ಪ್ರಗತಿವಾಹಿನಿ ಸುದ್ದಿ, ಮುಧೋಳ – ಕೊವಿಡ್-೧೯ ಕೊರೋನಾ ಮಹಾಮಾರಿ ಜಗತ್ತನ್ನು ವ್ಯಾಪಿಸಿದೆ. ಮುಂದುವರೆದ ರಾಷ್ಟ್ರಗಳೆಲ್ಲವೂ ಕಾಣದ ವೈರಾಣುವಿನ ವಿರುದ್ದದ ಸಮರದಲ್ಲಿ ಸೋತು ಸುಣ್ಣವಾಗಿವೆ. ಹೆಲ್ತ್ ಏಮರ್ಜನ್ಸಿ ಘೋಷಣೆಯಾಗಿದೆ.
ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಕಳೆದೆರಡು ತಿಂಗಳುಗಳಿಂದ ಈ ವೈರಾಣು ನಮ್ಮ ದೇಶದಲ್ಲಿಯೂ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಸರ್ಕಾರಕ್ಕೆ ಉದ್ಯಮಗಳು, ಸಮಾಜಸೇವಾ ಸಂಸ್ಥೆಗಳು, ದೇಶವಾಸಿಗಳು ಸಾಥ್ ಕೊಟ್ಟಾಗ ಮಾತ್ರ ಈ ವಿಷಚಕ್ರವ್ಯೂಹದಿಂದ ದೇಶ ಪಾರಾಗಲು ಸಾಧ್ಯ.
ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಜೊತೆಗೆ ಖಾಸಗಿವಲಯದ ಸಂಸ್ಥೆಗಳು ಸರ್ಕಾರದ ಜೊತೆಗೆ ಗಟ್ಟಿಯಾಗಿ ನಿಂತು ಸಾಮಾಜಿಕ ಬದ್ದತೆಯನ್ನು ಪ್ರದರ್ಶಿಸುತ್ತಿವೆ. ಅಂತಹ ಸಂಸ್ಥೆಗಳಲ್ಲಿ ಉತ್ತರ ಕರ್ನಾಟಕದ ಎಂ.ಆರ್.ಎನ್. (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯೂ ಒಂದಾಗಿದೆ.
ಸ್ಯಾನಿಟೈಸರ್ ಟನಲ್ ನಿರ್ಮಾಣ:
ಕಾರ್ಖಾನೆಗಳ ಎಲ್ಲ ಗೇಟ್ ಬಳಿ ಸೊಂಕು ಹರಡುವಿಕೆ ತಪ್ಪಿಸಲು ಸ್ವಯಂಚಾಲಿತ ಸ್ಯಾನಿಟೈಸರ್ ಟನಲ್‌ಗಳನ್ನು ನಿರ್ಮಿಸಲಾಗಿದೆ. ಉದ್ಯೋಗಿಯು ಕಾರ್ಖಾನೆ ಆವರಣ ಪ್ರವೇಶಕ್ಕಿಂತ ಮೊದಲು ಸ್ವಚ್ಚವಾಗಿ ಕೈ ತೊಳೆದುಕೊಂಡು, ಹ್ಯಾಂಡ್ ಸ್ಯಾನಿಟೈಸರ್ ಸಿಂಪಡಿಸಿಕೊಂಡು, ಗ್ಲೊವ್ಸ್, ಮಾಸ್ಕ್ ಧರಿಸಿ ಟೆಂಪರೆಚರ್ ಗನ್ ಮೂಲಕ ದೇಹದ ಉಷ್ಣಾಂಶ ಪರೀಕ್ಷೆಗೆ ಒಳಪಟ್ಟು ನಂತರ ಸ್ಯಾನಿಟೈಸರ್ ಟನಲ್ ಮೂಲಕ ಕಾರ್ಖಾನೆ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ.
ಉದ್ಯೋಗಿಗಳ ಸುರಕ್ಷತೆಗೆ ದಿಟ್ಟ ಕ್ರಮ:
ಸಕ್ಕರೆ, ಸಿಮೆಂಟ್, ಡಿಸ್ಟಿಲರಿ, ಬ್ಯಾಂಕಿಂಗ್, ಶಿಕ್ಷಣ ವಿವಿಧ ಕ್ಷೇತ್ರಗಳಲ್ಲಿ ಮುಂದುವರೆದ ನಿರಾಣಿ ಉದ್ಯಮ ಸಂಸ್ಥೆಯಲ್ಲಿ ೧೦ ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಕಾರ್ಖಾನೆಗಳ ವಸತಿ ಸಮುಚ್ಚಯಗಳಲ್ಲಿ ನಿವಾಸಿಗಳ ಹಿತರಕ್ಷಣೆಗೊಸ್ಕರ ಭಾರತದಲ್ಲಿ ಕೊವಿಡ್-೧೯ ಸೊಂಕು ಕಾಣಿಸಿಕೊಂಡಾಗಿನಿಂದಲೂ ಕಟ್ಟುನಿಟ್ಟಾದ ಕ್ರಮಗಳನ್ನು ಸಂಸ್ಥೆ ಅನುಷ್ಠಾನಗೊಳಿಸಿದೆ.
ಕಾಲೋನಿ ಒಳಗೆ ಅಪರಿಚಿತರು, ಬಂಧುಗಳು, ಪ್ರವೇಶಿಸದಂತೆ ಹಾಗೂ ನಿವಾಸಿಗಳು ಹೊರಹೋಗದಂತೆ ನಿರ್ಭಂಧಿಸಲಾಗಿದೆ. ಪ್ರವಾಸದಲ್ಲಿದ್ದ ಕುಟುಂಬಗಳನ್ನು ಸ್ವಯಂ ಕ್ವಾರಂಟೈನ್ ವಿಧಿಸಿಕೊಳ್ಳುವಂತೆ ಆದೇಶಿಸಲಾಗಿದೆ. ಒಂದು ತಿಂಗಳಿನಿಂದ ಇಂದಿನವರೆಗೆ ಯಾವೊಬ್ಬ ಹೊಸವ್ಯಕ್ತಿ ಕಾಲೊನಿ ಪ್ರವೇಶಿಸಿಲ್ಲ. ನಿವಾಸಿಗಳಿಗೆ ರೇಶನ್ ಹಾಗೂ ತರಕಾರಿಗಳನ್ನು ಕಾರ್ಖಾನೆ ಸೆಕ್ಯುರೆಟಿ ಸಿಬ್ಬಂದಿಯಿಂದಲೇ ಸರಬರಾಜು ಮಾಡಲಾಗುತ್ತಿದೆ.
ಸಿಬ್ಬಂದಿ ಕುಟುಂಬಗಳ ಆರೋಗ್ಯಕ್ಕಾಗಿ ಸ್ವಚ್ಚತೆಗೆ ಪ್ರಥಮ ಆದತೆ. ಪರಿಸರಸ್ನೇಹಿ ವಾತಾವರಣ ನಿರ್ಮಿಸಲಾಗಿದೆ. ತ್ವರಿತಗತಿಯ ಆರೋಗ್ಯ ಸೇವೆ ಮತ್ತು ಯೋಗ, ಆಯುರ್ವೆದದ ಮಹತ್ವವನ್ನು ಪರಿಣಾಮಕಾರಿ ತಿಳಿಸಿಕೊಡಲಾಗಿದೆ. ಕೊವಿಡ್-೧೯ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಕಾಪಾಡಿಕೊಳ್ಳಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಪ್ರತಿದಿನ ೨ ಬಾರಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಭೇಟ್ಟಿ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ದೈನಂದಿನ ಕಾರ್ಯಗಳನ್ನು ಆಯಾ ವಿಭಾಗಗಳ ಮುಖ್ಯಸ್ಥರು ಡಿಜಿಟಲ್ ಮಿಡಿಯಾ ಸಹಾಯದಿಂದ ಮನೆಯಲ್ಲಿಯೇ ಕುಳಿತು ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ಗಿಂತ ಮೊದಲೇ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವವರಿಗೆ ನಿರ್ಬಂಧ ಹೇರಲಾಗಿದೆ. ಟೆಲಿಕಮ್ಯುನಿಕೇಶನ್ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಮಿಟಿಂಗ್‌ಗಳನ್ನು ನಡೆಸಲಾಗುತ್ತಿದೆ.
ಕೃಷಿ ಆಧಾರಿತ ಉದ್ಯಮವಾಗಿರುವುದರಿಂದ ಹಾಗೂ ಕೊವಿಡ್-೧೯ ಸಾಂಕ್ರಾಮಿಕ ನಿಯಂತ್ರಿಸಲು ಅಗತ್ಯ ಸಲಕರಣೆಯಾದ ಸ್ಯಾನಿಟೈಸರ್ ಉತ್ಪಾದನೆ ನಡೆಯುತ್ತಿರುವುದರಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಪ್ರಾಥಮಿಕ ಸುರಕ್ಷಾ ಸಲಕರಣೆಗಳಾದ ಮಾಸ್ಕ್, ಗ್ಲೋವ್ಸ್, ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಒದಗಿಸಲಾಗಿದೆ. ಸರಕು ಸಾಗಾಣೆ ವಾಹನಗಳ ಚಾಲಕರು, ಕ್ಲಿನರ್‌ಗಳನ್ನು ವಾಹನದಿಂದ ಇಳಿಸದೇ ಅವರಿಗೆ ಸ್ಥಳದಲ್ಲಿಯೇ ಎಲ್ಲವನ್ನು ಪೂರೈಸುವ ವ್ಯವಸ್ಥೆ ಮಾಡಿದೆ. ಕೇಂದ್ರ ಆರೋಗ್ಯ ಇಲಾಖೆಯು ಕೊವಿಡ್-೧೯ ಸೊಂಕಿನಿಂದ ತಪ್ಪಿಸಿಕೊಳ್ಳಲು ಸೂಚಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ.
ಬಯೋಮೆಟ್ರಿಕ್ ಉಪಕರಣಗಳಿಂದಾಗಿ ಸೊಂಕು ವ್ಯಾಪಕವಾಗಿ ಹರಡುವ ಅಪಾಯವಿರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಬಯೋಮೆಟ್ರಿಕ್ ಹಾಜರಾತಿಯನ್ನು ರದ್ದುಗೊಳಿಸಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವ ವಿಧಾನವನ್ನು ಅನುಸರಿಸಲಾಗುತ್ತಿದೆ. ಕೆಲಸದ ಸಂದರ್ಭದಲ್ಲಿ ಸುರಕ್ಷಿತ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಜಾಗ್ರತೆಯಿಂದ ಪಾಲಿಸಲಾಗುತ್ತಿದೆ.
ಸೊಂಕು ನಿಯಂತ್ರಣಕ್ಕಾಗಿ ಸ್ಯಾನಿಟೈಸರ್ ಉತ್ಪಾದನೆ:
ಸಮೂಹ ಸಂಸ್ಥೆಯು ೩ ಡಿಸ್ಟಿಲರಿ ಘಟಕಗಳಲ್ಲಿ ಹೆಚ್ಚಿನ ಪ್ರಮಾಣದ ಇಥೇನಾಲ್‌ನ್ನು ತಯಾರಿಸುತ್ತಿದೆ. ಕೊರೋನಾ ಸೊಂಕು ನಿಯಂತ್ರಣಕ್ಕೆ ಸ್ಯಾನಿಟೈಸರ್ ಅವಶ್ಯಕತೆಯನ್ನು ಮನಗಂಡು ಅತ್ಯುತ್ತಮ ಗುಣಮಟ್ಟದ ಸ್ಯಾನಿಟೈಸರ್ ಉತ್ಪಾದಿಸುವ ದಿಟ್ಟ ಹೆಜ್ಜೆಯನ್ನು ನಿರಾಣಿ ಸಮೂಹ ಸಂಸ್ಥೆ ಇಟ್ಟಿದೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹುಬೇಡಿಕೆ ಇರುವ ಈ ಸ್ಯಾನಿಟೈಸರ್‌ನ್ನು ಪೂರೈಸುತ್ತಿದೆ.
೧ ಕೋಟಿ ಮೌಲ್ಯದ ಉಚಿತ ಸ್ಯಾನಿಟೈಸರ್ ವಿತರಣೆ:
ಮಾರಾಟದ ಉದ್ದೇಶಕ್ಕಷ್ಟೆ ಸ್ಯಾನಿಟೈಸರ್ ಉತ್ಪಾದನೆ ಮಾಡದೇ ಬಾಗಲಕೋಟ ಜಿಲ್ಲೆಗೆ ರೂ. ೧ ಕೋಟಿ ಮೌಲ್ಯದ ಉಚಿತ ಸ್ಯಾನಿಟೈಸರ್ ದೇಣಿಗೆಯಾಗಿ ನೀಡಿರುವುದು ಸಮೂಹ ಸಂಸ್ಥೆಯ ಸಾಮಾಜಿಕ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಈ ಸ್ಯಾನಿಟೈಸರ್‌ನ್ನು ಕೊವಿಡ್-೧೯ ಸೊಂಕು ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‌ಗಳಿಗೆ, ರೈತರಿಗೆ, ಸರ್ಕಾರಿ ಕಛೇರಿಗಳಿಗೆ ಉಚಿತವಾಗಿ ವಿತರಿಸುವ ಕಾರ್ಯ ಎಂ.ಆರ್.ಎನ್. (ನಿರಾಣಿ) ಫೌಂಡೇಶನ್ ಮೂಲಕ ನಡೆಯುತ್ತಿದೆ.
ಗೋವಾ ಕನ್ನಡಿಗರ ನೆರವಿಗೆ ನಿಂತ ಮುರುಗೇಶ ನಿರಾಣಿ:
ಸಿಬ್ಬಂದಿಗಳ ಹಿತರಕ್ಷಣೆಯ ಜೊತೆಗೆ ಕೊವಿಡ್-೧೯ ಲಾಕಡೌನ್‌ನಿಂದಾಗಿ ಗೋವಾ ರಾಜ್ಯದಲ್ಲಿ ಸಿಲುಕಿಕೊಂಡಿರುವ ಗೋವಾ ಕನ್ನಡಿಗ ಕಾರ್ಮಿಕರ ಸಂಕಷ್ಟವನ್ನು ಅರಿತು ಮುರುಗೇಶ ನಿರಾಣಿಯವರು ತಕ್ಷಣ ಸ್ಪಂದಿಸಿ ಅವಶ್ಯಕವಾದ ರೇಶನ್ ಹಾಗೂ ದಿನಬಳಕೆ ವಸ್ತುಗಳನ್ನು ಕಳುಹಿಸಿಕೊಟ್ಟು ಹೃದಯ ವೈಶಾಲ್ಯತೆಯನ್ನು ಪ್ರದರ್ಶಿಸಿದ್ದಾರೆ.
ಸಮಾಜ ಸಂಕಷ್ಟದಲ್ಲಿದ್ದಾಗ ಆಸರೆಯಾಗಿ ನಿಲ್ಲುವ ನಿರಾಣಿ ಫೌಂಡೇಶನ್:
ಎಂ.ಆರ್.ಎನ್. (ನಿರಾಣಿ) ಫೌಂಡೇಶನ್ ಪ್ರತಿ ಬಾರಿಯೂ ನಾಡಿಗೆ ಕಷ್ಟ ಬಂದಾಗ ಸ್ಪಂದಿಸಿದೆ. ಮಡಿಕೇರಿ ಭೀಕರ ಜಲಪ್ರಳಯಕ್ಕೆ ತುತ್ತಾಗಿದ್ದಾಗ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಸೂರು ಕಲ್ಪಿಸಿಕೊಳ್ಳಲು ಸಿಮೆಂಟ್ ನೀಡಿತ್ತು. ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಬಂದಾಗ ಮುಖ್ಯಮಂತ್ರಿ ಪರಿಹಾರ ನಿಧಿಗೆ ೧.೦೦ ಕೋಟಿ ರೂ ಉದಾರವಾಗಿ ದೇಣಿಗೆ ನೀಡಿದೆ. ಅಲ್ಲದೇ ಮುಧೋಳದಲ್ಲಿ ಹಾಗೂ ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ಗಂಜಿ ಕೇಂದ್ರ ಹಾಗೂ ಪಶುಗಳಿಗಾಗಿ ಗೋಶಾಲೆ ಪ್ರಾರಂಭಿಸಿತ್ತು.
ವರ್ಷಪೂರ್ತಿ ಸಾಮಾಜಿಕ ಕಾರ್ಯಕ್ರಮಗಳು:
ಆರೋಗ್ಯವಂತ ಸಮಾಜ ನಿರ್ಮಾಣ ಹಾಗೂ ಉದ್ಯಮಿಯಾಗು ಉದ್ಯೋಗ ನೀಡು ಈ ಎರಡು ಸಂಕಲ್ಪಗಳನ್ನು ಹೊತ್ತು ಎಂ.ಆರ್.ಎನ್ (ನಿರಾಣಿ) ಫೌಂಡೇಶನ್ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಉಚಿತ ಆರೋಗ್ಯ ಶಿಬಿರಗಳನ್ನು ಸಂಘಟಿಸಿ ೧ ಲಕ್ಷಕ್ಕೂ ಅಧಿಕ ಜನರಿಗೆ ಆರೋಗ್ಯ ತಪಾಸಣೆ ಹಾಗೂ ೨೦,೦೦೦ಕ್ಕೂ ಅಧಿಕ ಜನರಿಗೆ ವಿವಿಧ ಮಾದರಿ ಶಸ್ತ್ರಚಿಕಿತ್ಸೆ ಮಾಡಿಸಿದೆ. ಎಂ.ಆರ್.ಎನ್. (ನಿರಾಣಿ) ಆರೋಗ್ಯ ಯೋಜನೆ ೧ ಲಕ್ಷಕ್ಕೂ ಅಧಿಕ ಬಡ ಕುಟುಂಬಗಳ ಪಾಲಿನ ಸಂಜೀವಿನಿಯಂತೆ ಕೆಲಸ ಮಾಡಿದೆ. ಆರೋಗ್ಯ ಸೇವೆಯ ಜೊತೆಗೆ ಫೌಂಡೇಶನ್ ಮೂಲಕ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ರೈತರಿಗಾಗಿ ಕಾರ್ಯಾಗಾರ, ನದಿಜೋಡಣೆ ಪರಿಕಲ್ಪನೆಗಳು, ಪರಿಸರ ಸಂರಕ್ಷಣೆ, ಗೋಶಾಲೆ, ಅನಾಥಾಶ್ರಮ ನಿರ್ವಹಣೆ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಯೋಗ ಶಿಬಿರಗಳು, ಸ್ಥಳೀಯ ಮಾರುಕಟ್ಟೆ ಉತ್ತೇಜನಕ್ಕೆ ಸುಪರ್ ಬಜಾರ್ ನಿರ್ಮಾಣದಂತಹ ಸಾಮಾಜಿಕ ಕಾರ್ಯಗಳನ್ನು ಸಂಘಟಿಸುವ ಮೂಲಕ ಮುರುಗೇಶ ನಿರಾಣಿ ಸಶಕ್ತ ಸಮಾಜ ನಿರ್ಮಾಣದ ಕಡೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ಎಲ್ಲ ಕಾರ್ಯಗಳಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ತೊಡಗಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ