ಇಂದಿಗೂ ರಾಮಾಯಣ ಪ್ರಸ್ತುತವೇ? -ಭಾಗ 2

(ಭಾಗ 2)

ನೀತಾ ರಾವ್

ಅಂದು ರಾಮಾಯಣ ನೋಡಿದಾಗ ಈಗಾಗಲೇ ಹೇಳಿದಂತೆ ನಾನು ಇನ್ನೂ ಕಾಲೇಜು ಕನ್ಯೆಯಾಗಿದ್ದೆ. ಜೀವನದ ಕುಲುಮೆಯಲ್ಲಿ ಬೆಂದಿರಲಿಲ್ಲ, ಸಂಸಾರವೆಂಬೋ ಸಾಗರದ ಉಬ್ಬರವಿಳಿತಗಳ ಅರಿವಿರಲಿಲ್ಲ. ಮಧ್ಯೆ ಮಧ್ಯೆ ಕಂಗೆಡಿಸುವ ಬಿರುಗಾಳಿ, ಸುಂಟರಗಾಳಿ, ಗುಡುಗು ಸಿಡಿಲುಗಳ ಪರಿಚಯ ಅಷ್ಟಾಗಿ ಆಗಿರಲಿಲ್ಲ.
ಇಂದು ಅದೇ ರಾಮಾಯಣವನ್ನು ನೋಡುವಾಗ ನನಗೆ ಜೀವನದ ಅನೇಕ ಅನುಭವಗಳಾಗಿವೆ, ಸಿಹಿಕಹಿ, ಎರಡೂ, ಅದಕ್ಕೆ ಉಪ್ಪು, ಖಾರ, ಹುಳಿ ಇವುಗಳನ್ನೂ ಸೇರಿಸಿ. ಹಾಗೆ ನೋಡಿದರೆ ರಾಮಾಯಣವನ್ನು ಅತಿ ಸಣ್ಣ ವಯಸ್ಸಿನಲ್ಲೇ ಓದಿದ ಖ್ಯಾತಿ ನಮ್ಮದು. ಬಹುಷಃ ಎರಡನೇ ಅಥವಾ ಮೂರನೇ ಕ್ಲಾಸಿನಲ್ಲಿರುವಾಗಲೇ ಸಂಪೂರ್ಣ ರಾಮಾಯಣ ಎನ್ನುವ ಪುಸ್ತಕವನ್ನೋದಿ ನಾನು, ನನ್ನಕ್ಕ ಅದರಿಂದ ತುಂಬಾ ಪ್ರಭಾವಿತರಾಗಿದ್ದೆವು.

ಅದರಲ್ಲಿ ಪ್ರಿಂಟಾಗಿದ್ದ ರಾಮ-ಲಕ್ಷ್ಮಣರು ವಿಶ್ವಾಮಿತ್ರರ ಯಜ್ಞದಲ್ಲಿ ರಾಕ್ಷಸರನ್ನು ಸಂಹರಿಸಿದ ಚಿತ್ರ, ರಾಮನು‌ ಶಿವಧನುಸ್ಸನ್ನು ಮುರಿದ ಚಿತ್ರ, ಪಂಚವಟಿಯ ತಮ್ಮ ಗುಡಿಸಲ ಮುಂದೆ ಸೀತೆಯು ಮಾಯಾಮೃಗವನ್ನು ನೋಡುತ್ತಿರುವ ಚಿತ್ರ, ಸೀತೆಯು ಲವ-ಕುಶರಿಗೆ ಬಿಲ್ವಿದ್ಯೆಯನ್ನು ಕಲಿಸುತ್ತಿರುವ ಚಿತ್ರ ಇವೆಲ್ಲ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಂತೆ ಯಾವತ್ತೂ ನೆನಪಿನಲ್ಲಿವೆ. ಚಿಕ್ಕಂದಿನಲ್ಲಿ ರಾಮಾಯಣದ ಕಥೆ ಅದೇಕೆ ಅಷ್ಟೊಂದು ರುಚಿಸಿತ್ತೋ ಗೊತ್ತಿಲ್ಲ, ನಾವು ಎರಡು, ಮೂರು ಸಲ ಅದೇ ಪುಸ್ತಕವನ್ನು ಓದಿದ್ದೆವು.
ನಂತರ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣವನ್ನೂ ನೋಡಿದೆವು. ಎಷ್ಟು ಸುಲಭವಾಗಿ ರಾಮ, ಲಕ್ಷ್ಮಣರು ಸೀತೆಯೊಡನೆ ಹದಿನಾಲ್ಕು ವರ್ಷ ವನವಾಸಕ್ಕೆ ಹೋದರು ಎಂದು ಹೇಳಿಬಿಡುತ್ತಿದ್ದೆವು. ನಮಗೆಲ್ಲ ಅದು ಕೇವಲ ಒಂದು ವಾಕ್ಯದ ದೂರದಲ್ಲಿ ಮುಗಿಯುವ ಸಮಯವಾಗಿತ್ತು. ಆದರೆ ಹದಿನಾಲ್ಕು ವರ್ಷಗಳೆಂದರೆ ಐದು ಸಾವಿರಕ್ಕಿಂತಲೂ ಹೆಚ್ಚು ದಿನ ಮತ್ತು ರಾತ್ರಿಗಳು, ಅವುಗಳ ಮಧ್ಯೆ ನೂರಾರು ಹುಣ್ಣಿಮೆ ಮತ್ತು ಅಮಾವಾಸ್ಯೆ ಗಳು. (ಅದು ಈ ಲಾಕ್ ಡೌನ್ ಸಂದರ್ಭದಲ್ಲಿ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತಿದೆ.)

ಹುಟ್ಟಿನಿಂದ ರಾಜಕುಮಾರರಾದ ರಾಮ-ಲಕ್ಷ್ಮಣರು ಮತ್ತು ಅಷ್ಟೇ ಸುಕೋಮಲೆಯಾದ ರಾಜಕುವರಿ ಸೀತೆ, ತಮ್ಮೆಲ್ಲ ರಾಜ ಉಡುಗೆಗಳನ್ನು ತ್ಯಜಿಸಿ ನಾರು ಬಟ್ಟೆಗಳನ್ನುಟ್ಟು ಬರಿಗಾಲಿನಿಂದ ವನ-ವನಗಳನ್ನು ತಿರುಗುತ್ತಾರಲ್ಲಾ, ಅದೆಷ್ಟು ಘೋರವಾಗಿರಬಹುದು ಎಂದು ಇವತ್ತಿಗೆ ಅನಿಸುತ್ತದೆ.
ಮಕ್ಕಳ ಮೇಲಿನ ಮೋಹ ಕೆಲವರನ್ನು ನ್ಯಾಯ-ನೀತಿಗಳಿಗೆ ಸಂಪೂರ್ಣ ಕುರುಡರನ್ನಾಗಿಸುತ್ತದೆ. ಕೈಕೆಯಿಗೆ ಆದದ್ದೂ ಅದೇ. ತನ್ನ ಮಗ ಭರತನು ಅಯೋಧ್ಯೆಯನ್ನಾಳಬೇಕೆಂಬ ಅವಳ ಲೋಭ ಇಡೀ ರಾಜಮನೆತನವನ್ನೇ ಹಾಳು ಮಾಡುತ್ತದೆ. ಆಕೆ ತನ್ನ ಮಗನಿಗೆ ಪಟ್ಟ ಕಟ್ಟಲು ದಶರಥನನ್ನು ಕೇಳಿಕೊಂಡು ಅಲ್ಲಿಗೇ ಬಿಡಬಹುದಿತ್ತು.

ಆದರೆ ಅವಳಿಗೆ ಶ್ರೀರಾಮಚಂದ್ರನ ಪ್ರಭಾವಳಿಯ ಬಗ್ಗೆ ಹೆದರಿಕೆ. ದಶರಥನ ರಾಮಪ್ರೇಮದ ಬಗ್ಗೆ ಅಸಹನೆ. ಅಯೋಧ್ಯಾವಾಸಿಗಳು ರಾಮನೇ ತಮ್ಮ ರಾಜನಾಗಬೇಕೆಂದು ಪಟ್ಟುಹಿಡಿದರೆ ಕಷ್ಟ ಎನ್ನುವ ದೂರಾಲೋಚನೆ. ಇನ್ಮೂ ಏನೇನು ಕಾರಣಗಳೋ? ಅಂತೂ ಅವಳು ರಾಮನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕೆಂದು ಪಟ್ಟು ಹಿಡಿದು ಕುಳಿತಳು. ರಾಜನಿಗೆ ಧರ್ಮಸಂಕಟ! ಕೊಟ್ಟ ವಚನವನ್ನು ಪಾಲಿಸದೇ ವಚನಭ್ರಷ್ಟನಾಗಬೇಕೇ, ವಚನವನ್ನು ಪಾಲಿಸುವುದಕ್ಕಾಗಿ ಪ್ರೀತಿಯ ಪುತ್ರ, ಪ್ರಜೆಗಳ ಕಣ್ಮಣಿ, ಎಲ್ಲರೊಳಗೆ ಶ್ರೇಷ್ಠ ರಾಜಕುಮಾರ ರಾಮನನ್ನು ಕಾಡಿಗಟ್ಟಬೇಕೇ?

ಇಂದಿನ ಸನ್ನಿವೇಶದಲ್ಲಿ ಚಿಂತಿಸಿದರೆ, ಅಷ್ಟೇ ಏಕೆ ದ್ವಾಪರದ ಕೃಷ್ಣನ ದೃಷ್ಟಿಯಿಂದ ಯೋಚಿಸಿದರೂ ಬಹುಜನರ ಹಿತದೃಷ್ಟಿಯಿಂದ, ರಾಜ್ಯದ ಏಳ್ಗೆಗಾಗಿ ಕೈಕೈಯನ್ನು ಸೆರೆಮನೆಗೆ ತಳ್ಳಿ ರಾಮನನ್ನೇ ರಾಜನನ್ನಾಗಿ ಮಾಡಬೇಕಿತ್ತು. ಆದರೆ ಹಾಗಾಗಲಿಲ್ಲ. ವಿಷಯ ತಿಳಿದ ರಾಮನು ತಂದೆಯ ವಚನವನ್ನುಳಿಸಲು ಕಾಡಿಗೆ ಹೋಗಲು ನಗುನಗುತ್ತ ತಯಾರಾದ. “ಇಷ್ಟು ಸಣ್ಣ ವಿಷಯಕ್ಕೆ ಇಷ್ಟೊಂದು ದೊಡ್ಡ ರಗಳೆಯೇಕೆ?” ಎನ್ನುತ್ತ ಇದು ತನಗೊದಗಿದ ಭಾಗ್ಯವೇ ಎಂದ.

ನಾಡನ್ನು ತೊರೆದು ಕಾಡುಗಳಲ್ಲಿ ಕುಟಿರ ಕಟ್ಟಿಕೊಂಡು ಯಜ್ಞಯಾಗಾದಿಗಳನ್ನು ಮಾಡುತ್ತ, ಅಧ್ಯಯನ ನಿರತ, ಜ್ಞಾನಿಗಳಾದ ಋಷಿಮುನಿಗಳ ದರ್ಶನಭಾಗ್ಯ ತನ್ನದಾಗುವುದೆಂದು ತಂದೆಗೇ ಸಮಾಧಾನ ಹೇಳಿದ. ಎಷ್ಟೇ ಆದರೂ ಸತ್ಯ ಹರಿಶ್ಚಂದ್ರನ ವಂಶದವನಲ್ಲವೇ? ಮಾತು, ವಚನಗಳು ಅವನಿಗೆ ಮುಖ್ಯವಾದವು. ಮುಂದೆ ದ್ವಾಪರ ಯುಗದಲ್ಲೂ ಭೀಷ್ಮನಿಗೆ ತಾನು ಮಾಡಿದ ಭೀಷ್ಮ ಪ್ರತಿಜ್ಞೆಯೇ ಮುಖ್ಯವಾಗುವುದನ್ನು ನಾವು ಕಾಣುತ್ತೇವೆ. ಸತ್ಯ ಹರಿಶ್ಚಂದ್ರನು ವಿಶ್ವಾಮಿತ್ರರಿಗೆ ತನ್ನ ರಾಜ್ಯವನ್ನೇ ಧಾರೆಯೆರೆದು ಹೋಗುವಾಗ “ಪುರದ ಪುಣ್ಯಂ ಪುರುಷರೂಪದಿ ಪೋಗುತಿದೆ” ಎಂದು ವರ್ಣಿಸಿದ್ದಾರೆ.

ಇಲ್ಲಿ ರಾಮನು ಹೊರಟಾಗಲೂ ಅದೇ ಆಯಿತು. ರಾಮನೇ ಇಲ್ಲದ ಅರಮನೆಯಲ್ಲಿ ಇರಲಾದೀತೇ ಅವನ ಅರ್ಧಾಂಗಿ ಸೀತೆಗೆ? ನೀನಿಲ್ಲದ ಮನೆಯಲ್ಲಿ ನಾನು ಅನುಕ್ಷಣವೂ ಇರಲಾರೆನೆಂದು ಅವಳೂ ಹೊರಟು ನಿಂತಳು. ಅಣ್ಣನನ್ನು ಬಿಟ್ಟಿರಲಾರದ ತಮ್ಮ ಲಕ್ಷ್ಮಣನೂ ಅವರೊಡನೆ ಹೊರಟ. ಒಳ್ಳೆಯ ಮನುಷ್ಯನ ಜೊತೆ ಇರಲು ಎಲ್ಲರೂ ಇಷ್ಟಪಡುತ್ತಾರೆ. ಅವರ ಸಾನಿಧ್ಯವೇ ತಮ್ಮ ಸೌಭಾಗ್ಯವೆಂದು ತಿಳಿಯುತ್ತಾರೆ. ರಾಜ ವೈಭೋಗಗಳಿಗಿಂತ ರಾಮನ‌ ಸಾನಿಧ್ಯವು ಹೆಚ್ಚು ಸುಖವನ್ನೂ, ಸಮಾಧಾನವನ್ನೂ ಕೊಡುವಂತಹುದು.

ಹಾಗಾಗಿಯೇ ಪುರಜನರು ಕೂಡ ಅವನನ್ನು ಬಿಟ್ಟಿರಲಾರದೇ ಅವನ ರಥದ ಹಿಂದೆಹಿಂದೆ ಹೋಗುತ್ತಾರೆ. ಕೊನೆಗೆ ಶ್ರೀ ರಾಮನು ಅವರೆಲ್ಲ ದಣಿದು ಮಲಗಿದ ರಾತ್ರಿಯ ಹೊತ್ತು ಅವರನ್ನು ತೊರೆದು ಮುಂದೆ ಪ್ರಯಾಣ ಬೆಳೆಸಬೇಕಾಗುತ್ತದೆ. ಹಾಗಾದರೆ ರಾಮನನ್ನು ಯಾಕಾಗಿ ಜನಸಾಮಾನ್ಯರು ಕೂಡ ಪ್ರೀತಿಸಿದರು? ಇವತ್ತಿಗೂ ವಿಚಾರ ಮಾಡಬೇಕಾದ ಪ್ರಶ್ನೆ. ಅವನ ಹುಟ್ಟಿನ ಮೂಲ, ಅವನ ಸ್ಥಾನಮಾನ, ಅವನ ವೈಭೋಗ, ಸಿರಿಸಂಪತ್ತು, ಊಹೂಂ. ಇದಾವುದೂ ಅಲ್ಲ, ಅವನ ಗುಣ, ಅವನ ಜನಾನುರಾಗ, ಅವನ ಧರ್ಮನಿಷ್ಠೆ, ಅವನ ನ್ಯಾಯ ನಿಷ್ಠುರತೆ, ಅವನ ಪ್ರೀತಿ, ಅವನ ಕರ್ತವ್ಯ ಪಾಲನೆ, ಅವನ ಶಿಷ್ಟರಕ್ಷಕ, ದುಷ್ಟ ಶಿಕ್ಷಕ ನಡೆ, ಇವುಗಳು ಅವನನ್ನು ಮರ್ಯಾದಾ ಪುರುಷೋತ್ತಮನನ್ನಾಗಿ ಮಾಡಿದವು. ಎಂಥ ಕಠಿಣ ಪರಿಸ್ಥಿತಿಯಲ್ಲಿಯೂ ಅವನು ತನ್ನ ಮನೋಬಲವನ್ನೂ, ಮಾನಸಿಕ ಸ್ಥಿಮಿತವನ್ನೂ ಕಳೆದುಕೊಳ್ಳಲಿಲ್ಲ.

ಕೈಕೇಯಿಗೆ ಒಂದೇ ಒಂದು ಕಟುಮಾತು ಕೂಡ ಅವನ ಬಾಯಿಂದ ಹೊರಬರಲಿಲ್ಲ. ಹಾಗಾಗಿಯೇ ಅವನು ಹೊರಟುಹೋದ ಮೇಲೆ ದಶರಥನು ಪುತ್ರಶೋಕದಿಂದ ಕೊರಗಿ ಕೊರಗಿ ಸಾವನ್ನಪ್ಪಿದ. ಕೌಸಲ್ಯಾ, ಸುಮಿತ್ರೆ, ಕೈಕೈಯರು ಪುತ್ರವಿಯೋಗದ ಜೊತೆಗೆ ಪತಿವಿಯೋಗದ ದುರಂತವನ್ನನುಭವಿಸಿದರು. ಇಷ್ಟಕ್ಕೆಲ್ಲ ಕಾರಣವಾದ ಕೈಕೈಯ ವರವಾದರೂ ಪೂರ್ಣವಾಯಿತೇ? ತನ್ನ ಪ್ರೀತಿಯ ಅಣ್ಣ ರಾಮನನ್ನು ಕಾಡಿಗಟ್ಟಿದ ತನ್ನ ತಾಯಿಯನ್ನೇ ಭರತನು ತಿರಸ್ಕರಿಸಿಬಿಟ್ಟ. ರಾಜವೈಭವವನ್ನೂ ತ್ಯಜಿಸಿ, ತಾನೂ ಕೂಡ ರಾಮ, ಲಕ್ಷ್ಮಣರಂತೆ ನಾರುಮಡಿಯನುಟ್ಟು ಸನ್ಯಾಸ ಜೀವನ ನಡೆಸಿದ.

ಅಕ್ಷರಷಃ ಊರ ಹೊರಗೆ ಪರ್ಣಕುಟಿರವನ್ನು ಕಟ್ಟಿಕೊಂಡು ತಾನೂ ಅಣ್ಣನ ವನವಾಸದ ಜೀವನವನ್ನೇ ಜೀವಿಸಿದ. ಲಕ್ಷ್ಮಣನ ಮಡದಿ ಊರ್ಮಿಳೆ, ಭರತನ ಹೆಂಡತಿ ಮಾಂಡವಿ ಕೂಡ ವಿಯೋಗದ ದುಃಖದಲ್ಲೇ ದಿನಗಳನ್ನು ದೂಡಿದರು. ಇಡೀ ಅಯೋಧ್ಯೆಯೇ ಕಳಾಹೀನವಾಗಿ ಕುಸಿದುಹೋಯ್ತು.
ಒಂದೇ ಒಂದು ಕೆಟ್ಟ ನಡತೆ, ನಡೆಯಿಂದಾಗಿ ಎಂತಹ ಅನಾಹುತಗಳಾದವು! ಶ್ರೀರಾಮನು ವಿಷ್ಣುವಿನ ಅವತಾರ, ರಾವಣನನ್ನು ಸಂಹರಿಸಲೆಂದೇ ಭೂಲೋಕದಲ್ಲಿ ಮಾನವನಾಗಿ ಜನಿಸಿದವನು ಎಂಬೆಲ್ಲ ಪೂರ್ವಕಥೆ ಗೊತ್ತಿದ್ದರೂ ಸಧ್ಯದ ಕಥೆಯ ದುರಂತಗಳನ್ನು, ದುಃಖಗಳನ್ನು (ಅವು ಪೂರ್ವನಿಯೋಜಿತವೆಂದು ತಿಳಿದು) ಅನುಭವಿಸದೇ ಬಿಡಲಾಗುವುದಿಲ್ಲ ನಮಗೆ.
ಸುಮಾರು ಏಳು ಸಾವಿರ ವರ್ಷಗಳ ಹಿಂದೆ ನಡೆದಿದೆ ಎನ್ನುವ (ಅದು ಕೇವಲ ಕಾವ್ಯ, ಪುರಾಣ ಎಂದೆಲ್ಲ ಜನರನ್ನು ನಂಬಿಸುವ ಸಾಕಷ್ಟು ಪ್ರಯತ್ನಗಳಾಗಿವೆ.

ಆದರೆ ರಾಮಾಯಣ ನಡೆದ ಸ್ಥಳಗಳೂ, ನದಿಗಳೂ, ಊರುಗಳೂ, ಕುರುಹುಗಳೂ ಇವತ್ತಿಗೂ ನಮ್ಮ ಕಣ್ಣಮುಂದಿವೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು) ಈ ಮಹಾನ್ ಕಥೆ ನಮಗೆ ಯಾವ ಸಂದೇಶವನ್ನು ನೀಡುತ್ತದೆ? ನಮ್ಮ ಬದುಕಿಗೆ ಏನು ಸಹಾಯ ಮಾಡುತ್ತದೆ? ಯಾಕೆ ಜನರು ಇವತ್ತಿಗೂ ಕೂಡ ಭಕ್ತಿಯಿಂದ ರಾಮಾಯಣವನ್ನು ನೋಡಿದರು? ಇನ್ನೂ ಯಾಕೆ ರಾಮಾಯಣ ಓದುತ್ತಾರೆ? ಅದರ ವಿಶ್ಲೇಷಣೆ, ವಿಚಾರ, ಚರ್ಚೆಗಳು ಯಾಕಾಗಿ ಜನರನ್ನು ಸೆಳೆಯುತ್ತವೆ? ಎಲ್ಲಾ ಭಾಷೆಗಳಲ್ಲಿಯೂ ರಾಮಾಯಣ ಬರೆಯಲ್ಪಟ್ಟಿದೆ, ಮಹಾಕವಿಗಳಿಂದ, ಮೇಧಾವಿಗಳಿಂದ, ದಾರ್ಶನಿಕರಿಂದ, ಭಕ್ತರಿಂದ. ದಾಸರು, ಸಂತರು ಸಾವಿರಾರು ಹಾಡುಗಳನ್ನು ರಚಿಸಿದ್ದಾರೆ.

ಮರಾಠಿಯಲ್ಲಿ ಗೀತ ರಾಮಾಯಣವನ್ನು ಬರೆದು ಗ. ದಿ. ಮಾಡಗುಳಕರ ಅವರು ಪ್ರಸಿದ್ಧರಾದರು. ಅವೇ ಗೀತೆಗಳನ್ನು ಕನ್ನಡಕ್ಕೆ ಅನುವಾದಿಸಿ ಶ್ರೀನಿವಾಸ ತೋಫಖಾನೆಯವರು ಕೂಡ ಮನೆಮಾತಾದರು. ಹಾಡಿದ ಸುಧೀರ ಫಡ್ಕೆ (ಮರಾಠಿ) ಮತ್ತು ರಾಮದಾಸ ಕಾಮತ (ಕನ್ನಡ) ಕೂಡ ಅಷ್ಟೇ ಪ್ರಸಿದ್ಧರಾದರು. ಹಾಗಾದರೆ ಇಷ್ಟೆಲ್ಲ ಮಹತ್ವ ಯಾಕಾಗಿ ಮತ್ತು ‌ಹೇಗೆ ಈ ರಾಮಾಯಣಕ್ಕೆ ಪ್ರಾಪ್ತವಾಯ್ತು? ಹಾಗೆ ನೋಡಿದರೆ ಅದನ್ನು ಸಾಂಪ್ರದಾಯಿಕವಾಗಿ ಶಾಲೆ-ಕಾಲೇಜುಗಳಲ್ಲಿ ಕಲಿಸುವ ಸಣ್ಣ ಪ್ರಯತ್ನವನ್ನೂ ಸರಕಾರ ಎಂದೂ ಮಾಡಲಿಲ್ಲ.

ಆದರೂ ಜನ ಓದಿದರು, ನೋಡಿದರು, ಹಾಡಿದರು, ಮತ್ತು ತಮ್ಮ ಮುಂದಿನ ಪೀಳಿಗೆಗೆ ಈ ರಾಮಾಯಣ ಪ್ರೀತಿಯನ್ನು ದಾಟಿಸುತ್ತ ನಡೆದರು. ಏಕೆಂದರೆ ಅದರಲ್ಲಿ ಶ್ರೇಷ್ಠ ಜೀವನ ಮೌಲ್ಯಗಳಿವೆ, ಜೀವನ ದರ್ಶನವಿದೆ. ಅಪಾರವಾದ ಪ್ರೀತಿಯಿದೆ, ಭಕ್ತಿಯ ಪರಾಕಾಷ್ಠೆಯಿದೆ. ಮನುಷ್ಯನ ಕುಟಿಲ ಬುದ್ಧಿಯಿಂದಾಗುವ ದುಷ್ಪರಿಣಾಮಗಳ ಪಾಠವಿದೆ, ಪುತ್ರಮೋಹದ ದುರಂತವಿದೆ, ಮತ್ತು ಇವೆಲ್ಲದರ ಜೊತೆಗೆ ಅದಕ್ಕೊಂದು ಎಂದೂ ಬರಿದಾಗದ ಪಾವಿತ್ರ್ಯವಿದೆ.

ಒಂದೇ ಒಂದು ಸಲ ಯೋಚಿಸಿ, ಕೇವಲ ನಾಲ್ಕು ‌ನೂರು, ಐದು ನೂರು ವರ್ಷಗಳ ಹಿಂದೆ ಜಗತ್ತಿನ ಅನೇಕ ದೇಶಗಳಲ್ಲಿ ರಾಜರು ಅತ್ಯಂತ ಅನಾಗರಿಕ ದರ್ಪ, ದೌರ್ಜನ್ಯಗಳನ್ನು ಮೆರೆಯುತ್ತ ಜನಸಾಮಾನ್ಯರನ್ನು ಪಶುಗಳಿಗಿಂತ ಕೀಳಾಗಿ ನಡೆಸಿಕೊಂಡ ಉದಾಹರಣೆಗಳಿವೆ. ಎರಡನೇ ಮಹಾಯುದ್ಧಕ್ಕಿಂತ ಮೊದಲು ಹಿಟ್ಲರ್ ನಡೆಸಿದ ಮಾರಣಹೋಮದ ಬಗ್ಗೆಯಂತೂ ತಿಳಿಯದ ಜನರೇ ಇಲ್ಲ. ಇಂಥ ಕ್ರೂರ ನವ್ಯ ಇತಿಹಾಸವನ್ನು ನಮ್ಮ ಏಳು ಸಾವಿರ ವರ್ಷಗಳ ಪ್ರಾಚೀನ ಇತಿಹಾಸದ ಕಾಲಕ್ಕೆ, ಅಂದಿನ ಜೀವನ ದರ್ಶನಗಳಿಗೆ ಹೋಲಿಸಿ ನೋಡಿ. ರಾಮಾಯಣವು ಜಗತ್ತಿಗೆ ಏನು ನೀಡಿದೆ ಎಂಬುದು ನಿಧಾನಕ್ಕೆ ಅರಿವಿಗೆ ಬರುತ್ತಾ ಹೋಗುತ್ತದೆ. ಪ್ರತಿ ಸಲ ವಿಚಾರ ಮಾಡಿದಾಗಲೂ ಬೇರೆ ಬೇರೆ ಅರ್ಥಗಳು ಹೊಳೆಯುತ್ತವೆ. ನಮ್ಮ ವಯಸ್ಸು ಮಾಗಿದಂತೆಲ್ಲ ನಮ್ಮ ಅರಿವಿನ ಪರಿಧಿಯೂ ವೃದ್ಧಿಸುತ್ತ ಹೋಗುತ್ತದೆ.

ಅದಕ್ಕಾಗಿಯೇ ನಾನು ಬರೆಯುತ್ತಿದ್ದೇನೆ, ನೀವು ಕೂಡ ಓದುತ್ತಿದ್ದೀರಿ.

(ಮುಂದುವರೆಯುತ್ತದೆ)

ಭಾಗ 1 -ಓದದವರು ಇಲ್ಲಿ ಕ್ಲಿಕ್ಕಿಸಿ – ಅಂದಿನ ರಾಮಾಯಣ ಇಂದು ನೋಡಿದಾಗ….

———————————————————————————————————

ಸಂಬಂಧಿಸಿದ ಸುದ್ದಿ –

ಮತ್ತೆ ದಾಖಲೆ ನಿರ್ಮಿಸಿದ ರಾಮಾಯಣ

 

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಕಳಿಸಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button