ಪ್ರಗತಿವಾಹಿನಿ ಸುದ್ದಿ; ಧಾರವಾಡ: 13 ಗುಂಟೆ ಜಾಗದ ವಿಚಾರವಾಗಿ ಸಹೋದರರೇ ವಿಕಲಚೇತನ ವ್ಯಕ್ತಿಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಜಿಲ್ಲೆಯ ಕಮಲಾಪುರ ಬಡಾವಣೆಯಲ್ಲಿ ನಡೆದ ವಿಕಲಚೇತನ ವ್ಯಕ್ತಿಯ ಕೊಲೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಕಲಚೇತನ ವ್ಯಕ್ತಿ ಉಮೇಶ ಬಾಳಗಿಯನ್ನು ಆತನ ಸಹೋದರರಾದ ಚೆನ್ನಪ್ಪ ಬಾಳಗಿ(23) ಮತ್ತು ಬಸಪ್ಪ ಬಾಳಗಿ (20) ರಸ್ತೆ ಮಧ್ಯೆಯೇ ಭೀಕರವಾಗಿ ಹತ್ಯೆಗೈದಿದ್ದರು.
ಹಲವಾರು ವರ್ಷಗಳಿಂದ ಎರಡೂ ಕುಟುಂಬದ ನಡುವೆ 13 ಗುಂಟೆ ಜಾಗದ ವಿಚಾರವಾಗಿ ಜಗಳ ನಡೆಯುತ್ತಿತ್ತು. ಮೇ.15 ರಂದು ಪತ್ನಿ ಜಯೆ ಮನೆಯಿಂದ ಹೊರಗೆ ಹೋಗುತ್ತಿದ್ದ ಉಮೇಶನ ಜತೆ ಇಬ್ಬರು ಅಣ್ಣಂದಿರು ಕ್ಯಾತೆತೆಗೆದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ತಮ್ಮನ ಮೇಲೆ ಹಲ್ಲೆ ನಡೆಸಿ ಹಾರೆ ಹಾಗೂ ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದಾರೆ. ಈ ವೇಳೆ ಕೂಗಿಕೊಳ್ಳಲು ಮುಂದಾದ ಉಮೇಶನ ಪತ್ನಿ ಉಮಾಳ ಮೇಲೆ ಹಲ್ಲೆ ಮಾಡಲು ಇಬ್ಬರೂ ಓಡಿ ಬಂದಾಗ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಆಕೆ ಬಚಾವ್ ಆಗಿದ್ದಾಳೆ. ಈ ಎಲ್ಲ ದೃಶ್ಯಗಳು ಕೊಲೆಯಾದ ಉಮೇಶನ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ಪೊಲೀಸರ ಕೈ ಸೇರಿದೆ.
ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಮಾ ಒಟ್ಟು 7 ಜನರು ಸೇರಿ ತನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾಳೆ. ಆದರೆ, ಕ್ಯಾಮರಾದಲ್ಲಿ ಇಬ್ಬರು ಕೊಲೆ ಮಾಡಿರುವುದು ಮಾತ್ರ ಸೆರೆಯಾಗಿದೆ. ಡಿವಿ ಆರ್ ವಶ ಪಡೆಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ