ಪ್ರಗತಿವಾಹಿನಿ ಸುದ್ದಿ; ಹಾವೇರಿ: ಕೊರೊನಾ ಭೀತಿ ನಡುವೆ ರಾಜ್ಯದಲ್ಲಿ ನಕಲಿ ಬಿತ್ತನೆ ಬೀಜದ ಹಾವಳಿ ಹೆಚ್ಚಿದ್ದು, ಈ ನಡುವೆ ನಕಲಿ ಬೀಜ ಸಂಗ್ರಹ ಮಾಡಿ ಇಟ್ಟಿದ್ದವರ ಮೇಲೆ ಕ್ರಮ ಕೈಗೊಳ್ಳದಂತೆ ಕೆಲವು ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಒತ್ತಡ ಹೇರುತ್ತಿದ್ದಾರೆ. ಆದರೆ ನಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬಿತ್ತನೆ ಬೀಜ ಸಂಗ್ರಹ ಮಾಡಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಒಂದು 1 ಲಕ್ಷದ 685 ಕ್ವಿಂಟಲ್ ನಕಲಿ ಬಿತ್ತನೆ ಬೀಜವನ್ನು ಜಪ್ತಿ ಮಾಡಲಾಗಿದೆ. ಆದರೆ ಪೊಲೀಸ್ ಇಲಾಖೆ ಈವರೆಗೂ ಒಬ್ಬ ಆರೋಪಿಯನ್ನೂ ಬಂಧನ ಮಾಡಿಲ್ಲ. ಇದು ಬೇಸರದ ಸಂಗತಿ. ಕೆಲವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಒತ್ತಡ ಹೇರುತ್ತಿದ್ದಾರೆ. . ಒತ್ತಡಕ್ಕೆ ಮಣಿದರೆ ರೈತರ ಪರಿಸ್ಥಿತಿ ತಾಯಿಯೇ ಮಗನಿಗೆ ವಿಷ ಹಾಕಿದಂತಾಗುತ್ತದೆ ಎಂದರು.
ನಕಲಿ ಬೀಜ ಸಂಗ್ರಹ ಮಾಡಿದ್ದವರು ಮತ್ತು ನಕಲಿ ಬೀಜ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಜೈಲಿಗೆ ಅಟ್ಟುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಅವಧಿ ಮೀರಿದ ರಸಗೊಬ್ಬರ ಮಾರಾಟ ಮಾಡೋದು ಕಂಡುಬಂದರೆ ಅಂಥಾ ಅಂಗಡಿಗಳ ಲೈಸನ್ಸ್ ರದ್ದು ಮಾಡುವುದಾಗಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ