ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲಾಕ್ ಡೌನ್ ಹಿನ್ನಲೆಯಲ್ಲಿ ಜಾರ್ಖಂಡ್‍ನ ತನ್ನ ಗ್ರಾಮಕ್ಕೆ ನಡೆದೇ ಹೋಗುತ್ತಿದ್ದ ಕಾರ್ಮಿಕನೊಬ್ಬ ರಸ್ತೆಯಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ಬಾಬಾಲಾಲ್ ಸಿಂಗ್(45) ಮೃತ ವ್ಯಕ್ತಿ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ತಂಡವು ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿತ್ತು. ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ 13 ಜನ ಕಾರ್ಮಿಕರು ವಾಹನ ಹಾಗೂ ರೈಲ್ವೆ ವ್ಯವಸ್ಥೆ ಇಲ್ಲದ ಕಾರಣ ಮೇ 5ರಂದು ನಡೆದುಕೊಂಡು ಜಾರ್ಖಂಡ್‍ಗೆ ಹೋಗಲು ತೀರ್ಮಾನಿಸಿ ಖಾನಾಪೂರದಿಂದ ಹೊರಟಿದ್ದರು.
ಚಿಕ್ಕೋಡಿ ಬಳಿ ಪೊಲೀಸರು ಕಾರ್ಮಿಕರನ್ನು ವಿಚಾರಿಸಿ ಆರೋಗ್ಯ ತಪಾಸಣೆಗೆ ಆಸ್ಪತ್ರಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಹೋಗುವ ವೇಳೆಗೆ ಕೂಲಿ ಕಾರ್ಮಿಕ ಬಾಬಾಲಾಲ್ ಸಾವನ್ನಪ್ಪಿದ್ದಾರೆ. ಖಾನಾಪೂರದಿಂದ ಚಿಕ್ಕೋಡಿಯವರೆಗೆ ಊಟ-ನೀರು ಇಲ್ಲದೇ ನಡೆದು ಸುಸ್ತಾದ ಕಾರಣ ಮೃತಪಟ್ಟಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಹಲವು ಅನುಮಾನ ಮತ್ತು ಆತಂಕಗಳಿಗೆ ಕೂಲಿ ಕಾರ್ಮಿಕನ ಸಾವು ಎಡೆ ಮಾಡಿಕೊಟ್ಟಿದ್ದು, ಚಿಕ್ಕೋಡಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ