ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಈ ಸೋಂಕಿನ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆ್ಯಪ್ ಅನ್ನು ಎಲ್ಲರೂ ಕಡ್ಡಾಯವಾಗಿ ಬಳಸಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.
ಆರೋಗ್ಯ ಸೇತು ಆ್ಯಪ್ ಹೆಚ್ಚು ಅನುಕೂಲ. ಹಾಗಾಗಿ ಸಾರ್ವಜನಿಕರು, ಸರ್ಕಾರಿ ನೌಕರರು, ಸ್ವಯಂ ಸೇವಕರು ಕಡ್ಡಾಯವಾಗಿ ‘ಆರೋಗ್ಯ ಸೇತು’ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
ಮೊಬೈಲ್ ಬಳಸುವ ಪ್ರತಿಯೊಬ್ಬರೂ ಆರೋಗ್ಯ ಸೇತು (Aarogya Setu App) ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆ್ಯಪ್ನಲ್ಲಿ ಕೊರೊನಾ ವೈರಸ್ಗೆ ಸಂಬಂಧಿಸಿದ ರೋಗ ಲಕ್ಷಣಗಳನ್ನು ದಾಖಲಿಸಬಹುದಾಗಿದೆ. ನಾವು ಈ ಮಾಹಿತಿ ದಾಖಲಿಸಿದ ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ರವಾನೆಯಾಗಲಿದೆ. ಇದು ಕೊರೋನಾ ವೈರಸ್ ಬಂದ ರೋಗಿ ಇರುವ ಸ್ಥಳವನ್ನೂ ಸುಲಭವಾಗಿ ಪತ್ತೆ ಮಾಡುವಂಥ ವ್ಯವಸ್ಥೆ ಈ ಆ್ಯಪ್ ಹೊಂದಿದೆ.
ಆರೋಗ್ಯ ಸೇತು ಎಂಬುದು ಕೋವಿಡ್-19 ಟ್ರ್ಯಾಕ್ ಮಾಡುವ ಮೊಬೈಲ್ ಆ್ಯಪ್. ಇದು ಯಾರಿಗೆ ಕೊರೋನಾ ಬಂದಿದೆ ಮತ್ತು ಯಾರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ನೀಡುತ್ತದೆ. ವೈರಸ್ಗೆ ತುತ್ತಾದ ವ್ಯಕ್ತಿಯ ಮೇಲೆ ನಿಗಾ ಇರಿಸುವ ಆ್ಯಪ್ ಇದಾಗಿದೆ. ಈ ಸಂಬಂಧ ವೈಯಕ್ತಿಕ ಅಲರ್ಟ್ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತದೆ. ಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ಸೋಂಕಿತರ ಚಲನವಲನದ ಬಗ್ಗೆ ನಿಗಾವಹಿಸುತ್ತದೆ. ಇದು ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ