Latest

ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಧ್ಯಕ್ಕಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಕ್ಷ ನೀಡಿದ ತಕ್ಷಣ ಅಧಿಕಾರ ಸ್ವೀಕಾರ ಕೂಡ ಮಾಡದೇ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಕೊರೋನಾ ಸಮಯದಲ್ಲಿ ಕಾರ್ಯಕರ್ತರ ಜೊತೆ ಕೆಲಸ ಮಾಡುತ್ತಿದ್ದೇನೆ. ಹಲವಾರು ತಾಲೂಕುಗಳಿಗೆ ಭೇಟಿ ಕೊಟ್ಟು ರೈತರ ಸಮಸ್ಯೆ ಆಲಿಸಿದ್ದೇನೆ ಎಂದು ಕೆಪಿಸಿಸಿ ಅದಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಮೇ 31ರಂದು ಕೆಪಿಸಿಸಿ ಅಧ್ಯಕ್ಷ ಅಧಿಕಾರ ಸ್ವೀಕಾರದ ಬಗ್ಗೆ ವರದಿಯಾಗಿತ್ತು. ಆದರೆ ಅಂದು‌ ಭಾನುವಾರ. ಕಂಪ್ಲೀಟ್ ಲಾಕ್ ಡೌನ್ ಘೋಷಿಸಲಾಗಿದೆ. ಹಾಗಾಗಿ ಸರ್ಕಾರದ ಕಾನೂನು ಗೌರವಿಸುತ್ತೇನೆ. ಆದ್ದರಿಂದ ಇನ್ನೊಂದು ದಿನಾಂಕ ನಿಗದಿಗೊಳಿಸಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದರು.

ಅಧಿಕಾರ ಪದಗ್ರಹಣ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾತನಾಡಿದ ಡಿಕೆಶಿ, ರಾಜ್ಯದ ಉದ್ದಗಲಕ್ಕೂ 7200 ಕಡೆ ಈ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದ್ದೇವೆ. ಗ್ರಾಮ ಪಂಚಾಯತಿಯಿಂದ ನಗರದ ಎಲ್ಲಾ ಕಡೆ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಎಲ್ಲಾ ಕಡೆ ಎರಡು ಟಿವಿ ವ್ಯವಸ್ಥೆ ಇರುತ್ತೆ. ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆ ಓದುತ್ತೇವೆ. ಅದನ್ನು ರಾಜ್ಯದ ಮೂಲೆ ಮೂಲೆಗೂ ತಲುಪುವಂತೆ ಮಾಡುತ್ತೇವೆ ಎಂದು ಹೇಳಿದರು.

ಕೋವಿಡ್ ವಿಚಾರದಲ್ಲಿ ಇಡೀ ಸರ್ಕಾರ ಪ್ರಾರಂಭದಿಂದ ಇಲ್ಲಿಯವರೆಗೆ ರೈತರ ಬಳಿ ಹೋಗಿಲ್ಲ. ವಲಸೆ ಕಾರ್ಮಿಕರ ಬಳಿ ಹೋಗಿಲ್ಲ, ಅವರನ್ನು ಉಳಿಸಿಕೊಳ್ಳಲು ಅಗಿಲ್ಲ. ಆಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. 20 ಲಕ್ಷ ಕೋಟಿ ಬಿಡುಗಡೆ ಮಾಡಿದ್ದಾರೆ. ಅದು ಲೆಕ್ಕ ಹಾಕಿದರೆ ಕೇವಲ 2 ಲಕ್ಷ ಕೋಟಿ ಮಾತ್ರ ಸರ್ಕಾರದ ಹೊರೆ. ಉಳಿದ ಹಣ ಸಾಲದ ಮೂಲಕ ಹಣ ಕೊಡಲು ಮಾರ್ಗಸೂಚಿ ಸಿದ್ಧ ಮಾಡಿದ್ದಾರೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.

ಮೋದಿ ಸರ್ಕಾರ ಸಾಲ ಕೊಟ್ಟು ಸಾಲಗಾರರನ್ನಾಗಿ ಮಾಡಲು ಮುಂದಾಗಿದೆ. ಜನರಿಗೆ ನೇರವಾಗಿ ಸಹಕಾರ ಮಾಡಿದರೆ ಚೆನ್ನಾಗಿತ್ತು. ಈ ಘೋಷಣೆಗಳಿಂದ‌ ಜನಸಾಮಾನ್ಯರಿಗೆ ಅನುಕೂಲ ಇಲ್ಲ. ಸಿಎಂ 1610 ಕೋಟಿ ಪ್ಯಾಕೇಜ್ ಮಾಡಿದರು. 50 ದಿನ ಆದ್ರೂ ಒಬ್ಬರಿಗೆ ಒಂದು ರೂಪಾಯಿ ಕೊಟ್ಟಿಲ್ಲ. ಪೀಣ್ಯದಲ್ಲಿ ಲಕ್ಷಾಂತರ ಕಾರ್ಮಿಕರು ಇದ್ದಾರೆ. ಆದರೆ ಅವರಿಗೆ ಕೇವಲ 3 ಸಾವಿರ ಕಿಟ್ ವಿತರಿಸಿ ಬಿಜೆಪಿ ಕಾರ್ಯಕರ್ತರು ದುರುಪಯೋಗ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button