ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ಕ್ಯಾನ್ಸರ್ ರೋಗಿಯೊಬ್ಬರಿಗೆ ವ್ಯವಸ್ಥೆಯಾಗಿದ್ದ ಆಪರೇಶನ್ ರದ್ದಾಗಿತ್ತು. ಈ ಕುರಿತು ರೋಗಿಯ ಸಂಬಂಧಿಯೊಬ್ಬರಿಂದ ಬಂದ ಮಾಹಿತಿ ಆಧರಿಸಿ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸೋಮವಾರವೇ ಆಪರೇಶನ್ ಗೆ ವ್ಯವಸ್ಥೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಶಿರಗೂರ ಗ್ರಾಮದ ಬಾಹುಸಾಬ ಲಕ್ಷ್ಮಣ್ ಕಾಂಬಳೆ ಎನ್ನುವವರು ಮುಖ್ಯಮಂತ್ರಿಗಳಿಗೆ ಸಂದೇಶವೊಂದನ್ನು ಕಳುಹಿಸಿದ್ದರು.
“ನಮ್ಮ ಮನೆಯ ಹಿರಿಯ ಮಹಿಳೆ ಕಮಲವ್ವ ಹಿಡಕಲ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ತಿಂಗಳ ಹಿಂದೆ ಅವರನ್ನು ಕರ್ನಾಟಕ ಕ್ಯಾನ್ಸರ್ ಹಾಸ್ಪಿಟಲ್ ಹುಬ್ಬಳ್ಳಿ (ನವನಗರ) ಇಲ್ಲಿಗೆ ದಾಖಲು ಮಾಡಿದ್ದೆವು. ನಾಲ್ಕು ದಿನದಲ್ಲಿ ಆಪರೇಷನ್ ಮಾಡಲು ಸೂಕ್ತ ಕ್ರಮಗಳನ್ನು ವೈದ್ಯರು ತೆಗೆದುಕೊಂಡಿದ್ದರು.
ಆದರೆ ಕೊರೋನ ರೋಗ ದೇಶಾದ್ಯಂತ ಹರಡಿದ ಕಾರಣ ಕೇಂದ್ರ ಸರ್ಕಾರ , ಲಾಕ್ ಡೌನ್ ಘೋಷಣೆ ಮಾಡಿತ್ತು. ಲಾಕ್ ಡೌನ್ ಘೋಷಣೆ ಆದಮೇಲೆ ಆಸ್ಪತ್ರೆಯನ್ನು ಮುಚ್ಚಿ ಲಾಕ್ ಡೌನ್ ತೆರವುಗೊಳಿಸುವವರೆಗೆ ಆಪರೇಷನ್ ಮಾಡುವುದಿಲ್ಲವೆಂದು ಮನೆಗೆ ಕಳುಹಿಸಿದ್ದಾರೆ.
ಆದರೆ ಕ್ಯಾನ್ಸರ್ ಅನ್ನನಾಳಕ್ಕೆ ಆಗಿರುವುದರಿಂದ ಅವರು ಎರಡು ತಿಂಗಳಿಂದ ಆಹಾರ ನೀರು ಸೇವಿಸದೆ ಸಾವು -ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರಿಗೆ ಶೀಘ್ರದಲ್ಲೇ ಆಪರೇಷನ್ ಮಾಡಬೇಕಿರುವುದರಿಂದ ದಯವಿಟ್ಟು ಕರ್ನಾಟಕ ಕ್ಯಾನ್ಸರ್ ಹಾಸ್ಪಿಟಲ್ ಹುಬ್ಬಳ್ಳಿ
ಈ ಆಸ್ಪತ್ರೆಯನ್ನು ಓಪನ್ ಮಾಡಿಸಿ ದಯವಿಟ್ಟು ಆಪರೇಷನ್ ಮಾಡಲು ಸೂಚಿಸಬೇಕು” ಎಂದು ಅವರು ವಿನಂತಿಸಿದ್ದರು.
ಬಾಹುಸಾಬ್ ಲಕ್ಷ್ಮಣ್ ಕಾಂಬ್ಳೆಯವರ ಮನವಿ ಗಮನಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ತಕ್ಷಣ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜೊತೆ ಮಾತನಾಡಿ ಶೀಘ್ರವೇ ಆಪರೇಷನ್ ಗೆ ವ್ಯವಸ್ಥೆ ಮಾಡಲು ಆದೇಶಿಸಿದರು.
ಮುಖ್ಯಮಂತ್ರಿಗಳ ಅದೇಶದಂತೆ ನಾಳೆಯೇ ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಪರೇಷನ್ ಗೆ ಧಾರವಾಡದ ಡಿಎಪ್ಒ ವ್ಯವಸ್ಥೆ ಮಾಡಿದ್ದಾರೆ.
ಈಚೆಗಷ್ಟೆ ಮುಖ್ಯಮಂತ್ರಿಗಳು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರಾಮದುರ್ಗ ತಾಲೂಕಿನ ಮಹಿಳೆಗೆ ಕೆಲವೇ ಕ್ಷಣದಲ್ಲಿ ಔಷಧ ವ್ಯವಸ್ಥೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಸುದ್ದಿ ಓದಿ –
ಯುವತಿಯ ಟಿಕ್ ಟಾಕ್ : ಸಿಎಂ ಮಾನವೀಯತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ