥಹಳ್ಳಿ ತಾಲೂಕಿನ ಲಿಂಗಾಪುರ ಗ್ರಾಮ ಪಂಚಾಯ್ತಿಯ ಸಿಂದವಾಡಿ, ಮೂವಳ್ಳಿ ಮತ್ತು ಅಡ್ಡಗುಡ್ಡೆ, ಕನ್ನಂಗಿ ಗ್ರಾಮ ಪಂಚಾಯ್ತಿಯ ಕುಡುವಳ್ಳಿ, ಹಿರೇಬೈಲು, ಹೊರಬೈಲು, ಯಡವತ್ತಿ ಮತ್ತು ಬಸ್ತಿಕೊಪ್ಪ, ಹಣಗೆರೆ ಗ್ರಾಮ ಪಂಚಾಯ್ತಿಯ ಸಿರಿಬೈಲು, ತ್ರಯಂಬಕಪುರ ಗ್ರಾಮ ಪಂಚಾಯ್ತಿಯ ಗುಂಡಗದ್ದೆ, ಹೊಸಗದ್ದೆ, ನೇರಳೆ, ಕಾನಕೊಪ್ಪ, ಹುಲ್ಲತ್ತಿ, ಬಾಳಗಾರು, ಅಕ್ಲಾಪುರ ಮತ್ತು ಕೇಶ್ವಾಪುರ, ದೇಮ್ಲಾಪುರ ಗ್ರಾಮ ಪಂಚಾಯ್ತಿಯ ದೇಮ್ಲಾಪುರ ಮತ್ತು ಕಂಕಳ್ಳಿ, ಕೋಣಂದೂರು ಗ್ರಾಮ ಪಂಚಾಯ್ತಿಯ ಅಗಸರಕೊಪ್ಪ, ಕುಕ್ಕೆ ಗ್ರಾಮ ಪಂಚಾಯ್ತಿಯ ತನಿಕಲ್, ಸರವಿನಕೊಪ್ಪ ಮತ್ತು ಮೇಲಿನ ಹೊಸಬೀಡಿನಲ್ಲಿ ಅರಣ್ಯಗಳಿಗೆ ಜನರ ಪ್ರವೇಶ ನಿಷೇಧಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button