ಪ್ರಗತಿವಾಹಿನಿ ಸುದ್ದಿ; ಉಡುಪಿ: ಲಾಕ್ ಡೌನ್ ಹಿನ್ನಲೆಯಲ್ಲಿ ದೇವಸ್ಥಾನಗಳ ಬಾಗಿಲು ಮುಚ್ಚಲಾಗಿದ್ದು, ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೆಲ ದೇವಾಲಗಳಲ್ಲಿ ಆನ್ ಲೈನ್ ಸೇವೆಗೆ ಅವಕಾಶ ನೀಡಿದೆ. ಈ ಹಿನ್ನಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಈಗಾಗಲೇ ಭಕ್ತರಿಗೆ ಆನ್ ಲೈನ್ ಪೂಜೆಗೆ ಬುಕ್ ಮಾಡಲು ಅವಕಾಶ ನೀಡಲಾಗಿದ್ದು, ಇದರ ಬೆನ್ನಲ್ಲೇ ಕೋಟ ಅಮೃತೇಶ್ವರಿ, ಮಂದಾರ್ತಿ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಕೂಡ ಇದೀಗ ಆನ್ ಲೈನ್ ಸೇವೆ ಆರಂಭವಾಗಿದೆ.
ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ಆನ್ಲೈನ್ ಪೂಜೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮುಜರಾಯಿ ಇಲಾಖೆಯಿಂದ ಉಡುಪಿ ಜಿಲ್ಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ, ಕೋಟಾ ಅಮೃತೇಶ್ವರಿ ಹಾಗೂ ಮಂದಾರ್ತಿ ದುರ್ಗಾ ಪರಮೇಶ್ವರಿ ಈ ಮೂರು ದೇವಸ್ಥಾನಗಳಿಗೆ ಅವಕಾಶ ನೀಡಲಾಗಿದೆ.
ಜೂನ್ 1 ರಿಂದ ನಮ್ಮಲ್ಲಿ ಆನ್ಲೈನ್ ಪೂಜೆ ಆರಂಭವಾಗಲಿದೆ ಎಂದು ಕೋಟ ಅಮೃತೇಶ್ವರಿ ದೇವಸ್ಥಾನ ಮಾಹಿತಿ ನೀಡಿದೆ. ಕೋಟ ಅಮೃತೇಶ್ವರಿ ದೇವರಿಗೆ ವಿಶೇಷ ಅಭಿಷೇಕ ಬೆಳಗ್ಗೆ ಸಂಪನ್ನವಾಗುತ್ತದೆ. ಅಲಂಕಾರ ಪೂಜೆ, ಮಂಗಳಾರತಿ ನಡೆಸಿ ಲಾಕ್ ಡೌನ್ ಸಂದರ್ಭದಲ್ಲಿ ಬಾಗಿಲು ಮುಚ್ಚುತ್ತಿದ್ದರು, ಜೂನ್ 1 ರಿಂದ ದೇವಸ್ಥಾನ ತೆರೆಯಲಿದ್ದು, ಭಕ್ತರಿಗೆ ದರ್ಶನ ಅವಕಾಶ ಸಿಗಲಿದೆ.
ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ಆರಂಭವಾಗಿದೆ. ಭಕ್ತರು ಆನ್ಲೈನ್ ಮೂಲಕ ಪೂಜೆ ಬುಕ್ ಮಾಡಬಹುದು. ಸರ್ಕಾರದ ನಿಯಮದಂತೆ ಪೂಜೆ ನಡೆಸುತ್ತೇವೆ. ಜೂನ್ 1ರಿಂದ ಭಕ್ತರಿಗೆ ನೇರ ದರ್ಶನ ಅವಕಾಶವಿದೆ ಎಂದು ಮಂದರ್ತಿ ದೇವಸ್ಥಾನ ಧರ್ಮದರ್ಶಿ ಧನಂಜಯ ಶೆಟ್ಟಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ